Double Decker Flyover: ಉದ್ಘಾಟನೆಗೆ ಸಿದ್ಧವಾದ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್, ಏನೆಲ್ಲಾ ಉಪಯೋಗವಾಗಲಿದೆ?
Double Deck Flyover: ದಕ್ಷಿಣ ಭಾರತದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟನೆಗೆ ಸಿದ್ಧವಾಗಿದೆ. ಇದರಿಂದ ಏನೆಲ್ಲಾ ಉಪಯೋಗವಾಗಲಿದೆ, ತಗುಲಿದ ವೆಚ್ಚ ಎಷ್ಟು ಹಾಗೂ ಯಾವಾಗ ಉದ್ಘಟನೆ ಆಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು ಟ್ರಾಫಿಕ್ ಜಾಮ್‌ಗೆ ಹೆಸರುವಾಸಿಯಾಗದ ಬೃಹತ್ ನಗರವಾಗಿದೆ. ಅದರಲ್ಲೂ ನಗರದ ಸಿಲ್ಕ್ ಬೋರ್ಡ್ ಜಂಕ್ಷನ್ ಪ್ಯಾಪ್ತಿಯಲ್ಲಂತೂ ಪ್ರತಿನಿತ್ಯವೂ ವಾಹನ ಸವಾರರು ಟ್ರಾಫಿಕ್ ಜಾಮ್‌ನಿಂದ ಕಿರಿಕಿರಿ ಅನುಭವಿಸುತ್ತಲೇ ಇದ್ದಾರೆ. ಇದೀಗ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಡಬಲ್ ಡೆಕ್ಕರ್ ಫ್ಲೈ ಓವರ್ ಸಿದ್ಧವಾಗಿದೆ.

ದಕ್ಷಿಣ ಬೆಂಗಳೂರಿನ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆಯನ್ನು ನಿಯಂತ್ರಿಸಲು ಇದು ಸಹಕಾರಿಯಾಗಲಿದೆ. 3.36 ಕಿಲೋ ಮೀಟರ್ ಉದ್ದದ ಈ ಫ್ಲೈಓವರ್ ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ಪ್ರಾರಂಭವಾಗಲಿದ್ದು, ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ನಿರ್ಮಾಣ ಮಾಡಲಾಗಿದೆ. ಇದು ಇದೇ ವರ್ಷದ ಡಿಸೆಂಬರ್‌ನಲ್ಲಿ ತೆರೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೇಲ್ಸೇತುವೆ ಒಟ್ಟು ಐದು ರ‍್ಯಾಂಪ್‌ಗಳನ್ನು ಹೊಂದಿರುತ್ತದೆ. ಎರಡು ರ‍್ಯಾಂಪ್‌ಗಳ (ಡಿ ಮತ್ತು ಇ) ಕೆಲಸ ಇನ್ನೂ ನಡೆಯುತ್ತಿದ್ದು, ಮೇ 2025ರಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. 2+2-ಲೇನ್ ಫ್ಲೈಓವರ್ ಸುಗಮ ಸಂಚಾರಕ್ಕೆ ಸಹಾಯ ಆಗಲಿದೆ. ಇದು ಮೂರು ಯೂ ಟರ್ನ್‌ಗಳನ್ನು ಹೊಂದಿರಲಿದ್ದು, ಮೂರು ಮೆಟ್ರೋ ನಿಲ್ದಾಣಗಳು ಮಧ್ಯದಲ್ಲಿವೆ. (ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್), ಆದರೆ ಪ್ರಯಾಣಿಕರು ಅವುಗಳನ್ನು ಫ್ಲೈಓವರ್‌ನಿಂದ ಪ್ರವೇಶಿಸಲು ಸಾಧ್ಯವಿಲ್ಲ.
ಚಿಹ್ನೆಗಳು ಮತ್ತು ರಸ್ತೆ ಗುರುತುಗಳು ಪೂರ್ಣಗೊಂಡಿದ್ದು, ಸಂಚಾರ ಮಾಹಿತಿ ಫಲಕಗಳನ್ನು ಕೂಡ ಅಳವಡಿಸಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ಅನ್ನು ಸಿಗ್ನಲ್ ಮುಕ್ತಗೊಳಿಸುವ ಗುರಿಯನ್ನು ಈ ಫ್ಲೈಓವರ್ ಹೊಂದಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ಹೇಳಿದ್ದಾರೆ. "ಮೆಟ್ರೋ ನಿಲ್ದಾಣಗಳಿಗೆ ಪ್ರವೇಶ ಒದಗಿಸುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ" ಎಂದು ತಿಳಿಸಿದ್ದಾರೆ.
