BREAKING: ಮಳೆಗೆ BWSSB ಪಂಪಿಂಗ್ ಸ್ಟೇಷನ್ ಸ್ಥಗಿತ: ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ!
ಬೆಂಗಳೂರು, ಅಕ್ಟೋಬರ್ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಸಂಜೆಯಿಂದಲೇ ಜೋರು ಮಳೆ ಆಗಿದೆ. ಹಾರೋಹಳ್ಳಿ ಮತ್ತು ಟಿಕೆ ಹಳ್ಳಿ, ಸೇರಿದಂತೆ ಅನೇಕ ಕಡೆಗಳಲ್ಲಿ ಗಾಳಿ ಸಹಿತ ವ್ಯಾಪಕ ಮಳೆ ಆಗಿದೆ. ಇದರ ಪರಿಣಾಮ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್ ಕಡಿತಗೊಂಡು ಸಮಸ್ಯೆ ಉಂಟಾಗಿದೆ. ಹೀಗಾಗಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕಾವೇರಿ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಗುರುವಾರ ಮಾಹಿತಿ ನೀಡಿದೆ.
ಈ ಕುರಿತು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಅವರು ಪ್ರತಿಕ್ರಿಯಿಸಿದ್ದಾರೆ. ನೆನ್ನೆ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಹಾಗೂ ಸಿಡಿಲಿನ ಹೊಡೆತದಿಂದ ಹಾರೋಹಳ್ಳಿ ಹಾಗೂ ಟಿ.ಕೆ ಹಳ್ಳಿ ವ್ಯಾಪ್ತಿಯಲ್ಲಿನ ಕೆಪಿಟಿಸಿಎಲ್ ಟ್ರಾನ್ಸಫಾರ್ಮರ್ ಗಳಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಜೋರು ಮಳೆಯಿಂದಾಗಿ ಬೆಂಗಳೂರಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಮಾಡಲು ಇರುವ ಪ್ರಮುಖ ಪಂಪಿಂಗ್ ಸ್ಟೇಷನ್ ಗಳಿಗೆ ವಿದ್ಯುತ್ ಸರಬರಾಜು ಮಾಡುವ ಲೈನ್ ಗಳಿಗೆ ಹಾನಿ ಆಗಿದೆ. ಬುಧವಾರ ರಾತ್ರಿ ರಾತ್ರಿ 11 ಗಂಟೆಯಿಂದ BWSSBಯ ಮುಖ್ಯ ಪಂಪಿಂಗ್ ಸ್ಟೇಷನ್ ಗಳಾದ ಟಿ.ಕೆ ಹಳ್ಳಿ ಹಾಗೂ ಹಾರೋಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಸಮಸ್ಯೆ ಆಗಿದೆ ಎಂದರು ಅವರು ವಿವರಿಸಿದರು.
ವಿದ್ಯುತ್ ಲೈನ್, ತಾಂತ್ರಿಕ ಸಮಸ್ಯೆ ನಿವಾರಣೆಗೆ ಕ್ರಮ
ವಿದ್ಯುತ್ ಸಂಪರ್ಕ ಇಲ್ಲದೆ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಪಂಪಿಂಗ್ ಸ್ಟೇಷನ್ ಗಳು ಸ್ಥಗಿತಗೊಂಡಿವೆ. ತ್ವರಿತಗತಿಯಲ್ಲಿ ವಿದ್ಯುತ್ ಪೂರೈಕೆಗೆ, ವಿದ್ಯತ್ ಲೈನ್ ಮರುಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಮರು ಸ್ಥಾಪನೆ ಆಗುವವರೆಗೂ ಬೆಂಗಳೂರು ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ಕೆಪಿಟಿಸಿಎಲ್ ವತಿಯಿಂದ ಕಡಿತಗೊಂಡ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ರಿಪೇರಿ ಆದ ನಂತರವೇ ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಯಾಥಾಸ್ಥಿತಿಗೆ ಮರಳಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದ್ಯ ಬೆಂಗಳೂರಿನ ಹಾರೋಹಳ್ಳಿ ಮತ್ತು ಟಿ.ಕೆ ಹಳ್ಳಿಯ ಪಂಪಿಂಗ್ ಸ್ಟೇಷನ್‌ನಿಂದ ಯಾವೆಲ್ಲ ಬಡಾವಣೆಗಳಿಗೆ ನೀರು ಸರಬರಾಜು ಆಗುತ್ತದೋ ಆ ಎಲ್ಲ ಬಡಾವಣೆಗಳಲ್ಲಿ ತಾತ್ಕಾಲಿಕವಾ ನೀರು ಪೂರೈಕೆ ನಿಲ್ಲಲಿದೆ.












Click it and Unblock the Notifications