'ಪೊಲೀಸ್ ಪುಷ್ಪ': ಅಲ್ಲು ಅರ್ಜುನ್ ಪುಷ್ಪ ಮೀರಿಸುವ ಪೊಲೀಸರ ರಕ್ತ ಚಂದನ ಸ್ಮಗ್ಲಿಂಗ್!
ಬೆಂಗಳೂರು, ಜ. 12: ರಕ್ತಚಂದನ ಕದ್ದು ವಿದೇಶಕ್ಕೆ ಸಾಗಣೆ ಮಾಡುವ ವಿಷಯಾಧಾರಿತ ನಟ ಅಲ್ಲು ಅರ್ಜುನ್ ನಟನೆಯ ಸಿನಿಮಾ ದೊಡ್ಡ ಸದ್ದು ಮಾಡುತ್ತಿದೆ. ಒಬ್ಬ ಸಾಮಾನ್ಯ ಕೂಲಿ ರಕ್ತ ಚಂದನ ಸ್ಮಗ್ಲಿಂಗ್ ನಲ್ಲಿ ಆಡುವ ಆಟದ ಸುತ್ತ ಕಥೆ ಎಣೆಯಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗಳು ರಕ್ತ ಚಂದನ ಸ್ಮಗ್ಲಿಂಗ್‌ನಲ್ಲಿ ಕೈ ಆಡಿಸಿ ಸಸ್ಪೆಂಡ್ ಆಗಿರುವ ಇಬ್ಬರು ಪೇದೆಗಳ 'ಪೋಲೀಸ್ ಪುಷ್ಪ' ರಕ್ತ ಚಂದನ ಸ್ಟೋರಿ ಇಲ್ಲಿದೆ ನೋಡಿ.
ಪುಷ್ಪ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ಶೇಷಾಚಲಂ ಅರಣ್ಯದಲ್ಲಿ ಮಾತ್ರ ರಕ್ತಚಂದನ ಇರುವುದು. ಇದರ ಹಿಂದೆ ಇರುವ ಬಹುದೊಡ್ಡ ಸ್ಮಗ್ಲಿಂಗ್ ಮಾಫಿಯಾದಲ್ಲಿ ಒಬ್ಬ ಕೂಲಿ ಕಾರ್ಮಿಕ ಚಕ್ರಾಧಿಪತ್ಯ ಸ್ಥಾಪಿಸುವ ಕಥೆಯೇ ಪುಷ್ಪ ಸಿನಿಮಾ. ಈ ಸಿನಿಮಾ ಬಹು ಮಖ್ಯವಾಗಿ ಪುಷ್ಪ ಎಂಬ ಕೂಲಿ ಕಾರ್ಮಿಕ, ಅವನ ಸ್ನೇಹಿತ ಕೇಶವ ಆಧರಿಸಿ ಸಿನಿಮಾ ತೆಗೆಯಲಾಗಿದೆ. ರಕ್ತಚಂದನ ಸ್ಮಗ್ಲರ್ಸ್‌ಗಳ ಬಳಿ ಸ್ಮಗ್ಲಿಂಗ್ ಮಾಡಿರುವ ಇಬ್ಬರು ಪೊಲೀಸ್ ಪುಷ್ಪಗಳ ಸ್ಟೋರಿ ಕೂಡ ಅದೇ ರೀತಿ ಇದೆ.
ಅವರಿಬ್ಬರ ಹೆಸರು ಮೋಹನ್ ಮತ್ತ ಮಮತೇಶ್. ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ಗಳು. ಒಬ್ಬರು ಗಿರಿನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬರು ಮಹದೇವಪುರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಇವರ ಸಿನಿಮಾ ಆರಂಭವಾಗುವುದು ಸಿಸಿಬಿಯಿಂದ.

ಇಬ್ಬರು ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಸಿಸಿಬಿ ಪೊಲೀಸರು ರಕ್ತ ಚಂದನ ಸ್ಮಗ್ಲರ್‌ಗಳ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಮೋಹನ್ ಮತ್ತು ಮಮತೇಶ್ ಗೌಡ ಕೂಡ ಪಾಲ್ಗೊಂಡಿದ್ದರು. ಅಲ್ಲಿ ರಕ್ತಚಂದನ ದಂಧೆಯ ಕರಾಳ ವಿವರಗಳನ್ನು ಪಡೆದಿದ್ದರು. ರಕ್ತಚಂದನ ಅಡ್ಡೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅಧಿಕಾರಿಗಳಿಂದ ದಾಳಿ ಮಾಡಿಸಿ ಮಹತ್ವದ ವಿವರ ಸಂಗ್ರಹಿಸಿದ್ದರು.
ಕಾರ್ಯಾಚರಣೆಗೆ ಇಳಿದರು:
ರಕ್ತಚಂದನಕ್ಕೆ ಇರುವ ಬೆಲೆಯನ್ನು ಅರಿತ ಇಬ್ಬರು ಕಾನ್‌ಸ್ಟೇಬಲ್ ಗಳು ದುಡ್ಡು ಮಾಡುವ ಪ್ಲಾನ್ ರೂಪಿಸಿದ್ದಾರೆ. ಅದರಂತೆ ಡಿ. 15 ರಂದು ಹೊಸಕೋಟೆ ಸಂತೆ ಸರ್ಕಲ್ ನಲ್ಲಿ ಟಾಟಾ ಏಸ್ ನಿಂದ ರಕ್ತ ಚಂದನ ಸಾಗಣೆ ಮಾಡುತ್ತಿರುವ ಮಾಹಿತಿ ಇವವರಿಗೆ ಸಿಕ್ಕಿತ್ತು. ಇಬ್ಬರು ಸ್ವಿಫ್ಟ್ ಕಾರಿನಲ್ಲಿ ಹೋಗಿ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿದ್ದಾರೆ.

