ಬೆಂಗಳೂರು-ವಿಜಯವಾಡ ವಯಾ ತಿರುಪತಿ ವಂದೇ ಭಾರತ್ ರೈಲು, ವೇಳಾಪಟ್ಟಿ
ಬೆಂಗಳೂರು, ಮೇ 21: ಬೆಂಗಳೂರು ನಗರದಿಂದ ತಿರುಪತಿಗೆ ಪ್ರಯಾಣ ಮಾಡುವ ಭಕ್ತರಿಗೆ ಸಿಹಿಸುದ್ದಿಯೊಂದಿದೆ. ಬೆಂಗಳೂರು-ವಿಜಯವಾಡ ವಯಾ ತಿರುಪತಿ ನಡುವೆ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ. ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮೂಲಕ ಈ ರೈಲು ಸಂಚಾರವನ್ನು ನಡೆಸಲಿದೆ.
ಉದ್ಯಾನ ನಗರಿ ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲನ್ನು ಭಾರತೀಯ ರೈಲ್ವೆ ನೀಡಿದೆ. ಬೆಂಗಳೂರು-ವಿಜಯವಾಡ ನಡುವೆ ಈ ರೈಲು ಸಂಚಾರ ನಡೆಸಲಿದ್ದು, ಕರ್ನಾಟಕ, ಆಂಧ್ರ ಪ್ರದೇಶದ ಜನರಿಗೆ ಸಹಾಯಕವಾಗಲಿದೆ. ಈ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ವಿಜಯವಾಡ ರೈಲು ನಿಲ್ದಾಣದಲ್ಲಿ ನಿರ್ವಹಣೆ ಮಾಡಲಾಗುತ್ತದೆ ಎಂದು ಭಾರತೀಯ ರೈಲ್ವೆ ಹೇಳಿದೆ.

ಬೆಂಗಳೂರು-ವಿಜಯವಾಡ ವಯಾ ತಿರುಪತಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ರೈಲು ವಾರದ 6 ದಿನಗಳು (ಮಂಗಳವಾರ ಹೊರತು ಪಡಿಸಿ) ಉಭಯ ನಗರದ ನಡುವೆ ಸಂಚಾರವನ್ನು ನಡೆಸುತ್ತದೆ. ಈ ರೈಲು 8 ಬೋಗಿಯನ್ನು ಹೊಂದಿರಲಿದ್ದು, 7 ಚೇರ್ ಕಾರ್ ಮತ್ತು 1 ಎಕ್ಸಿಕ್ಯುಟಿವ್ ಚೇರ್ ಕಾರ್ ಬೋಗಿಯನ್ನು ಹೊಂದಿರಲಿದೆ.
ರೈಲಿನ ವೇಳಾಪಟ್ಟಿ: ರೈಲ್ವೆ ಇಲಾಖೆ ಬೆಂಗಳೂರು-ವಿಜಯವಾಡ ವಯಾ ತಿರುಪತಿ ನಡುವಿನ ವಂದೇ ಭಾರತ್ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಜಯವಾಡ-ಬೆಂಗಳೂರು ನಡುವೆ ರೈಲು ನಂಬರ್ 20711 ಮತ್ತು ಎಸ್‌ಎಂವಿಟಿ ಬೆಂಗಳೂರು-ವಿಜಯವಾಡ ನಡುವೆ ರೈಲು ನಂಬರ್ 20412 ಸಂಚಾರವನ್ನು ನಡೆಸಲಿದೆ.
ವಿಜಯವಾಡ-ಎಸ್‌ಎಂವಿಟಿ ಬೆಂಗಳೂರು ರೈಲು ವಿಜಯವಾಡದಿಂದ ಬೆಳಗ್ಗೆ 5:15ಕ್ಕೆ ಹೊರಡಲಿದೆ. ರೈಲು ತಿರುಪತಿಗೆ 9.45ಕ್ಕೆ ಆಗಮಿಸಲಿದೆ. 9.50ಕ್ಕೆ ತಿರುಪತಿಯಿಂದ ಹೊರಡಲಿದ್ದು, ಮಧ್ಯಾಹ್ನ 2.15ಕ್ಕೆ ಬೆಂಗಳೂರು ನಗರದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪುತ್ತದೆ.
ಎಸ್‌ಎಂವಿಟಿ ಬೆಂಗಳೂರು-ವಿಜಯವಾಡ ನಡುವಿನ ರೈಲು 2.45ಕ್ಕೆ ಬೆಂಗಳೂರು ನಗರದಿಂದ ಹೊರಡಲಿದೆ. ತಿರುಪತಿಯನ್ನು ರೈಲು ಸಂಜೆ 6:55ಕ್ಕೆ ತಲುಪುತ್ತದೆ. 7 ಗಂಟೆಗೆ ತಿರುಪತಿಯಿಂದ ಹೊರಟು, ವಿಜಯವಾಡಕ್ಕೆ ರಾತ್ರಿ 11:15ಕ್ಕೆ ತಲುಪಲಿದೆ.
ವಿಜಯವಾಡ-ಬೆಂಗಳೂರು ವಂದೇ ಭಾರತ್ ರೈಲು ವಿಜಯವಾಡ, ತೆನಾಲಿ, ಅಂಗೋಲೆ, ನೆಲ್ಲೂರು, ಗುಡೂರು (ಪಾಸ್), ತಿರುಪತಿ, ಚಿತ್ತೂರು, ಕಟಪಾಡಿ, ಜೋಲಾರಪಟ್ಟಿ, ಕೆ. ಆರ್. ಪುರ ಮತ್ತು ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ.
ಬೆಂಗಳೂರು-ವಿಜಯವಾಡ ಮತ್ತು ವಿಜಯವಾಡ-ಬೆಂಗಳೂರು ನಡುವೆ ಯಾವುದೇ ನೇರ ರೈಲು ಸೇವೆ ಇರಲಿಲ್ಲ. ಆದ್ದರಿಂದ ಐಟಿ ಉದ್ಯಮದ ಪ್ರಮುಖ ಸ್ಥಳವಾದ ಬೆಂಗಳೂರು ನಗರಕ್ಕೆ ರೈಲು ಸೇವೆ ಆರಂಭಿಸಬೇಕು ಎಂದು ಬೇಡಿಕೆ ಇಡಲಾಗಿತ್ತು.
ಆದ್ದರಿಂದ ಜನರ ಬೇಡಿಕೆಯನ್ನು ಪರಿಶೀಲಿಸಿದ ಬಳಿಕ ವಿಜಯವಾಡ-ಎಸ್‌ಎಂವಿಟಿ ಬೆಂಗಳೂರು ವಯಾ ತಿರುಪತಿ ನಡುವೆ ವಂದೇ ಭಾರತ್ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಈ ರೈಲು ಬೆಂಗಳೂರು-ವಿಜಯವಾಡ ನಡುವಿನ ಪ್ರಯಾಣಿಕರಿಗೆ ಸಹಾಯಕವಾಗಲಿದೆ. ಅಲ್ಲದೇ ತಿರುಪತಿಗೆ ಭೇಟಿ ನೀಡುವ ಭಕ್ತರಿಗೂ ನೆರವಾಗಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.












Click it and Unblock the Notifications