Bengaluru Rain: ಬೆಂಗಳೂರಿನಲ್ಲಿ ಧಾರಾಕಾರ ಮಳೆ; ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರ ಮನವಿ ಏನು?
ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ (ಮೇ 22) ಸಂಜೆ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಸ್ತೆಯ ಮೇಲೆ ನೀರು ಹರಿದು ವಾಹನ ಸವಾರರು ಪರದಾಡಬೇಕು.
ಬೆಂಗಳೂರು ನಗರದ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೊರೇಷನ್, ಗಿರಿನಗರ, ಶಾಂತಿನಗರ, ಕೋರಮಂಗಲ, ಜಯನಗರ, ಕತ್ರಿಗುಪ್ಪೆ, ಜೆಪಿ ನಗರ, ರಿಚ್ಮಂಡ್ ರಸ್ತೆ, ರಾಜಾಜಿ ನಗರ, ಯಶವಂತಪುರ ಸೇರಿದಂತೆ ಹಲವು ಕಡೆಗಳಲ್ಲಿ ಗಾಳಿ ಸಹಿತ ಧಾರಕಾರ ಮಳೆ ಬರುತ್ತಿದೆ.

ಇದೇ ವೇಳೆ ಅಂಡರ್ಪಾಸ್ಗಳಲ್ಲಿ ಸಂಚರಿಸಬೇಡಿ ಎಂದು ಬೆಂಗಳೂರು ಸಂಚಾರ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ. ಭಾನುವಾರ ಸಂಜೆ ಸುರಿದಿದ್ದ ಭಾರೀ ಮಳೆಯಿಂದಾಗಿ ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ನೀರು ನಿಂತು ಅದರಲ್ಲಿ ಕಾರು ಸಿಲುಕಿದ ಪರಿಣಾಮ ಟೆಕ್ಕಿ ಯುವತಿಯೊಬ್ಬರು ಮೃತಪಟ್ಟಿದ್ದರು.
ಇನ್ನು ಭಾರೀ ಮಳೆಯ ಕಾರಣ ಸಾರ್ವಜನಿಕರು ವಿಧಾನಸೌಧದ ಸುತ್ತಲಿನ 6 ಕಿಮೀ ವ್ಯಾಪ್ತಿಯಲ್ಲಿರುವ ಅಂಡರ್ಪಾಸ್ಗಳಲ್ಲಿ ಸಂಚರಿಸಬಾರದು ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ. ಕೆಆರ್ ಸರ್ಕಲ್ ಅಂಡರ್ಪಾಸ್ನಲ್ಲಿ ಕಾರು ಮುಳುಗಡೆಯಾಗಿ ಟೆಕ್ಕಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಕಾರು ಚಾಲಕನನ್ನು ಹಲಸೂರು ಗೇಟ್ ಪೊಲೀಸರು ಸೋಮವಾರ ಮಧ್ಯಾಹ್ನ ಬಂಧಿಸಿದ್ದಾರೆ.

ಕಬ್ಬನ್ಪಾರ್ಕ್ನಲ್ಲಿನ ಮರಗಳು ಧರೆಗೆ
ಬೆಂಗಳೂರಿನಲ್ಲಿ 2 ದಿನಗಳಿಂದ ಸುರಿದ ಮಳೆಯಿಂದಾಗಿ ಕಬ್ಬನ್ ಪಾರ್ಕ್ನಲ್ಲಿ 40ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿ ಬಿದ್ದಿವೆ. ಕಬ್ಬನ್ ಉದ್ಯಾನವನದಲ್ಲಿ ಒಟ್ಟು 2 ಸಾವಿರಕ್ಕೂ ಹೆಚ್ಚು ಮರಗಳಿದ್ದು, ರಸ್ತೆಯ ಮೇಲೆ ಬಿದ್ದಿದ್ದ ಎಲ್ಲ ಮರಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ಮೂರು ದಿನ ಭಾರಿ ಮಳೆಯ ಮುನ್ಸೂಚನೆ ಇದೆ ಎಂದು ಕಬ್ಬನ್ ಪಾರ್ಕ್ ತೋಟಗಾರಿಕೆ ಉಪನಿರ್ದೇಶಕ ಬಾಲಕೃಷ್ಣ ಹೇಳಿದ್ದಾರೆ.












Click it and Unblock the Notifications