Bengaluru Traffic: ಈ ಕಾರಣಕ್ಕೆ ಅಕ್ಟೋಬರ್ 1ರಿಂದ ಬೆಂಗಳೂರು ಟ್ರಾಫಿಕ್ ಮತ್ತಷ್ಟು ಹೆಚ್ಚಳ
ಬೆಂಗಳೂರಿಗರಿಗೆ ದೊಡ್ಡ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಕೊಡಲು ಸಾಧ್ಯವಾಗುತ್ತಿಲ್ಲ. ಹೊಸ ರಸ್ತೆ, ಫ್ಲೈಓವರ್‌ಗಳು ನಿರ್ಮಾಣ ಮಾಡುತ್ತಿದ್ದರೂ ಟ್ರಾಫಿಕ್ ಕೂಡ ಅದಕ್ಕೆ ಪೈಪೋಟಿ ನೀಡುವಂತೆ ಏರುತ್ತಲೇ ಇದೆ. ಅಷ್ಟರಮಟ್ಟಿಗೆ ಬೆಂಗಳೂರಿನ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಟ್ರಾಫಿಕ್ ಕಾರಣದಿಂದಲೇ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಆಯ್ಕೆ ನೀಡಿದ್ದವು. ಆದರೆ ಅಕ್ಟೋಬರ್ 1ರಿಂದ ಬೆಂಗಳೂರಿನ ಟ್ರಾಫಿಕ್ ಮತ್ತಷ್ಟು ಹೆಚ್ಚಳ ಕಾಣಲಿದೆ.
ಅಕ್ಟೋಬರ್ 1ರಿಂದ ಬೆಂಗಳೂರು ನಗರದಲ್ಲಿ ಬಹುತೇಕ ಖಾಸಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಹಿಂಪಡೆಯಲು ಮುಂದಾಗಿವೆಯಂತೆ. ಇದು ನಗರದ ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಗಂಭೀರವಾಗಿಸುತ್ತದೆ ಎಂಬ ಆತಂಕ ಹೆಚ್ಚಾಗಿದೆ. ವರ್ಕ್ ಫ್ರಮ್ ಹೋಂ ಅಂತ್ಯವಾದರೆ ಬೆಂಗಳೂರು ಟ್ರಾಫಿಕ್ ಇನ್ನಷ್ಟು ಹೆಚ್ಚಾಗಲಿದೆ. ಮುಖ್ಯವಾಗಿ ಐಟಿ ಕಂಪನಿಗಳ ಕ್ಲಸ್ಟರ್‌ಗಳಿರುವ ಔಟರ್ ರಿಂಗ್ ರೋಡ್ ಪ್ರದೇಶಗಳಲ್ಲಿ ಟ್ರಾಫಿಕ್ ವಿಪರೀತವಾಗುವ ನಿರೀಕ್ಷೆ ಇದೆ.

ಬಹುತೇಕ ಖಾಸಗಿ ಕಂಪನಿಗಳು, ಶೇಕಡಾ 80ರಷ್ಟು ಐಟಿ ಕಂಪನಿಗಳು ಅಕ್ಟೋಬರ್ 1ರಿಂದ ಇನ್ಮುಂದೆ ಉದ್ಯೋಗಿಗಳಿಗೆ ಕಚೇರಿಯಲ್ಲೇ ಕೆಲಸ ಮಾಡಬೇಕು ಎಂದು ಸೂಚನೆ ನೀಡಿವೆ. ಈ ಹೊಸ ನಿಯಮವು ಉದ್ಯೋಗಿಗಳ ದಿನನಿತ್ಯದ ಸಂಚಾರ ದಟ್ಟಣೆಯನ್ನು ಹೆಚ್ಚಾಗಲಿದ್ದು, ಟ್ರಾಫಿಕ್‌ನಲ್ಲೇ ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಿನ ಔಟರ್ ರಿಂಗ್ ರೋಡ್‌ನಲ್ಲಿ ದಿನಕ್ಕೆ ಸುಮಾರು 10 ಲಕ್ಷ ಉದ್ಯೋಗಿಗಳು ಸಂಚರಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಪ್ರತಿ ದಿನವೂ 82 ಸಾವಿರ ವಾಹನಗಳು ಔಟರ್ ರಿಂಗ್ ರೋಡ್‌ನಲ್ಲಿ ಸಂಚರಿಸುತ್ತಿದ್ದವು. ಈಗ ವಾಹನಗಳ ಸಂಖ್ಯೆ ಸುಮಾರು 1.2 ಲಕ್ಷಕ್ಕೆ ಏರಿದೆ. ಈಗ ವರ್ಕ್ ಫ್ರಮ್ ಹೋಂ ರದ್ದಾಗುವುದರಿಂದ ಉದ್ಯೋಗಿಗಳ ವಾಹನಗಳು ರಸ್ತೆಗಿಳಿದು, ಟ್ರಾಫಿಕ್ ಸಮಸ್ಯೆ ಇನ್ನಷ್ಟು ಏರಿಕೆ ಕಾಣಲಿದೆ.
