Bengaluru Water Crisis: ಕಾರ್ ವಾಷ್ ಮಾಡಬೇಡಿ, ಬಿಸಾಡುವ ತಟ್ಟೆ, ವೆಟ್ ವೈಪ್ಸ್ ಬಳಸಿ; ಹೊಸ ರೂಲ್ಸ್!
ಬೆಂಗಳೂರು, ಮಾರ್ಚ್ 07: ಫೆಬ್ರವರಿ ಕೊನೆಯಿಂದ ರಾಜ್ಯದಲ್ಲಿ ಅಸಾಧಾರಣ ಬಿಸಿಲಿದೆ. ಇದರ ಮಧ್ಯೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ಹೆಚ್ಚಾಗಿದೆ. ಟ್ಯಾಂಕರ್‌ಗಳ ಮೂಲಕ ನೀರಿನ ಹಾಹಾಕಾರಕ್ಕೆ ಕಡಿವಾಣ ಹಾಕಲು ಯತ್ನಿಸುತ್ತಿದ್ದರೂ ಕೂಡ ಇದು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ನಿವಾಸಿ ಕಲ್ಯಾಣ ಸಂಘಗಳು (RWAs) ಹೊಸ ರೂಲ್ಸ್‌ಗಳನ್ನು ಜಾರಿಗೆ ತಂದಿವೆ.
ಹೌದು... ನೀರಿನ ಬಿಕ್ಕಟ್ಟು ಎದುರಿಸಲು ಕಷ್ಟಪಡುತ್ತಿರುವ ನಿವಾಸಿ ಕಲ್ಯಾಣ ಸಂಘಗಳು (RWAs) ನೀರನ್ನು ಸಂರಕ್ಷಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿರುವವರಿಗೆ ಸೂಚನೆ ನೀಡಿದೆ. ಹೊಸ ಹೊಸ ಪರಿಹಾರಗಳು, ನೀರನ್ನು ಕಡಿಮೆ ಬಳಸುವಂತೆ ಮಾಡುವ ಪ್ಲ್ಯಾನ್‌ಗಳನ್ನು ನಿವಾಸಿಗಳ ಮೇಲೆ ಹಾಕುತ್ತಿದೆ. ಇದು ಭಾರಿ ವಿವಾದಕ್ಕೆ ಕಾರಣ ಕೂಡ ಆಗಿದೆ.

ನೀರಿನ ಪಡಿತರೀಕರಣ ಮತ್ತು ನಿಷೇಧಗಳು
ನೀರಿನ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಪರಿಹರಿಸಲು, ನಗರದಾದ್ಯಂತ ಆರ್‌ಡಬ್ಲೂಎಗಳಿಂದ ನೀರಿನ ಪಡಿತರವನ್ನು ಪ್ರಾರಂಭಿಸಲಾಗಿದೆ. ಜೊತೆಗೆ ವಾಹನ ತೊಳೆಯುವುದು ಮತ್ತು ಈಜುಕೊಳದ ಬಳಕೆಯಂತಹ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದೆ. ನೀರು ವ್ಯರ್ಥವಾಗುವುದನ್ನು ತಡೆಯುವುದು ಮತ್ತು ನಿವಾಸಿಗಳಿಗೆ ನ್ಯಾಯಯುತ ವಿತರಣೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿದೆ ಎಂದು ಈ ಸಂಘಗಳು ಹೇಳಿವೆ.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ (ಪಿಎಫ್‌ಸಿ) ಅಪಾರ್ಟ್‌ಮೆಂಟ್, ವೈಯಕ್ತಿಕ ನೈರ್ಮಲ್ಯ ಮತ್ತು ಊಟ, ತಿಂಡಿಗೆ ನೀರು ಅವಲಂಬಿತ ವಿಧಾನಗಳಿಗೆ ಪರ್ಯಾಯವಾಗಿ ಬಳಸಿ ಬಿಸಾಡಬಹುದಾದ ತಟ್ಟೆ, ಲೋಟಗಳು ಮತ್ತು ವೆಟ್ ವೈಪ್‌ಗಳನ್ನು ಬಳಸಬೇಕು ಎಂದು ಸೂಚನೆ ನೀಡಿದೆ.

