Bengaluru Waste: ಬೆಂಗಳೂರಲ್ಲಿ ಕಸ ಸಂಗ್ರಹ ವ್ಯವಸ್ಥೆಯಲ್ಲಿ ಹೊಸ ಸುಧಾರಣೆ
Bengaluru Waste: ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಪ್ಪಿಸುವುದು ಹಾಗೂ ಕಸದ ಸಮಸ್ಯೆ ನಿರ್ವಹಣೆ ಮಾಡುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಿಂದ ಹೊಸ ಕ್ರಮ ಅಳವಡಿಸಿಕೊಳ್ಳಲಾಗಿದೆ. ಪ್ರತಿ ಮನೆ-ಮನೆಯಿಂದ ವಿಂಗಡಿಸಿದ ಘನತ್ಯಾಜ್ಯವನ್ನು ಸುರಕ್ಷತಾ ಧಿರಿಸುಗಳೊಂದಿಗೆ ಸಂಗ್ರಹಿಸಲು ಆದೇಶ ಮಾಡಲಾಗಿದೆ ಎಂದೂ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಪ್ರತಿ ಮನೆ-ಮನೆಯಿಂದಲೇ ವಿಂಗಡಿಸಿದ ಘನತ್ಯಾಜ್ಯವನ್ನು ತಪ್ಪದೇ ಎಲ್ಲ ಸುರಕ್ಷತಾ ಧಿರಿಸುಗಳನ್ನು ಧರಿಸಿ ವಿಲೇವಾರಿ ಮಾಡುವಂತೆ ಹೇಳಲಾಗಿದೆ. ಸುರಕ್ಷತಾ ಧಿರಿಸುಗಳಾದ ಸಮವಸ್ತ್ರ, ಕೈಗವಸು, ಮುಖಗವಸು, ಗಮ್ ಬೂಟ್ ಮತ್ತು ಇತರೆ ಅವಶ್ಯಕ ಸಾಧನ- ಸಲಕರಣೆಗಳೊಂದಿಗೆ ಸಂಗ್ರಹಿಸಿ ಸಾಗಿಸುವಂತೆ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಕರೀಗೌಡ ಅವರು ಆದೇಶಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ವಿಭಾಗೀಯ ಅಧಿಕಾರಿಗಳು ಆಟೋಟಿಪ್ಪರ್ ವಾಹನಗಳ ಚಾಲಕರು ಮತ್ತು ಸಹಾಯಕರುಗಳನ್ನು ಒತ್ತಾಯ ಪೂರ್ವಕವಾಗಿ ಕಸ ವಿಂಗಡಿಸುವ ಕಾರ್ಯಕ್ಕೆ ಒಳಪಡಿಸಿಕೊಂಡು ಘನತಾಜ್ಯ ವಿಲೇವಾರಿ ನಿಯಮಗಳು 2000 ಹಾಗೂ 2016ಗಳ ವಿರುದ್ಧವಾಗಿ ನಡೆಸಿಕೊಳ್ಳಲಾಗುತ್ತಿದ್ದು, ಕಾರ್ಮಿಕರು ತಮ್ಮ ಉದ್ಯೋಗವನ್ನು ತ್ಯಜಿಸಲು ಸಿದ್ಧರಿರುವ ಬಗ್ಗೆ ಹಾಗೂ ಕಾರ್ಮಿಕರನ್ನು ಚಿಂದಿ ಆಯುವವರೆಂದು ಉಲ್ಲೇಖಿಸಿ, ಸೇವಾ ಕಾರ್ಯವನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿ ಮುಂಜಾಗ್ರತಾ ಕ್ರಮವಾಗಿ ಘನತ್ಯಾಜ್ಯದ ಸಂಗ್ರಹಣೆ ಮತ್ತು ಸಾಗಾಣೆಗಾಗಿ ಪರ್ಯಾಯ ವ್ಯವಸ್ಥೆಯನ್ನು ಸಿದ್ಧತೆ ಮಾಡಿಕೊಳ್ಳುವಂತೆ ಉಲ್ಲೇಖಿತ ಪತ್ರದಲ್ಲಿ ತಿಳಿಸಲಾಗಿದೆ.
