ಕನ್ನಡಿಗರ ವಿರೋಧ ಲೆಕ್ಕಿಸದೆ ಕರ್ನಾಟಕ ಸರ್ಕಾರದಿಂದ ಬೆಂಗಳೂರು ವಿ.ವಿಗೆ ಡಾ.ಮನಮೋಹನ್ ಸಿಂಗ್ ಹೆಸರು!
ಕನ್ನಡಿಗರ ತೀವ್ರ ವಿರೋಧದ ನಡುವೆಯೂ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ (ಬೆಂಗಳೂರು ಸೆಂಟ್ರಲ್ ವಿಶ್ವವಿದ್ಯಾಲಯಕ್ಕೆ) ದಿವಂಗತ ಡಾ. ಮನಮೋಹನ್ ಸಿಂಗ್ ಅವರ ಹೆಸರು ಮರು ನಾಮಕರಣ ಮಾಡುವುದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲದಯ ಹೆಸರು ಬದಲಾವಣೆ ಮಾಡುವುದಕ್ಕೆ ಜೂನ್ 02ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜ್ಯ ಸರ್ಕಾರವು ಕನ್ನಡಿಗರು ಹಾಗೂ ಬೆಂಗಳೂರಿಗರ ವಿರೋಧಕ್ಕೆ ಕ್ಯಾರೇ ಎನ್ನದೆ ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿ ಹೆಸರು ಬದಲಾವಣೆ ಮಾಡುವುದಕ್ಕೆ ಮುಂದಾಗಿದೆ. ಬೆಂಗಳೂರು ವಿವಿಗೆ ಡಾ.ಮನಮೋಹನ್ ಸಿಂಗ್ ಅವರ ಹೆಸರನ್ನು ಮರು ನಾಮಕರಣ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ಮಾರ್ಚ್‌ನಲ್ಲಿ ಮಂಡಿಸಿದ್ದ ರಾಜ್ಯ ಬಜೆಟ್‌ನಲ್ಲಿಯೇ ಹೇಳಿತ್ತು. ಆದರೆ, ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಈ ವರ್ಷ ಮಾರ್ಚ್‌ನಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಇದೀಗ ಜನರ ವಿರೋಧದ ನಡುವೆಯೂ ಹೆಸರು ಬದಲಾವಣೆ ಪರ್ವ ಮುಂದುವರಿದಿದೆ.

ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದೇಶದ ಪ್ರಧಾನಿಗಳಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಮತ್ತು ಕೊಡುಗೆಗಳನ್ನು ನೀಡಿದ್ದ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿ, ಗೌರವಿಸುವ ಕೆಲಸವನ್ನು ಮಾಡುವುದು ಒಂದು ಸರ್ಕಾರವಾಗಿ ಮಾತ್ರವಲ್ಲ, ಕನ್ನಡಿಗನಾಗಿಯೂ ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ನಂದಿಗಿರಿ ಧಾಮದಲ್ಲಿ ಆಯೋಜಿಸಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಹೆಸರೇ ಸೂಕ್ತ, ನಮ್ಮ ಬೆಂಗಳೂರು ನಮ್ಮ ಹೆಮ್ಮೆ ಎಂದು ಮಂಜುನಾಥ್ ಎನ್ನುವವರು ಹೇಳಿದ್ದಾರೆ. ಪ್ರಕಾಶ್ ಎನ್ನುವವರು, ಇದು ಸರಿಯಾದ ನಿರ್ಧಾರವಲ್ಲ. ಕನ್ನಡಿಗರನ್ನು ವಿನಾಕಾರಣ ಕೆಣಕುವ ಕೆಲಸ ಮಾಡುತ್ತಿದ್ದೀರಿ. ಈ ನಿರ್ಧಾರ ಕೂಡಲೇ ಹಿಂತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.
ವಸಂತ್ ಪೂಜಾರಿ ಎನ್ನುವವರು, ಬಾಗೇಪಲ್ಲಿ 'ಭಾಗ್ಯನಗರ' ಆಗುವುದು - ಜನ ಹೋರಾಟದ ಫಲ. ಅದು ಸ್ವಾಗತಾರ್ಹ. ಆದರೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮನಮೋಹನ್ ಸಿಂಗ್ ಅವರ ಹೆಸರೇಕೆ ಬೇಕು...? ಇದು ಕನ್ನಡ ನಾಡಿನ ಹೃದಯದಲ್ಲಿ ಅಪ್ಪಳಿಸುವ ಅಪಮಾನ. ವಿಶ್ವವಿದ್ಯಾಲಯ ಎಂಬುದು ಒಂದರ ಜ್ಞಾಪಕ ಮಾತ್ರವಲ್ಲ - ಅದು ನಾಡಿನ ಮನಸ್ಸು, ನಾಡಿನ ಮೌಲ್ಯ, ನಾಡಿನ ಗೌರವ. ಮನಮೋಹನ್ ಸಿಂಗ್ ಅವರಿಗೆ ರಾಷ್ಟ್ರ ಮಟ್ಟದ ಗೌರವವಿದೆ. ಆದರೆ,ಇವರು ಕನ್ನಡ ನಾಡಿಗೆ, ಕನ್ನಡ ಭಾಷೆಗೆ ಏನಾದರೂ ವಿಶೇಷ ಕೊಡುಗೆ ನೀಡಿದ್ದಾರೆಯೇ. ಇವರು ಈ ನಾಡಿನ ಶಿಕ್ಷಣ-ಸಂಸ್ಕೃತಿಗೆ ನೇರ ಸಂಬಂಧವಿದೆಯೇ ಇಲ್ಲಿ ಪ್ರಶ್ನೆ ಯಾರನ್ನು ಗೌರವಿಸೋ ಎಂಬುದಲ್ಲ ಪ್ರಶ್ನೆ ಏನು ಗೌರವಿಸಬೇಕು ಎಂಬುದರ ಬಗ್ಗೆ ಎಂದಿದ್ದಾರೆ.
ಈ ಮರುನಾಮಕರಣ ನಿರ್ಧಾರಕ್ಕೆ ಸ್ಪಷ್ಟವಾದ ವಿರೋಧ ಇದೆ. ಇದು ನಾಡಿಗೇವೊಂದು ಅಪಮಾನ. ನಿಜವಾಗಿ ವಿಶ್ವವಿದ್ಯಾಲಯಗಳಿಗೆ ಹೆಸರು ಬೇಕೆಂದರೆ, ಹೇಳಿ ನೋಡೋಣ. ಕುವೆಂಪು ವಿಶ್ವವಿದ್ಯಾಲಯದಂತೆಯೇ, ಬೇಂದ್ರೆ ವಿಶ್ವವಿದ್ಯಾಲಯ ಇರಲಿ, ಜಿ. ಪಿ. ರಾಜರತ್ನಂ, ಅಂಬರೀಷ್, ಮಂಜು ಭೈರಪ್ಪ ಸೇರಿದಂತೆ ಕನ್ನಡ ನಾಡಿಗೆ ಅರ್ಪಣೆ ಮಾಡಿದ ಶೈಕ್ಷಣಿಕ ಸಾಧಕರ ಹೆಸರಿರಲಿ. ಜೈ ಕರ್ನಾಟಕ! 💛❤️ ಜೈ ಕನ್ನಡ ಎಂದು ಕಮೆಂಟ್ ಮಾಡಿದ್ದಾರೆ. ಇದೇ ರೀತಿ ಹಲವು ಕನ್ನಡಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications