Bengaluru Weather: ನಗರದಲ್ಲಿಂದು ವಿವಿಧೆಡೆ ಧಾರಾಕಾರ ಮಳೆ: ಸೆ.07ರವರೆಗೆ ಜೋರು ಮಳೆ ಮುನ್ಸೂಚನೆ
Bengaluru Rain Alert: ಈ ವರ್ಷದ ಮುಂಗಾರು ಋತುವಿನ ಕೊನೆಯ ತಿಂಗಳಾದ ಸೆಪ್ಟಂಬರ್ ಆರಂಭದಲ್ಲಿ ಮಳೆ ಮತ್ತೆ ಆರ್ಭಟ ಶುರುವಿಟ್ಟುಕೊಂಡಿದೆ. ಇಂದು ಬುಧವಾರ ಸಹ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಮುಂದುವರಿದಿದೆ. ಮಧ್ಯಾಹ್ನದಿಂದಲೇ ನಗರಾದ್ಯಂತ ವ್ಯಾಪಕ ಮಳೆ ಆಗಿದೆ. ಆರ್‌ಆರ್.ನಗರ, ಕೆಂಗೇರಿ, ಬಾನಸವಾಡಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಜೋರು ಮಳೆ ಸುರಿದಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಬಂದ ಮಳೆಗೆ ಜನ ಸಂಚಾರಕ್ಕೆ ಸಮಸ್ಯೆ ಆಯಿತು. ವಾಹನಗಳ ದಟ್ಟಣೆ ಕಂಡು ಬಂತು.
ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಹಾಗೂ ಒಡಿಶಾ ಕರಾವಳಿ ಸಮೀಪ ಚಂಡಮಾರುತ ಪ್ರಸರಣ ಉಂಟಾಗಿದೆ. ಈ ಭಾಗದಿಂದ ಕರ್ನಾಟಕದ ಮೇಲೆ ಬಿರುಗಾಳಿ ಬೀಸುತ್ತಿದೆ. ಪ್ರಭಾವದಿಂದಾಗಿ ಬೆಂಗಳೂರಿನಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಆಗುತ್ತಿದೆ. ಕಳೆದೊಂದು ವಾರದಿಂದಲೂ ಸುರಿಯುತ್ತಿರುವ ಈ ಮಳೆ ಮುಂದಿನ ಒಂದು ವಾರ ಕಾಲ ಮುಂದುವರಿಯುವುದಾಗಿ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.

ಇಂದು ಬೆಳಗ್ಗೆ ಎಂದಿನಂತೆ ವಾತಾವರಣ ಕಂಡು ಬಂತು. ಬಿಸಿಲಿನ ವಾತಾವರಣ ಸಹ ಇತ್ತು. ಮಧ್ಯಾಹ್ನ ಹೊತ್ತಿಗೆಗಾಗಿ ಅನೇಕ ಕಡೆಗಳಲ್ಲಿ ಜೋರು ಮಳೆ ದಾಖಲಾಯಿತು. ಸಂಜೆ ನಂತರ ಆರ್‌ಆರ್.ನಗರ ಮತ್ತು ಕೆಂಗೇರಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಮಾತ್ರವಲ್ಲದೇ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ, ಗೊಟ್ಟಿಗೇರೆ, ವಿ.ನಾಗೇನಹಳ್ಳಿ, ಆರ್.ಆರ್.ನಗರ, ರಿಚ್ಮಂಡ್ ರಸ್ತೆ, ಎಂಜಿ ರಸ್ತೆ, ಕೆ.ಆರ್.ಪುರಂ, ಗುರುಡಾಚಾರ್ ಪಾಳ್ಯ, ಶೆಟ್ಟಿಹಳ್ಳಿ, ರಾಜಾಜಿನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಉತ್ತಮ ಮಳೆ ಆಗಿದೆ.
ತಗ್ಗು ಪ್ರದೇಶಗಳಲ್ಲಿ ಮಳೆ ನೀರು, ತಡರಾತ್ರಿವರೆಗೆ ಮಳೆ..!
