ಒಳ್ಳೆಯ ಸಂಬಳ, ಉದ್ಯೋಗ ಇದ್ದರೂ ರಾಜೀನಾಮೆ! ಯುವತಿ ಹೇಳಿದ ಮಾತು ವೈರಲ್
ಬೆಂಗಳೂರು: ಉತ್ತಮ ಸಂಬಳದ ಉದ್ಯೋಗ ಸಿಕ್ಕರೆ ಸಾಕು ಎಂದು ಕನಸು ಕಾಣುವ ಯುವಕರ ನಡುವೆ, 22 ವರ್ಷದ ಯುವತಿಯೊಬ್ಬಳು ತಿಂಗಳಿಗೆ ರೂ.60,000 ಸಂಬಳ ನೀಡುತ್ತಿದ್ದ ಕಾರ್ಪೊರೇಟ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸುದ್ದಿಯಾಗಿದ್ದಾಳೆ. ತನ್ನ ನಿರ್ಧಾರದ ಹಿಂದಿನ ಕಾರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಆಕೆಯ ವಿಡಿಯೋ ಈಗ ವೈರಲ್ ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ಮಿನಿ ವ್ಲಾಗ್‌ಗಳನ್ನು ಹಂಚಿಕೊಂಡಿರುವ ದೀಕ್ಷಾ ಎಂಬ ಯುವತಿ, ಕಾಲೇಜು ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆದಿದ್ದಳು. ಇದೇ ಉದ್ಯೋಗದ ಕಾರಣದಿಂದ ದೀಕ್ಷಾ ಬೆಂಗಳೂರಿಗೆ ಬಂದು ವಾಸವಾಗಿದ್ದರು.

ತನ್ನ ವಿಡಿಯೋದಲ್ಲಿ ಮಾತನಾಡಿರುವ ದೀಕ್ಷಾ, ಉದ್ಯೋಗದ ಮೂಲಕ ಉತ್ತಮ ಜನರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು, ಸಾಕಷ್ಟು ಅನುಭವ ಮತ್ತು ಜೀವನ ಪಾಠಗಳನ್ನು ಕಲಿತೆ ಎಂದು ಹೇಳಿದ್ದಾಳೆ. ಆದರೆ ದಿನದಿಂದ ದಿನಕ್ಕೆ ಒಂದೇ ರೀತಿಯ ಜೀವನಶೈಲಿ ತನ್ನನ್ನು ಬೇಸರಗೊಳಿಸುತ್ತಿತ್ತು ಎಂದು ಆಕೆ ವಿವರಿಸಿದ್ದಾಳೆ. "22ನೇ ವಯಸ್ಸಿನಲ್ಲಿ ಫ್ರೆಶರ್ ಆಗಿ ತಿಂಗಳಿಗೆ ರೂ.60,000 ಸಂಬಳ ಪಡೆಯುತ್ತಿದ್ದೆ. ಆದರೆ ಬೆಳಗ್ಗೆಯಿಂದ ರಾತ್ರಿ ತನಕ ಕೆಲಸ ಮಾಡಿ, ಮನೆಗೆ ಬಂದು ಊಟ ಮಾಡಿ, ಮಲಗಿ, ಮತ್ತೆ ಅದೇ ಚಕ್ರವನ್ನು ಮುಂದುವರಿಸುವ ಜೀವನ ನನಗೆ ಇಷ್ಟವಾಗಲಿಲ್ಲ" ಎಂದು ದೀಕ್ಷಾ ಹೇಳಿದ್ದಾರೆ.
