ಬಿಡದಿ ಟೌನ್ಶಿಪ್ ಯೋಜನೆ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪಕ್ಕದ ಭೂಮಿಗೆ ಬಂತು ಬಂಗಾರದ ಬೆಲೆ
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಬಿಡದಿಯಲ್ಲಿ ಒಟ್ಟು ಸುಮಾರು 900 ಎಕರೆ ಪ್ರದೇಶದಲ್ಲಿ ಸರ್ಕಾರದ ನಿರ್ಧರಿಸಿರುವ ಬೃಹತ್ ಟೌನ್ಶಿಪ್ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದರ ವಿರುದ್ಧ ಪ್ರತಿಭಟನೆಗಳು ಒಂದು ಕಡೆಯಾದರೆ, ಇನ್ನೊಂದೆಡೆ ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣು ಇಲ್ಲಿನ ಭೂಮಿ ಮೇಲೆ ಬಿದ್ದಿದೆ. ಚದರ ಅಡಿ ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ಈ ಭಾಗದ ಭೂಮಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇದೊಂದಿಗೆ ಹೊಂದಿಕೊಂಡಿರುವ ಬಿಡದಿಯಲ್ಲಿ 18000 ಕೋಟಿ ರೂಪಾಯಿ ಬೃಹತ್ ಟೌನ್ಶಿಪ್ ಯೋಜನೆಯನ್ನು ಸರ್ಕಾರ ಪ್ರಸ್ತಾಪಿಸಿದೆ.ಸ ರೈತರು 7,481 ಎಕರೆಗಳ ಬೃಹತ್ ಟೌನ್ಶಿಪ್ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಫಲವತ್ತಾದ ಕೃಷಿ ಭೂಮಿ ಮತ್ತು ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂಬುದು ಅವರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಭೂಮಿಗೆ ಬಂಗಾರದ ಬೆಲೆ
ಯೋಜನೆ ಇನ್ನೂ ಪ್ರಸ್ತಾವಿತ ಹಂತದಲ್ಲಿರುವಾಗಲೇ ರಿಯಲ್ ಎಸ್ಟೇಟ್ ಉದ್ಯಮಿಗಳು ಈ ಜಾಗದಲ್ಲಿ ಸಕ್ರಿಯವಾಗಲು ಆರಂಭಿಸಿದ್ದಾರೆ. ಬಿಡದಿ, ಹೊಸೂರು, ಭೈರಮಂಗಲ ಮತ್ತು ಹೊಸೂರು ವ್ಯಾಪ್ತಿಯಲ್ಲಿ ಭೂಮಿಗೆ ಕೋಟ್ಯಾಂತರ ನೀಡಿ ಖರೀದಿಸಲು ಮುಂದೆ ಬರುತ್ತಿದ್ದಾರೆ. ಭೂಮಿ ಬೆಲೆ ಕುರಿತು ನಿತ್ಯ ರೈತರನ್ನು, ಭೂಮಿ ಮಾಲೀಕರನ್ನು ದಲ್ಲಾಳಿಗಳು ವಿಚಾರಿಸುತ್ತಿದ್ದಾರೆ.
ಪ್ರತಿ ಚದರ ಮೀಟರ್ ಭೂಮಿಗೆ ಭರ್ಜರಿ ಏರಿಕೆ
ಇಲ್ಲಿನ ವರ್ಷಗಳ ಹಿಂದೆ ಒಂದು ಚದರ ಅಡಿಗೆ 2,000 ರೂ.ಗೆ ಮಾರಾಟವಾಗುತ್ತಿದ್ದ ನಿವೇಶನಗಳು ಈಗ 5,000 ರೂ.ಗಿಂತ ಹೆಚ್ಚು ಬೆಲೆಯಲ್ಲಿ ಮಾರಾಟವಾಗುತ್ತಿವೆ. ರೈತರ ಭೂಮಿಗಳು ಇನ್ನೂ ಕೃಷಿ ಭೂಮಿ ಅಂತಲೇ ನಮೂದಾಗಿದ್ದು, ನಗರ ನಿರ್ಮಾಣವಾಗಿಸಲು (ಎನ್ಎ) ಪರಿವರ್ತನೆ ಮಾಡಿಲ್ಲ. ಈಗ ಕೇಳಿ ಬರುತ್ತಿರುವ ಮಾರಾಟ ದರಗಳು ಸಂಭಾವ್ಯ ದರ ಎನ್ನಬಹುದು. ಟೌನ್ಶಿಪ್ ಜಾರಿಗೆ ಮುಂದಾದಲ್ಲಿ, ಕೃಷಿ ಭೂಮಿ ಮಾರಾಟವಾದಲ್ಲಿ ಇನ್ನಷ್ಟು ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ನಮ್ಮ ಭೂಮಿಯನ್ನು 5 ಕೋಟಿ ರೂಪಾಯಿಗೆ ಕೇಳಿದ್ದಾರೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.