ಆರ್‌ಆರ್‌ನಗರ, ನಾಯಂಡಹಳ್ಳಿ, ಕೆ.ಆರ್, ಮಾರುಕಟ್ಟೆ, ಲಾಲ್ ಬಾಗ್, ಟೌನ್‌ಹಾಲ್, ರಾಜಾಜಿನಗರ ರಸ್ತೆಗಳ ಮೇಲೆ ನೀರು ನಿಂತುಕೊಂಡಿತ್ತು. ರಸ್ತೆ ಅಂಡರ್‌ಪಾಸ್‌ಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಸಿತು. ಟ್ರಾಫಿಕ್ ಸಿಗ್ನಲ್‌ಗಳಲ್ಲಿ ದಟ್ಟಣೆ ಉಂಟಾಯಿತು. ಈ ವೇಳೆ ಗಾಳಿಯ ವೇಗದ ಹೆಚ್ಚಾಗಿದ್ದು, ಚಳಿ ಹೆಚ್ಚಾಗಿದೆ. ತಡರಾತ್ರಿವರೆಗೂ ಮಳೆ ಮುಂದುವರಿಯುವ ಲಕ್ಷಣ ಇದೆ.
ಇಂದು ಎಲ್ಲೆಲ್ಲಿ ಎಷ್ಟಾಗಿದೆ ಮಳೆ
ಆರ್‌ಆರ್ ನಗರ ಕೆಂಗೇರಿ ಭಾಗದಲ್ಲಿ 35 ಮಿಲಿ ಮೀಟರ್, ಗೊಟ್ಟಿಗೆರೆ 32 ಮಿ.ಮೀ., ವಿ.ನಾಗೇನಹಳ್ಳಿ 29.5 ಮಿ.ಮೀ., ಹೆಮ್ಮಿಗೆಪುರ 24 ಮಿ.ಮೀ. ಬಾಣಸವಾಡಿ 27 ಮಿ.ಮೀ., ಹೆಮ್ಮಿಗೆಪುರ 2 ನಲ್ಲಿ 24.5ಮಿ.ಮೀ., ದೊರೆಸಾನಿಪಾಳ್ಯ 24 ಮಿ.ಮೀ., ಎಚ್.ಗೊಳ್ಳಹಳ್ಳಿ 23 ಮಿ.ಮೀ., ಹಂಪಿನಗರ 23 ಮಿ.ಮೀ., ಅಂಜನಾಪುರ 21 ಮಿ.ಮೀ., ಅರಕೆರೆ 21 ಮಿ.ಮೀ., ಗರುಡಾಚಾರಪಾಳ್ಯ 20.50 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಕುಶಾಲನಗರ, ಬಿಳೇಕಹಳ್ಳಿ, ಕಾಡುಗೋಡಿ, ಚಾಮರಾಜಪೇಟೆ, ದೊಡ್ಡಬಿದರಕಲ್ಲು, ಹೊರಮಾವು ಸೇರಿದಂತೆ ಅನೇಕ ಕಡೆಗಳಲ್ಲಿ ಜಿಟಿ ಜಿಟಿ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಬೆಂಗಳೂರಿಗೆ ಮುನ್ಸೂಚನೆ ಏನಿದೆ ?
ಸೆಪ್ಟಂಬರ್ 04ರಂದು ಸಾಮಾನ್ಯವಾಗಿ ಮೋಡ ಕವಿದ ವಾತಾವರಣ, ಕಂಡು ಬರಲಿದ್ದು, ಹೆಚ್ಚಿನ ಮಳೆ ನಿರೀಕ್ಷೆ ಇದೆ. ಅಷ್ಟು ಮಾತ್ರವಲ್ಲದೆ ಸೆಪ್ಟಂಬರ್ 07ರವರೆಗೆ ಬೆಂಗಳೂರಿನಾದ್ಯಂತ ತುಂತುರು ಮಳೆ ಆಗಬಹುದು. ಗರಿಷ್ಠ ತಾಪಮಾನ 27 ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications