ಬೆಂಗಳೂರು ಹಿಂಸಾಚಾರದ ಹಿಂದೆ ಉಗ್ರರ ಕೈವಾಡ ಶಂಕೆ!
ಬೆಂಗಳೂರು, ಆಗಸ್ಟ್.17: ಬೆಂಗಳೂರಿನ ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನಹಳ್ಳಿಯಲ್ಲಿ ನಡೆದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ.
Recommended Video
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲೆ ದಾಳಿ ಮತ್ತು ಡಿಜಿ ಹಳ್ಳಿ, ಕೆಜಿ ಹಳ್ಳಿ ಹಿಂಸಾಚಾರದಲ್ಲಿ ಎಸ್ ಡಿಪಿಐ ಕೈವಾಡವಿರುವ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದೆ.
ಸೋಮವಾರ ಎಸ್ ಡಿಪಿಐ ಕಚೇರಿಗೆ ಅಪರಾಧ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕೆಲವು ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಎಲ್ಲ ಮಾರಕಾಸ್ತ್ರಗಳ ಜೊತೆಗೆ ಎಂಟು ಜನರನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ಹಿಂಸಾಚಾರದ ಹಿಂದೆ ಉಗ್ರರ ಸಂಪರ್ಕ:
ಬೆಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೂ ಉಗ್ರರಿಗೂ ನಂಟು ಹೊಂದಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿ ಸಮಿಯುದ್ದೀನ್ ಅಲ್-ಹಿಂದ್ ಎಂಬ ಸಂಘಟನೆ ಜೊತೆ ನಂಟು ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಅಲ್-ಹಿಂದ್ ಸಂಘಟನೆಯು ಐಸಿಸ್ ಜೊತೆಗೆ ಸಂಪರ್ಕದಲ್ಲಿರುವ ಬಗ್ಗೆ ಸುಳಿವುಗಳು ಪತ್ತೆಯಾಗಿವೆ. ಈ ಹಿಂದೆ ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಎನ್ಐಎ ನಡೆಸಿದ ತನಿಖೆ ಸಂದರ್ಭದಲ್ಲೂ ಆರೋಪಿ ಸಮಿಯುದ್ದೀನ್ ಹೆಸರು ಕೇಳಿ ಬಂದಿತ್ತು.
ಫೀಲ್ಡ್ ಗೆ ಇಳಿದ ಎಟಿಎಸ್:
ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಆರೋಪಿ ಸಮಿಯುದ್ದೀನ್, ಬೆಂಗಳೂರು ಹಿಂಸಾಚಾರದಲ್ಲೂ ಭಾಗಿಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಸಮಿಯುದ್ದೀನ್ ಅಲ್-ಹಿಂದ್ ಸಂಘಟನೆಗೆ ಸೇರಿಕೊಂಡಿದ್ದನು ಎಂದು ತಿಳಿದು ಬಂದಿದೆ. ಈ ಹಿನ್ನೆಲೆ ಹೆಚ್ಚಿನ ತನಿಖೆಗಾಗಿ ಭಯೋತ್ಪಾದನೆ ನಿಗ್ರಹ ದಳ(ಎಟಿಎಸ್)ದ ಎಸಿಪಿ ಹಂತದ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆ ಹಿನ್ನೆಲೆ ಕರ್ನಾಟಕದಲ್ಲಿಯೇ 17 ಸಂಚುಕೋರರ ವಿರುದ್ಧ ಎನ್ಐಎ ತಂಡದ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದರು.












Click it and Unblock the Notifications