ಮೋದಿ ಮನೆ ಮೇಲೆ ಬಾಂಬ್ ಹಾಕಿ ಎಂದ ಬೆಂಗಳೂರು ಯುವಕ ಅರೆಸ್ಟ್
ಬೆಂಗಳೂರಿನ ಯುವಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಮೇಲೆ ಬಾಂಬ್ ಹಾಕಬೇಕು ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ನವಾಜ್ ಎಂಬ ಯುವಕ ಸೋಶಿಯಲ್ ಮೀಡಿಯಾದಲ್ಲಿ ತನ್ನ ವಿಡಿಯೋ ಪೋಸ್ಟ್ ಮಾಡಿದ್ದ. ಇದರಲ್ಲಿ ಮೋದಿ ಅವರ ಮನೆ ಮೇಲೆ ಬಾಂಬ್ ಹಾಕಬೇಕು ಎಂದೆಲ್ಲ ಹೇಳಿದ್ದ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಂಡೆಪಾಳ್ಯ ಪೊಲೀಸರು ನವಾಜ್‌ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಿದ್ದಾರೆ.
ಇಂಡಿಯಾ-ಪಾಕಿಸ್ತಾನ್ ನಡುವಿನ ಸಂಘರ್ಷದಲ್ಲಿ ಯಾಕೆ ಮೋದಿ ಮನೆ ಮೇಲೆ ಬಾಂಬ್ ಬೀಳುತ್ತಿಲ್ಲ? ಸುಮ್ಮನೆ ಇರುವ ಜನರನ್ನು ಹಾಳು ಮಾಡುತ್ತಿರುವುದು ಮೋದಿ. ಫಸ್ಟ್ ಮೋದಿ ಮನೆಗೆ ಬಾಂಬ್ ಹಾಕಿ ಎಂದು ನವಾಜ್ ವಿಡಿಯೋದಲ್ಲಿ ಅವಾಜ್ ಹಾಕಿದ್ದ. ಮೊದಲೇ ಸೋಶಿಯಲ್ ಮೀಡಿಯಾದಲ್ಲಿ ಕೇಳಬೇಕಾ? ಈ ವಿಡಿಯೋ ವೈರಲ್ ಆದ ಕೂಡಲೇ ಅನೇಕರು ಬೆಂಗಳೂರು ಪೊಲೀಸರಿಗೆ ಇದನ್ನು ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಅದರಂತೆ ಪೊಲೀಸರು ನವಾಜ್‌ನನ್ನ ಬಂಧಿಸಿದ್ದಾರೆ.

ಈ ವಿಡಿಯೋ ಹಂಚಿಕೊಂಡಿದ್ದ ನೆಟ್ಟಿಗರು, ಭಾರತದ ಪ್ರಧಾನಿ ಕೇವಲ ರಾಜಕೀಯ ಪಕ್ಷದ ನಾಯಕರಲ್ಲ, ಅವರು ಸರ್ಕಾರದ ಸಾಂವಿಧಾನಿಕ ಮುಖ್ಯಸ್ಥರು. ವಿಶ್ವ ವೇದಿಕೆಯಲ್ಲಿ ನಮ್ಮ ರಾಷ್ಟ್ರದ ಮುಖವಾಗಿರುವ ಮೋದಿ ಅವರ ಮನೆಯ ಮೇಲೆ ಬಾಂಬ್ ಬೀಳಬೇಕೆಂದು ಬಹಿರಂಗವಾಗಿ ಬಯಸುವುದು ಭಯೋತ್ಪಾದನೆಗೆ ಉತ್ತೇಜನ ನೀಡಿದಂತೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದು ದ್ವೇಷದಲ್ಲಿ ಮುಳುಗಿರುವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಂದ ಸಂಪೂರ್ಣವಾಗಿ ಬೇರ್ಪಟ್ಟಿರುವ ಮನಸ್ಥಿತಿ. ತಮ್ಮ ಸ್ವಂತ ದೇಶದ ನಾಯಕನ ಮೇಲೆ ಬಾಂಬ್ ದಾಳಿಯ ಬಗ್ಗೆ ಯಾವ ರೀತಿಯ ವ್ಯಕ್ತಿ ಊಹಿಸುತ್ತಾನೆ? ಈ ರೀತಿಯ ವಿಕೃತ ಚಿಂತನೆಯು ಯಾರನ್ನಾದರೂ ಅಂತಹ ದ್ವೇಷದ ಮಟ್ಟಕ್ಕೆ ಕರೆದೊಯ್ಯುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ. ಈತನ ಮಾತುಗಳು ಕೇಳಿದರೆ ತಮ್ಮ ದೇಶದ ಬಗ್ಗೆ ಕಾಳಜಿ ಹೊಂದಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಇದು ಕಾನೂನು, ಪ್ರಜಾಪ್ರಭುತ್ವ ಅಥವಾ ಮಾನವೀಯತೆಯ ಬಗ್ಗೆ ಗೌರವವಿಲ್ಲದ ವ್ಯಕ್ತಿಯ ಮಾತುಗಳಾಗಿವೆ. ಅಲ್ಲದೆ ಇದು ದೇಶ ವಿರೋಧಿ ನಡವಳಿಕೆ ಎಂದು ಆರೋಪಿಸಿದ್ದಾರೆ. ಭಾರತವು ಇಂತಹ ವಿಷಕಾರಿ ಭಾಷಣವನ್ನು ಒಂದು ಕ್ಷಣವೂ ಸಹಿಸಬಾರದು ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದಿದ್ದ ಅಘೋಷಿತ ಯುದ್ಧದ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕೆಲವು ನಕಲಿ ಸುದ್ದಿಗಳು ಹಾಗೂ ವಿಡಿಯೋಗಳು ಹರಿದಾಡಿದ್ದವು. ಕೆಲ ಪಾಕಿಸ್ತಾನಿ ಪ್ರಜೆಗಳು ಭಾರತದ ಮೇಲೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಡಿದ್ದರು. ಭಾರತದ ಹಲವು ಪ್ರದೇಶಗಳಲ್ಲಿ ಪಾಕ್ ಧ್ವಂಸ ಮಾಡಿದೆ ಎಂದು ಹೇಳಿಕೊಂಡಿದ್ದರು. ಈ ಎಲ್ಲವನ್ನೂ ದಾಖಲೆ ಸಮೇತ ಸುಳ್ಳು ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿತ್ತು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಬರುವುದೆಲ್ಲವೂ ಸತ್ಯವಲ್ಲ. ಅಧಿಕೃತ ಮಾಹಿತಿ ನೀಡುವವರೆಗೂ ಯಾವುದನ್ನೂ ನಂಬಬೇಡಿ ಎಂದು ಮನವಿ ಮಾಡಿತ್ತು.












Click it and Unblock the Notifications