ಘನತ್ಯಾಜ್ಯ ನಿರ್ದಹಣಾ ನಿಯಮಗಳು-2016 ಹಾಗೂ ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು-2020ರನ್ವಯ ಹಸಿ, ಒಣ ಮತ್ತು ಇತರೆ (ಸ್ಥಳೀಯ ನೈರ್ಮಲ್ಯ) ಗಳಾಗಿ ವಿಂಗಡಿಸಿದ ತ್ಯಾಜ್ಯವನ್ನು ಪ್ರಾಥಮಿಕವಾಗಿ ಸಂಗ್ರಹಿಸಿ ಸಾಗಿಸಬೇಕಾಗಿದ್ದು ಶಾಸನಬದ್ಧ ಕರ್ತವ್ಯವಾಗಿರುತ್ತದೆ. ದಿನಾಂಕ: 01.04.2026ರಿಂದ ಜಾರಿಗೊಳ್ಳುವ ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026ಗಳನ್ವಯ ಹಸಿ, ಒಣ ಮತ್ತು ಸ್ಥಳೀಯ ನೈರ್ಮಲ್ಯ ಮತ್ತು ವಿಶೇಷ ಕಾಳಜಿಯುಳ್ಳಗಳಾಗಿ ವಿಂಗಡಿಸಿದ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸಬೇಕಾಗಿರುತ್ತದೆ ಮತ್ತು ಇದು ಸಹ ಶಾಸನಬದ್ಧ ಜವಾಬ್ದಾರಿಯಾಗಿರುತ್ತದೆ.
ಮಿಶ್ರ ತ್ಯಾಜ್ಯದ ಸಂಗ್ರಹಣೆ ಮತ್ತು ಸಾಗಾಣಿಕೆಯು ಶಾಸನಾತ್ಮಕ ನಿಯಮಗಳಿಗೆ ತದ್ವಿರುದ್ಧವಾಗಿದ್ದು, ಅದಕ್ಕಾಗಿ ದಂಡವನ್ನು ವಿಧಿಸಬಹುದಾಗಿರುತ್ತದೆ. ಮೇಲಾಗಿ, ಸುರಕ್ಷತಾ ಧಿರಿಸುಗಳೊಂದಿಗೆಯೇ ವಿಂಗಡಿಸಿದ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುವುದು ಸೇವಾದಾರರಿಗೆ ನೀಡಲಾಗಿರುವ ಆದೇಶ/ಕಾರ್ಯಾದೇಶದ ಭಾಗವಾಗಿರುತ್ತದೆ. ಸರಬರಾಜು ಆದೇಶ/ಕಾರ್ಯಾದೇಶದ ಭಾಗವಾಗಿರುತ್ತದೆ.
ಪ್ರತಿ ಮನೆ-ಮನೆಯಿಂದ ವಿಂಗಡಿಸಿದ ಘನತ್ಯಾಜ್ಯವನ್ನು ಸಂಗ್ರಹಿಸಿದಲ್ಲಿ ಕಪ್ಪು ಚುಕ್ಕೆಗಳು / ಬ್ಲಾಕ್‌ಸ್ಪಾಟ್ ಉದ್ಭವಿಸುವುದಿಲ್ಲ ಹಾಗೂ ತದನಂತರದ ತ್ಯಾಜ್ಯ ವಿಂಗಡಣೆಯ ಪ್ರಮೇಯವೇ ಇರುವುದಿಲ್ಲ. ಆದರೆ, ಸೇವಾದಾರ ಸಂಸ್ಥೆಗಳು ಮಿಶ್ರ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸುತ್ತಿರುವುದನ್ನು ಮತ್ತು ಯಾವುದೇ ಸುರಕ್ಷಾ ಧಿರಿಸು ಧರಿಸದೇ ಕಾರ್ಯನಿರ್ವಹಿಸುತ್ತಿರುವುದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.












Click it and Unblock the Notifications