ಖಾಸಗಿ ಕಂಪನಿಗಳ ಈ ನಿರ್ಧಾರದ ವಿರುದ್ಧ ಗ್ರೇಟರ್ ಬೆಂಗಳೂರು ಐಟಿ ಕಂಪನೀಸ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ಸೌಲಭ್ಯ ಮುಂದುವರಿಸಬೇಕೆಂದು ಒತ್ತಾಯಿಸಿವೆ. ವರ್ಕ್ ಫ್ರಂ ಹೋಂ ರದ್ದಾದರೆ, ವಾಹನ ಸವಾರರಿಗೆ ಈಗಾಗಲೇ ಕಾಡುತ್ತಿರುವ ಟ್ರಾಫಿಕ್ ಸಮಸ್ಯೆ ಮತ್ತಷ್ಟು ತಲೆನೋವು ತರಲಿದೆ.
ಈ ಭಾಗಗಳಲ್ಲಿ ಟ್ರಾಫಿಕ್ ಜಾಮ್
ಅರಮನೆ ಮೈದಾನದಲ್ಲಿ ದೊಡ್ಡ ಪ್ರಮಾಣದ ನವರಾತ್ರಿ ಮತ್ತು ದುರ್ಗಾ ಪೂಜೆ ಕಾರ್ಯಕ್ರಮಗಳು ನಡೆಯಲಿದ್ದು, ಅಕ್ಟೋಬರ್ 2ರವರೆಗೆ ಬಳ್ಳಾರಿ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಲಿದೆ. ಸೆಪ್ಟೆಂಬರ್ 30ರಂದು ಸರ್ಜಾಪುರ ರಸ್ತೆಯಲ್ಲಿ ಆಟೋಮಾರ್ಟ್ ಜಂಕ್ಷನ್ ಮತ್ತು ಅಗರ ಜಂಕ್ಷನ್ ನಡುವೆ ವೈಟ್-ಟಾಪಿಂಗ್ ಕೆಲಸ ಪ್ರಾರಂಭವಾಗಲಿದ್ದು, ಸುಮಾರು ಎರಡು ತಿಂಗಳ ಕಾಲ ನಡೆಯುವ ನಿರೀಕ್ಷೆಯಿದೆ. ಇದರಿಂದಾಗಿ ಸರ್ಜಾಪುರ ರಸ್ತೆಯ ಒಂದು ಬದಿಯು ಮುಚ್ಚಲ್ಪಟ್ಟಿದ್ದು, ವಾಹನ ಸಂಚಾರದ ಮೇಲೆ ಪರಿಣಾಮ ಬೀರಲಿದೆ. ಕೋರಮಂಗಲ ಜಕ್ಕಸಂದ್ರದಿಂದ ಅಗರ ಮತ್ತು ಹೊರ ವರ್ತುಲ ರಸ್ತೆ ಕಡೆಗೆ ವಾಹನಗಳು ಸಂಚರಿಸಲು ಅವಕಾಶವಿರುತ್ತದೆ.












Click it and Unblock the Notifications