ಇದರ ಜೊತೆಗೆ ತನ್ನ ಮ್ಯಾನೇಜರ್ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ದೀಕ್ಷಾ, ಉದ್ಯೋಗಿಗಳ ಮಾತುಗಳನ್ನು ಕೇಳದ ಮೇಲಧಿಕಾರಿಗಳ ಜೊತೆ ಕೆಲಸ ಮಾಡುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಕ್‌ಅಪ್ ಪ್ಲಾನ್ ಇಲ್ಲದೇ ರಾಜೀನಾಮೆ
ಅತ್ಯಂತ ಗಮನ ಸೆಳೆದ ವಿಷಯವೆಂದರೆ, ಉದ್ಯೋಗ ಬಿಟ್ಟ ಬಳಿಕ ತನ್ನ ಬಳಿ ಯಾವುದೇ ಬ್ಯಾಕ್‌ಅಪ್ ಪ್ಲಾನ್ ಇಲ್ಲ ಎಂದು ದೀಕ್ಷಾ ಬಹಿರಂಗವಾಗಿ ಒಪ್ಪಿಕೊಂಡಿದ್ದಾಳೆ. "ನನ್ನ ಮುಂದಿನ ಗುರಿ ಏನು ಎಂಬುದು ನನಗೆ ಸ್ಪಷ್ಟವಾಗಿಲ್ಲ. ಆದರೆ ಜೀವನಪೂರ್ತಿ ಒಂದೇ ಸ್ಥಳದಲ್ಲಿ ಸಿಲುಕಿಕೊಂಡು ಬದುಕಲು ನನಗೆ ಇಷ್ಟವಿಲ್ಲ " ಎಂದು ದೀಕ್ಷಾ ಹೇಳಿದ್ದಾರೆ.
ಈ ಹಂತವನ್ನು ದೀಕ್ಷಾ ತನ್ನ "Unemployment Era" ಎಂದು ಕರೆಯುತ್ತಿದ್ದು, ಯುವ ವಯಸ್ಸಿನಲ್ಲಿರುವಾಗಲೇ ಹೊಸ ಅವಕಾಶಗಳನ್ನು ಹುಡುಕುವ ಸಾಹಸಕ್ಕೆ ಮುಂದಾಗಿದ್ದೇನೆ ಎಂದು ಹೇಳಿದ್ದಾರೆ. "ಯೋಜನೆಗಳು ಯಶಸ್ವಿಯಾಗದಿದ್ದರೂ ಮತ್ತೆ ಪ್ರಯತ್ನವನ್ನು ಮಾಡಬಹುದು" ಎಂಬ ಆತ್ಮವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾಳೆ.
ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ದೀಕ್ಷಾ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹಲವರು ಉದ್ಯೋಗದ ಒತ್ತಡ, ಕಟ್ಟುನಿಟ್ಟಾದ ಮ್ಯಾನೇಜರ್‌ಗಳು ಮತ್ತು ನಿರಂತರ ದಿನಚರಿಯಿಂದ ಆಗುವ ಮಾನಸಿಕ ಆಯಾಸದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕೆಲವರು ಮಾನಸಿಕ ನೆಮ್ಮದಿ ಮತ್ತು ವೈಯಕ್ತಿಕ ಸಂತೋಷವು ಸಂಬಳಕ್ಕಿಂತ ಮುಖ್ಯ ಎಂದು ಹೇಳಿ ದೀಕ್ಷಾರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಮತ್ತೊಂದೆಡೆ, ಯಾವುದೇ ಪರ್ಯಾಯ ಯೋಜನೆ ಇಲ್ಲದೇ ಉದ್ಯೋಗ ತೊರೆಯುವುದು ತುಂಬಾ ಅಪಾಯಕಾರಿ ನಿರ್ಧಾರ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಬಹುತೇಕರು ದೀಕ್ಷಾರವರ ಧೈರ್ಯವನ್ನು ಮೆಚ್ಚಿಕೊಂಡಿದ್ದು, ಜೀವನದಲ್ಲಿ ಹೊಸ ದಾರಿಯನ್ನು ಹುಡುಕುವ ಇವರ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.
ಡಿಸ್ಕ್ಲೈಮರ್: ಈ ಲೇಖನವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಮಾಹಿತಿ ಮತ್ತು ವರದಿಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಲೇಖನದಲ್ಲಿರುವ ಅಭಿಪ್ರಾಯಗಳು ಸಂಬಂಧಿತ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯಗಳಾಗಿವೆ.














Click it and Unblock the Notifications