ಅಬ್ಬಾ! ಹಸಿಮೆಣಸು ಇನ್ನು ಸಿಕ್ಕಾಪಟ್ಟೆ ಖಾರ
ಬೆಂಗಳೂರು, ಮೇ 3: ಕೆಲವು ದಿನಗಳ ಹಿಂದಷ್ಟೇ ಮತದಾನ ಮಾಡಿ ಕೈ ಬೆರಳಿಗೆ ಹಾಕಿದ ಶಾಯಿ ಗುರುತನ್ನು ನೋಡಿಕೊಂಡು ಹಿಗ್ಗುತ್ತಿದ್ದ ಜನರು, ಈಗ ಆ ಕೈಗಳಿಂದ ಜೇಬನ್ನು ಮುಟ್ಟಿಮುಟ್ಟಿ ನೋಡುಕೊಳ್ಳುವಂತಾಗಿದೆ. ಹಿಗ್ಗಿದ್ದ ಮುಖ ಕಳೆಗುಂದುವಂತಾಗಿದೆ.
ಮೊದಲೇ ಜೀವನವೆಚ್ಚ ಹೆಚ್ಚಳದಿಂದ ಕಂಗಾಲಾಗಿರುವ ಜನರಿಗೆ ತರಕಾರಿ ಬೆಲೆ ಕಣ್ಣುರಿಯುಂಟುಮಾಡುತ್ತಿದೆ. ಗ್ರಾಹಕರು ಜೇಬು ಮುಟ್ಟಿಕೊಳ್ಳುವಂತೆ ಮಾಡುತ್ತಿದ್ದ ತರಕಾರಿ ಬೆಲೆ, ಈಗ ಕೈಸುಡುವ ಸೂಚನೆ ನೀಡಿದೆ. ಜನರಿಗೆ ತೀರಾ ಅನಿವಾರ್ಯವಾಗಿರುವ ತರಕಾರಿಗಳ ಬೆಲೆ ಚುನಾವಣೆ ಮುಗಿಯುತ್ತಿದ್ದಂತೆಯೇ ಗಗನಕ್ಕೇರುತ್ತಿದೆ.
ನಳನಳ ನಳಿಸುವ ಹಸಿರು ಮೆಣಸಿನ ಕಾಯಿ ಅಡುಗೆಗೆ ಇಲ್ಲ ಎಂದರೆ ಹೇಗೆ? ಅಡುಗೆ ಸ್ಪೈಸಿಯಾಗಿರಲು ಖಾರದ ಪುಡಿ ಮತ್ತು ಕೆಂಪು ಮೆಣಸಿನ ಕಾಯಿ ಹಾಕಬಹುದು. ಹಾಗೆಂದು ಎಲ್ಲ ತಿನಿಸುಗಳಿಗೂ ಇವು ಆಯ್ಕೆಯಲ್ಲ. ಹಸಿ ಮೆಣಸಿನಕಾಯಿ ಇದ್ದರೇ ಸೊಗಸು ಬಾಯಿ ಚಪ್ಪರಿಸಲು. ಆದರೆ, ಇದರ 'ಖಾರ' ಹೆಚ್ಚಾಗುವ ಸಾಧ್ಯತೆ ಇದೆ.

ಹಸಿ ಮೆಣಸಿನ ಕಾಯಿ ದರ ಕೆ.ಜಿ.ಗೆ 100 ರೂ. ದಾಟುವ ನಿರೀಕ್ಷೆಯಿದೆ. ಟೊಮ್ಯಾಟೊ ಕೆಜಿಗೆ 40-50 ರೂ.ನಷ್ಟಿದೆ. ಇನ್ನು ಸಾಂಬಾರ್, ಬಿಸಿ ಬೇಳೆ ಬಾತ್, ಪಲಾವ್ ಮುಂತಾದ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಬೀನ್ಸ್ ಇನ್ನೂ ತುಟ್ಟಿಯಾಗುವ ಭೀತಿ ಮೂಡಿಸಿದೆ. ಈಗಾಗಲೇ ಅದು ನೂರರ ಗಡಿಯತ್ತ ಸಾಗುತ್ತಿದೆ.
ಈರುಳ್ಳಿ ಮತ್ತು ಆಲೂಗಡ್ಡೆ ಹೊರತುಪಡಿಸಿ ಉಳಿದೆಲ್ಲ ತರಕಾರಿಗಳ ಬೆಲೆ ಹೆಚ್ಚಳವಾಗಿದ್ದು, ಕೆ.ಜಿಗೆ 40-60ರ ದರದಲ್ಲಿ ಮಾರಾಟವಾಗುತ್ತಿವೆ.
ಆನೇಕಲ್, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಿಂದ ಬೆಂಗಳೂರಿಗೆ ಹೆಚ್ಚು ಬೀನ್ಸ್ ಸರಬರಾಜು ಆಗುತ್ತಿದೆ. ಈ ಭಾಗಗಳಲ್ಲಿ ನೀರಿನ ಕೊರತೆ ವಿಪರೀತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸಕ್ತ ವರ್ಷ ಬೀನ್ಸ್ ಬೆಳೆಯಲ್ಲಿ ಹೆಚ್ಚೂ ಕಡಿಮೆ ಅರ್ಧ ಭಾಗದಷ್ಟು ಕುಸಿತವಾಗಿದೆ.
ಕೋಲಾರ ಭಾಗದಲ್ಲಿ ಟೊಮ್ಯಾಟೋ ಹೆಚ್ಚಾಗಿ ಬೆಳೆಯುತ್ತಿದ್ದು, ಅಲ್ಲಿಯೂ ನೀರಿನ ಅಭಾವ ತೀವ್ರವಾಗಿದೆ. ಬಹುತೇಕ ಕಡೆ ಬೆಳೆ ಒಣಗಿ ಹೋಗಿವೆ. ಇದರಿಂದ ಉತ್ಪಾದನೆ ಕುಂಠಿತವಾಗಿದ್ದು, ಬೆಲೆ ಏರಿಕೆಯಾಗಿದೆ.












Click it and Unblock the Notifications