Namma Metro: ಚೀನಾ ಅಧಿಕಾರಿಗಳ ವೀಸಾ ಸಮಸ್ಯೆ ಪರಿಹಾರ: ಅಪ್ಡೇಟ್ ಕೊಟ್ಟ ಸಂಸದ
ಬೆಂಗಳೂರು, ಮಾರ್ಚ್ 11: ರಾಜಧಾನಿ ಬೆಂಗಳೂರಿನಲ್ಲಿ ಪ್ರಮುಖ ಐಟಿ ಕೇಂದ್ರ ಪ್ರದೇಶ ಸಂಪರ್ಕಿಸುವ ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line) ದಲ್ಲಿ ಪ್ರಾಯೋಗಿಕ ಸಂಚಾರ ಒಂದು ಪ್ರಮುಖ ಹಂತವಾಗಿದೆ. ಇನ್ನೂ ಚೀನಾ ಅಧಿಕಾರಿಗಳ ವೀಸಾ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಹೇಳಿದರು.
ಇತ್ತೀಚೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BRMCL) ಮೆಟ್ರೋ ಹಳದಿ ರೇಖೆಯಲ್ಲಿ ನಡೆಸಿದ ಮೊದಲ ಹಂತದ ಪರೀಕ್ಷಾರ್ಥ ಪ್ರಾಯೋಗಿಕ ಸಂಚಾರ ಸಂಬಂಧ ಹೆಬ್ಬಗೋಡಿಗೆ ಬೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ಅವರು ಹೊಸ ಡ್ರೈವರ್‌ಲೆಸ್ ಮಟ್ರೋ ಬೋಗಿ ವೀಕ್ಷಿಸಿದರು.

ಬಿಎಂಆರ್‌ಸಿಎಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇದೇ ವೇಳೆ ಬೊಮ್ಮಸಂದ್ರದಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ನಮ್ಮ ಮೆಟ್ರೋದ ಹಳದಿ ಮಾರ್ಗದ ಪ್ರಾಯೋಗಿಕ ಚಾಲನೆಯಲ್ಲಿ ಅವರು ಪಾಲ್ಗೊಂಡರು. ಹಳದಿ ರೇಖೆಯ ಕಾರ್ಯಾಚರಣೆಯ ಪ್ರಯಾಣದಲ್ಲಿ ನಾವು ಒಂದೊಂದು ಹಂತ ದಾಟುತ್ತಿದ್ದೇವೆ, ಇದೀಗ ಪ್ರಾಯೋಗಿಕ ಚಾಲನೆ ಹಂತಕ್ಕೆ ಬಂದಿದ್ದೇವೆ ಎಂದರು.
ಚೀನಾ ಅಧಿಕಾರಿಗಳಿಂದ ಪರೀಕ್ಷಾ ಚಟುವಟಿಕೆ
ಚಾಲಕ ರಹಿತ ಮೆಟ್ರೋ ಬೋಗಿ ಒದಗಿಸಿದ್ದ ಚೀನಾದಿಂದ CRRC ಯ ಇಂಜಿನಿಯರ್‌ಗಳು ಬೆಂಗಳೂರಿಗೆ ಬರುವಾಗ ಆಗಿದ್ದ ಅವರ ವೀಸಾ ಸಮಸ್ಯೆಗಳನ್ನು ಇತ್ತೀಚೆಗೆ ಪರಿಹರಿಸಲಾಗಿದೆ. ಅವರು ಸದ್ಯ ರಾಜಧಾನಿಯಲ್ಲಿ ಮೆಟ್ರೋ ಬೋಗಿಗಳ ಪರೀಕ್ಷಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸಮಾನಾಂತರವಾಗಿ, ನಾವು RDSO (ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ), CMRS (ಮೆಟ್ರೋ ರೈಲ್ವೇ ಸುರಕ್ಷತೆಯ ಕಮಿಷನರ್), ರೈಲ್ವೇ ಬೋರ್ಡ್ ಮತ್ತು ಇತರ ಪ್ರಾಧಿಕಾರಗಳನ್ನು ಒಳಗೊಂಡಿರುವ ಪ್ರಮಾಣೀಕರಣ ಮತ್ತು ಕ್ಲಿಯರೆನ್ಸ್ ಮಾರ್ಗಸೂಚಿಯನ್ನು ರೂಪಿಸಿದ್ದೇವೆ.
ಅನುಮತಿಗಾಗಿ ಮಧ್ಯಪ್ರವೇಶ
ಮುಂದಿನ 4 ತಿಂಗಳುಗಳಲ್ಲಿ, ಆರಂಭಿಕ ತಪಾಸಣೆ ನಡೆಸುವ ಜೊತೆಗೆ ವಾಣಿಜ್ಯ ಕಾರ್ಯಾಚರಣೆಗೆ ಬೇಕಾದ ಅನುಮತಿಗಳನ್ನು ಸುಲಭಗೊಳಿಸಲು ನಾನು ಮಧ್ಯ ಪ್ರವೇಶಿಸುತ್ತೇನೆ. ಈ ಮೂಲಕ ಮಟ್ರೋ ಮಾರ್ಗವು ಆದಷ್ಟು ಬೇಗ ಸಾರ್ವಜನಿಕರಿಗೆ ಮುಕ್ತಗೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ದೇಶದ ಮೊದಲ ಡ್ರೈವರ್‌ಲೆಸ್ ಮಾರ್ಗ
ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗವು ಇದು ಭಾರತದ ಮೊದಲ ಚಾಲಕ ರಹಿತ ಮೆಟ್ರೋ ಮಾರ್ಗವಾಗಿದೆ. ಹಲವಾರು ಹೊಸ ಕಾರ್ಯವಿಧಾನಗಳು ಮುಂದಿವೆ. ಅಧಿಕಾರಿಗಳು ಆರಂಭಿಕ ಕಾರ್ಯಾಚರಣೆಗಳಿಗೆ ಬದ್ಧರಾಗಿದ್ದಾರೆ, ಆದರೆ ಈ ಮಾರ್ಗವನ್ನು ಸಾಧ್ಯವಾದಷ್ಟು ಬೇಗ ಸಾರ್ವಜನಿಕ ಬಳಕೆಗೆ ತೆರೆಯಲು ವಾರಗಳು/ತಿಂಗಳು ಉಳಿಸಲು ನಾನು ಒತ್ತಾಯಿಸುತ್ತಿದ್ದೇನೆ ಎಂದು ಅವರು ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಅವರು ಈ ಹಿಂದೆ ನಮ್ಮ ಮೆಟ್ರೋ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಹಳದಿ ಮಾರ್ಗಕ್ಕೆ ತೆರೆಯಲು ಬೇಕಾದ ಎಲ್ಲ ಕ್ರಮ ಕೈಗೊಳ್ಳಬೇಕು. ಇದು ಬೆಂಗಳೂರಿಗರಿಗೆ ಅತ್ಯವಾದ ಮಾರ್ಗವಾಗಿದ್ದು, ಶೀಘ್ರವೇ ಎಲ್ಲ ಪರೀಕ್ಷೆಗಳನ್ನು ಅಧಿಕಾರಿಗಳು ಪೂರ್ಣಗೊಳಿಸಿ ವಾಣಿಜ್ಯ ಕಾರ್ಯಾಚರಣೆ ಆರಂಭಿಸಬೇಕು ಎಂದು ಆಗ್ರಹಿಸಿದ್ದರು.












Click it and Unblock the Notifications