ಫಲವತ್ತಾದ ಭೂಮಿಗೆ ಕುತ್ತು, ರೈತರಲ್ಲಿ ಆತಂಕ
ಸರ್ಕಾರ ಬಿಡದಿ ಟೌನ್ಶಿಪ್ಗಾಗಿ ಅಧಿಸೂಚನೆ ಬಿಡುಗಡೆ ಮಾಡುವ ತಿಂಗಳು ಮೊದಲೇ ಇಲ್ಲಿ ಸುಮಾರು 586 ಎಕರೆ ಭೂಮಿಯನ್ನು ಮಾರಾಟ ಮಾಡಲಾಗಿದೆ. ಅದರ ಆಧಾರದಲ್ಲಿ ಚದರ ಮೀಟರ್ ಬೆಲೆ ಏರಿಕೆ ಮಾಹಿತಿ ಇಲ್ಲಿ ಕೊಡಲಾಗಿದೆ. ಈ ಭಾಗದ ಬಹುತೇಕ ಎಲ್ಲರು ಕೃಷಿ ಭೂಮಿಯನ್ನು ಅವಲಂಬಿಸಿದ್ದಾರೆ.
ಕಬ್ಬು, ರಾಗಿ, ಮಾವು, ಬಾಳೆ ಇನ್ನಿತರ ಪ್ರಮುಖ ಬೆಳೆಗಳನ್ನು ಬೆಳೆಯುತ್ತಾರೆ. ತೋಟಗಾರಿಕೆ ಇಲ್ಲಿ ಸಂಪದ್ಭರಿತವಾಗಿದೆ. ನಮ್ಮ 4.5 ಎಕರೆ ಜಮೀನಿನಲ್ಲಿ ರೇಷ್ಮೆ, ತೆಂಗು ಮತ್ತು ಬಾಳೆಯನ್ನು ಬೆಳೆದಿದ್ದೇವೆ. ಅದರಿಂದಲೇ ನಮ್ಮ ಜೀವನ ಸಾಗಬೇಕು. ನೀರಿನ ಅನುಕೂಲತೆ ಸಾಕಷ್ಟಿದೆ. ನಮ್ಮ ಸುಂದರ ಜೀವನಕ್ಕೆ ಸರ್ಕಾರದ ಬಿಡಿದಿ ಪ್ರಸ್ತಾವಿತ ಯೋಜನೆ ಹಾನಿ ಮಾಡುತ್ತದೆ ಎಂದು ಸ್ಥಳೀಯ ನಿವಾಸಿ ಮಹೇಶ್ ತಿಳಿಸಿದರು.
ಭೂಸ್ವಾಧೀನ ಪ್ರಕ್ರಿಯೆಗೆ ಅಧಿಸೂಚನೆ ಶೀಘ್ರ, ಪ್ರತಿಭಟನೆ
7,481 ಎಕರೆ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್ (GBIT) ಯೋಜನೆ ತಲೆ ಎತ್ತಲಿದೆ. 2025ರ ಆರಂಭದಲ್ಲೇ ಈ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು. ಇಂದಿಗೂ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಸರ್ಕಾರ ಯೋಜನೆಗಾಗಿ ಅಂತಿಮ ಭೂಸ್ವಾಧೀನ ಅಧಿಸೂಚನೆಗಳು ಹೊರಡುವ ನಿರೀಕ್ಷೆ ಇದೆ ಎನ್ನಲಾಗಿದೆ. ಹೀಗಾದಲ್ಲಿ ಬಿಡದಿ ರೈತರು ಪ್ರತಿಭಟನೆಯನ್ನು ಮತ್ತಷ್ಟು ಚುರುಕುಗೊಳಿಸುವ ಸಾಧ್ಯತೆ ಇದೆ.
ಈ ಭಾಗದ ರೈತರು ಕಳೆದ 434 ದಿನಗಳಿಂದ ಸತತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭೂಸರ್ವೆ ಅಧಿಕಾರಿಗಳನ್ನು ತಡೆದು ನಿಲ್ಲಿಸಿದ್ದಾರೆ. ಯೋಜನಾ ಪ್ರದೇಶಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದಾರೆ. ಪ್ರತಿ ಎಕರೆಗೆ 2.55 ಕೋಟಿ ರೂಪಾಯಿ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನುಗಳ ಪ್ರಸ್ತಾಪಗಳನ್ನು ತಿರಸ್ಕರಿಸಿದ್ದಾರೆ. ಯಾವ ಕಾರಣಕ್ಕೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.














Click it and Unblock the Notifications