ನೀರಿನ ಬಿಕ್ಕಟ್ಟಿನ ಸಮಯದಲ್ಲಿ ಇದು ಅವಶ್ಯಕ ಎಂದು ಒತ್ತಿ ಹೇಳಿದೆ. ಈ ಹಿಂದೆ ಅಪಾರ್ಟ್‌ಮೆಂಟ್‌ಗಳು ನೀರು ಪೂರೈಕೆಗೆ ಖಾಸಗಿ ಟ್ಯಾಂಕರ್‌ಗಳನ್ನೇ ನೆಚ್ಚಿಕೊಂಡಿದ್ದೆವು. ಆದರೆ, ಈಗ ಟ್ಯಾಂಕರ್ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಮಾರ್ಗಗಳನ್ನು ಹುಡುಕುತ್ತಿವೆ.
ಆರ್‌ಡಬ್ಲೂಎಗಳ ರೂಲ್ಸ್‌ಗೆ ನೆಟ್ಟಿಗರ ಪ್ರತಿಕ್ರಿಯೆ
ಆರ್‌ಡಬ್ಲೂಎಗಳ ಈ ನಿಯಮಗಳು ಅಪಾರ್ಟ್‌ಮೆಂಟ್ ನಿವಾಸಿಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ಸಕತ್ ಚರ್ಚೆ ನಡೆಯುತ್ತಿದೆ. "ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ನಿವಾಸಿಗಳು ಬಳಸಿ ಬಿಸಾಡಬಹುದಾದ ಪ್ಲೇಟ್‌ಗಳು ಮತ್ತು ಕಪ್‌ಗಳನ್ನು ಬಳಸುತ್ತಿದ್ದಾರೆ. ವೆಟ್ ವೈಪ್‌ಸ್‌ಗಳನ್ನು ಕೈ ಮತ್ತು ಮುಖ ತೊಳೆಯಲು ಬಳಸಲಾಗುತ್ತಿದೆ. ಇದು ಅಪಾರ್ಟ್ಮೆಂಟ್ ಒಂದರಲ್ಲಿ ನೀರಿನ ಪರಿಸ್ಥಿತಿಯ ತೀವ್ರತೆಯನ್ನು ವಿವರಿಸುತ್ತದೆ" ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಇತ್ತ, ನೀರಿನ ವಿತರಣೆಯನ್ನು ಸುಗಮಗೊಳಿಸಲು ಮತ್ತು ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಖಾಸಗಿ ಟ್ಯಾಂಕರ್‌ಗಳು, ಬೋರ್‌ವೆಲ್‌ಗಳು ಮತ್ತು ನೀರಾವರಿ ಬಾವಿಗಳ ನಿಯಂತ್ರಣವನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ನಿವಾಸಿಗಳಿಗೆ ತುರ್ತು ಸಹಾಯವಾಣಿ ಸಂಖ್ಯೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದು ನೀರು ಬಿಡುಗಡೆಯಾಗುವ ಸಮಯ, ನೀರಿನ ಲಭ್ಯತೆ ಮತ್ತು ನೀರಿನ ಟ್ಯಾಂಕರ್‌ಗಳ ಬುಕಿಂಗ್‌ಗೆ ಸಹಾಯ ಮಾಡುತ್ತದೆ.
ನೀರಿನ ಕೊರತೆ ಎದುರಿಸುತ್ತಿರುವವರು ಟೋಲ್-ಫ್ರೀ ಸಂಖ್ಯೆ 1916 (Bwssb ಸಹಾಯವಾಣಿ) ಕರೆ ಮಾಡಿ, ತಮ್ಮ ಸಮಸ್ಯೆಗಳನ್ನು ಮತ್ತು ದೂರುಗಳನ್ನು ಸಲ್ಲಿಸಬಹುದು. ಇದಲ್ಲದೆ, [email protected] ಗೆ ತಮ್ಮ ಸಮಸ್ಯೆಗಳನ್ನು ಇಮೇಲ್ ಮಾಡಬಹುದು.












Click it and Unblock the Notifications