ಭಾರೀ ದಟ್ಟಣೆಯಿಂದಾಗಿ ಡಿ ಮತ್ತು ಇ ಇಳಿಜಾರುಗಳನ್ನು ನಿರ್ಮಿಸುವುದು ಸವಾಲಿನ ಸಂಗತಿಯಾಗಿದೆ ಎಂದು ಚವಾಣ್ ಹೇಳಿದರು. ಕೆಲವು ಪಿಲ್ಲರ್‌ಗಳನ್ನು ನಿರ್ಮಿಸಲಾಗಿದೆ. ಆದರೆ, ನಾವು ಸಾರ್ವಜನಿಕರಿಗೆ ಅನಾನುಕೂಲತೆಯನ್ನು ಕಡಿಮೆ ಮಾಡುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಬಿಎಂಆರ್‌ಸಿಎಲ್‌ನ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಸ್ ಕುಮಾರ್ ಮಾತನಾಡಿ, "ಫ್ಲೈಓವರ್ ಕಾಮಗಾರಿಯು ಸೆಪ್ಟೆಂಬರ್ 2017ರಲ್ಲಿ ಪ್ರಾರಂಭವಾಗಿದ್ದು, ಆಗಿನಿಂದಲೂ ಹಲವಾರು ಸವಾಲುಗಳನ್ನು ಎದುರಿಸಲಾಯಿತು. ವಿಶೇಷವಾಗಿ ಜಯದೇವ ಆಸ್ಪತ್ರೆ ಜಂಕ್ಷನ್‌ನಲ್ಲಿ ಹೆಚ್ಚು ಅಡೆತಡೆಗಳಾದವು," ಎಂದು ಹೇಳಿದರು.
ರಾಗಿಗುಡ್ಡ ಮತ್ತು ಬಿಟಿಎಂ ಲೇಔಟ್‌ನಿಂದ ಹೊಸೂರು ರಸ್ತೆ ಮತ್ತು ಎಚ್‌ಎಸ್‌ಆರ್ ಲೇಔಟ್‌ಗೆ ಈ ಫ್ಲೈಓವರ್ ಬೆಳಗಿನ ಜಾವದ ದಟ್ಟಣೆಯನ್ನು ಕಡಿಮೆ ಮಾಡಲಿದೆ ಎಂದು ಸಹಾಯಕ ಪೊಲೀಸ್ ಕಮಿಷನರ್ ಟಿ.ಮಹದೇವ ಹೇಳಿದರು. ಅಲ್ಲದೆ, ಪ್ರಯಾಣದ ಸಮಯವನ್ನು 30-45 ನಿಮಿಷಗಳಿಂದ 5 ನಿಮಿಷಗಳಿಗೆ ಕಡಿಮೆ ಮಾಡುತ್ತದೆ. ಈ ಮೇಲ್ಸೇತುವೆಯು ಪಶ್ಚಿಮ ಬೆಂಗಳೂರನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದರು .
ಇನ್ನು ಅಪೂರ್ಣವಾದ ಇಳಿಜಾರು ಡಿ ಮತ್ತು ಇ ಎಂದರೆ ಸಂಜೆಯ ರಶ್-ಅವರ್ ಟ್ರಾಫಿಕ್ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ ಮಹದೇವ ಅವರು ಎಚ್ಚರಿಸಿದ್ದಾರೆ. ಹೊಸೂರು ರಸ್ತೆಯಿಂದ ಬರುವ ವಾಹನಗಳು ಬಿಟಿಎಂ ಲೇಔಟ್ ಕಡೆಗೆ ಎಡ ತಿರುವು ಪಡೆದರೆ, ಎಚ್‌ಎಸ್‌ಆರ್ ಲೇಔಟ್‌ನಿಂದ ಸರ್ವಿಸ್ ರಸ್ತೆಯ ಮೂಲಕ ಹೊಸೂರು ರಸ್ತೆಯಲ್ಲಿ ಸಾಗುತ್ತವೆ ಎಂದು ಅವರು ಹೇಳಿದರು.
ಎರಡು ವರ್ಷಗಳ ಹಿಂದೆ ಸಂಚಾರ ಪೊಲೀಸರು ನಡೆಸಿದ ಸಮೀಕ್ಷೆಯಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ಮೂಲಕ ಪ್ರತಿದಿನ ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ 46,000 ವಾಹನಗಳು ಸಂಚರಿಸುತ್ತವೆ ಎಂದು ತಿಳಿದುಬಂದಿತ್ತು. ಇನ್ನು ಅಪಘಾತ ತಡೆಯಲು ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಮೇಲ್ಸೇತುವೆ ಮುಚ್ಚಲು ಸಂಚಾರ ಪೊಲೀಸರು ಚಿಂತನೆ ನಡೆಸಿದ್ದಾರೆ. ರಸ್ತೆ ಅಪಘಾತಗಳು ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡಲು ರಾಂಪ್ ಎ ನ ಕೊನೆಯಲ್ಲಿ ವಾಚ್‌ಟವರ್ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಈ ಹೊಸ ಮೇಲ್ಸೇತುವೆಯಿಂದ ಎಚ್‌ಎಸ್‌ಆರ್ ಲೇಔಟ್‌ನಿಂದ ಮಾರತಹಳ್ಳಿವರೆಗಿನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ತುಂಬಾ ತೊಂದರೆ ಆಗಲಿದೆ ಎಂದು ಪ್ರಯಾಣಿಕ ಕೃಷ್ಣನ್ ಕುಪ್ಪಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.











Click it and Unblock the Notifications