ಟಾಟಾ ಏಸ್ ಚಾಲಕನಿಗೆ ಥಳಿಸಿ ಲಕ್ಷಾಂತರ ಮೌಲ್ಯದ ರಕ್ತ ಚಂದನ ಏಸ್ ಸಮೇತ ಎಸ್ಕೇಪ್ ಅಗಿದ್ದರು. ದಾಳಿಗೆ ಒಳಗಾದ ಏಸ್ ಚಾಲಕ ಪೊಲೀಸರಿಗೆ ಹೆದರಿ ಸುಮ್ಮನಾಗಿದ್ದ. ಕೆಲ ದಿನಗಳ ನಂತರ ಕನಿಷ್ಠ ಪಕ್ಷ ವಾಹನ ಬಿಡಿಸಿಕೊಳ್ಳುವ ಉದ್ದೇಶದಿಂದ ಹೊಸಕೋಟೆ ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಿದ್ದಾರೆ. ಅಸಲಿ ಸಂಗತಿ ಅಲ್ಲಿ ಗೊತ್ತಾಗಿದೆ. ಮೋಹನ್ ಮತ್ತು ಮಮತೇಶ್ ದಾಳಿ ಮಾಡಿ ಪಡೆದ ಟಾಟಾ ಏಸ್ ಮತ್ತು ರಕ್ತ ಚಂದನ ಅಬೇಸ್ ಮಾಡಿರುವ ಸತ್ಯ ಗೊತ್ತಾಗಿದೆ. ಈ ವಿಚಾರ ತಿಳಿದು ಗಾಬರಿಯಾದ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಇಬ್ಬರು ಕಾನ್‌ಸ್ಟೇಬಲ್‌ಗಳು ಸಿಕ್ಕಿಬಿದ್ರು:
ಹೊಸಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸುತ್ತಿದ್ದಂತೆ ಮೋಹನ್ ಮತ್ತು ಮಮತೇಶ್ ಗೌಡ ಎಸ್ಕೇಪ್ ಆಗಿದ್ದಾರೆ. ಅಂದಹಾಗೆ ಇಬ್ಬರು ಬಳಿಸಿದ್ದ ಸ್ವಿಫ್ಟ್ ಕಾರಿನ ಜಾಡು ಹಿಡಿದು ತನಿಖೆ ನಡೆಸಿದಾಗ ಆರೋಪಿಗಳು ಪೊಲೀಸ್ ಕಾನ್‌ಸ್ಟೇಬಲ್ ಗಳು ಎಂಬುದು ಗೊತ್ತಾಗಿದೆ. ದಾಳಿ ಮಾಡಿ ವಶಕ್ಕೆ ಪಡೆದ ರಕ್ತ ಚಂದನವನ್ನು ಮಾರಾಟ ಮಾಡಿಕೊಂಡಿದ್ದಾರೆ. ಈ ಸಂಬಂಧ ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ವಿರುದ್ಧ ದರೋಡೆ ಪ್ರಕರಣ ದಾಖಲಾಗಿದೆ. ಅಲ್ಲದೇ ಇಬ್ಬರ ಕೃತ್ಯದ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ವರದಿ ನೀಡಿದ್ದು, ವರದಿಯನ್ನು ಆಧರಿಸಿ ಕ್ರಮ ಜರುಗಿಸುವಂತೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಕಮಲಪಂತ್ ಅವರಿಗೆ ವರದಿ ಸಲ್ಲಿಸಿದ್ದಾರೆ.

Recommended Video
ವರದಿ ಆಧರಿಸಿ ಮಮತೇಶ್ ಗೌಡ ಹಾಗೂ ಮೋಹನ್‌ನನ್ನು ಸೇವೆಯಿಂದ ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಆದೇಶ ಮಾಡಿದ್ದಾರೆ. ಇದೀಗ ಇಬ್ಬರು ಪೊಲೀಸ್ ಪುಷ್ಪಗಳು ಜಾಮೀನಿಗಾಗಿ ತಯಾರಿ ನಡೆಸುತ್ತಿದ್ದಾರೆ. ಅವರು ಸಿಕ್ಕ ಮೇಲೆ ದರೋಡೆ ಮಾಡಿದ ರಕ್ತ ಚಂದನ ಇದೆಯಾ ? ಇಲ್ಲವೇ ಎಂಬುದರ ಅಸಲಿ ಸತ್ಯ ಗೊತ್ತಾಗಲಿದೆ.












Click it and Unblock the Notifications