ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಗಾಕಿಕೊಂಡಾಗ ಪಿಜ್ಜಾ ಆರ್ಡರ್ ಮಾಡಿದ ವ್ಯಕ್ತಿ: ಸಿಗ್ನಲ್ ಬಿಡುವ ಮುಂಚೆ ಪಿಜ್ಜಾ ತಲುಪಿಸಿದ ಡಾಮಿನೋಸ್
ಬೆಂಗಳೂರು, ಸೆಪ್ಟೆಂಬರ್ 28: ಬೆಂಗಳೂರಿನ ಔಟರ್ ರಿಂಗ್ ರೋಡಿನಲ್ಲಿ ಬುಧವಾರ ಸಂಜೆಯಿಂದ ಮಧ್ಯರಾತ್ರಿಯ ವರೆಗೂ ಟ್ರಾಫಿಕ್ ಜಾಮ್ ಆಗಿರುವುದು ವರದಿಯಾಗಿದೆ. ಲಕ್ಷಾಂತರ ವಾಹನಗಳು ಔಟರ್ ರಿಂಗ್ ರೋಡಿಗೆ ಬಂದಿದ್ದು, ಟ್ರಾಫಿಕ್ ನಿಯಂತ್ರಣಕ್ಕೆ ಸಿಗದೇ ಪ್ರಯಾಣಿಕರು ಪರದಾಡುವಂತಾಗಿದೆ. ಕೇವಲ ಒಂದು ಕಿಮೀ ಕ್ರಮಿಸಲು ಎರಡು ಗಂಟೆಗೂ ಹೆಚ್ಚು ಕಾಲ ಸಮಯ ತೆಗೆದುಕೊಂಡಿದೆ ಎಂದು ನೆಟ್ಟಿಗರು ತಿಳಿಸಿದ್ದಾರೆ.
ಈದ್, ಕರ್ನಾಟಕ ಬಂದ್, ವೀಕ್ ಎಂಡ್ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಐದು ಸರಣಿ ರಜೆ ಬಂದಿದೆ. ಈ ಹಿನ್ನೆಲೆಯಲ್ಲಿ ಜನರು ಬೆಂಗಳೂರಿನಿಂದ ಹೊರಗೆ ಅಥವಾ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದರಿಂದ ದಾಖಲೆಯ ಮಟ್ಟದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ನಗರದ ರಸ್ತೆಗಳಲ್ಲಿ ವಾಹನಗಳು ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಿದ್ದವು. ಔಟರ್ ರಿಂಗ್ ರೋಡಿನಲ್ಲಿ ದಟ್ಟಣೆಯ ಪ್ರಮಾಣ ವ್ಯಾಪಕವಾಗಿತ್ತು. ಪ್ರಯಾಣಿಕರು ಐದು ಗಂಟೆಗಳಿಗೂ ಹೆಚ್ಚು ಕಾಲ ಈ ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರು ಎಂದು ತಿಳಿದುಬಂದಿದೆ.
ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೇ ಜನರು ಸಿಲುಕಿಕೊಂಡಿದ್ದರಿಂದ, ಇಬ್ಬರು ಡಾಮಿನೋಸ್ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಪ್ರಯಾಣಿಕರಿಗೆ ಆಹಾರವನ್ನು ಒದಗಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
When we decided to order from @dominos during the Bangalore choke. They were kind enough to track our live location (a few metres away from our random location added in the traffic) and deliver to us in the traffic jam. #Bengaluru #bengalurutraffic #bangaloretraffic pic.twitter.com/stnFDh2cHz
— Rishivaths (@rishivaths) September 27, 2023
ಡೆಲಿವರಿ ಏಜೆಂಟ್‌ಗಳು ಲೈವ್ ಲೊಕೇಶನ್ ಟ್ರ್ಯಾಕ್ ಮಾಡಿ ಸರಿಯಾದ ಸಮಯಕ್ಕೆ ಕಾರಿನ ಪ್ರಯಾಣಿಕರಿಗೆ ಪಿಜ್ಜಾ ತಲುಪಿಸಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಈ ಕುರಿತು ವಿಡಿಯೊವೊಂದನ್ನು 'X' ನಲ್ಲಿ ಹಂಚಿಕೊಂಡಿರುವ ನೆಟ್ಟಿಗರೊಬ್ಬರು, 'ಬೆಂಗಳೂರು ಟ್ರಾಫಿಕ್ ಸಿಕ್ಕುಹಾಕಿಕೊಂಡಿರುವ ಸಮಯದಲ್ಲಿ ಡಾಮಿನೋಸ್‌ನಿಂದ ಪಿಜ್ಜಾ ಆರ್ಡರ್ ಮಾಡಲು ನಾವು ನಿರ್ಧರಿಸಿದೆವು. ಅವರು ನಮ್ಮ ಲೈವ್ ಸ್ಥಳವನ್ನು ಟ್ರ್ಯಾಕ್ ಮಾಡಲು ಯಶಸ್ವಿಯಾದರು. ಅಂತಹ ವಾಹನ ದಟ್ಟಣೆ ಇರುವ ಸಮಯದಲ್ಲಿಯೂ ಡಾಮಿನೋಸ್ ಎಕ್ಸಿಕ್ಯುಟಿವ್‌ಗಳು ನಮ್ಮ ಕಾರು ನಿಂತಿದ್ದ ಸ್ಥಳಕ್ಕೆ ಬಂದರು. ಸರಿಯಾದ ಸಮಯದಲ್ಲಿ ನಮಗೆ ಫಿಜ್ಜಾವನ್ನು ತಲುಪಿಸಿ ದಯೆ ತೋರಿದರು' ಎಂದು ಹೇಳಿಕೊಂಡಿದ್ದಾರೆ.

ಈ ವಿಡಿಯೊ ಇದುವರೆಗೆ X ನಲ್ಲಿ ಸುಮಾರು 3 ಲಕ್ಷ ಇಂಪ್ರೆಶನ್‌ಗಳನ್ನು ಕಂಡಿದೆ.
'ಮುಂದಿನ ಬಾರಿ ನಾನು ಅರ್ಬನ್ ಕಂಪನಿಯಿಂದ ಮಸಾಜ್ ಅನ್ನು ಬುಕ್ ಮಾಡುತ್ತಿದ್ದೇನೆ' ಎಂದು ಒಬ್ಬ ಬಳಕೆದಾರರು ಬರೆಕೊಂಡಿದ್ದಾರೆ.
'ಡಾಮಿನೋಸ್ ತನ್ನ 30 ನಿಮಿಷಗಳ ವಿತರಣಾ ಭರವಸೆಯನ್ನು ಪೂರೈಸುತ್ತಿದೆ. ಇದು ಅದ್ಭುತವಾಗಿದೆ' ಎಂದು ಮತ್ತೊಬ್ಬರು ಹೇಳಿಕೊಂಡಿದ್ದಾರೆ.
'ಈ ವಿತರಣಾ ಸಿಬ್ಬಂದಿಗೆ ಸ್ವಲ್ಪ ಸಮಯ ಹೆಚ್ಚು ಬೇಕಿದೆ. ಇದು ಅವರಿಗೆ ನಿಜವಾಗಿಯೂ ಸವಾಲಾಗಿದೆ. ಭಾರೀ ಟ್ರಾಫಿಕ್‌ನಲ್ಲಿ ಲೈವ್ ಲೊಕೇಶನ್ ನ್ಯಾವಿಗೇಟ್ ಮಾಡುವುದು ಮತ್ತು ಗ್ರಾಹಕರಿಗೆ ಆಹಾರವನ್ನು ಪೂರೈಸುವುದು ಕಷ್ಟದ ಕೆಲಸವಾಗಿದೆ' ಎಂದು ಮತ್ತೊಬ್ಬರು ಹೇಳಿದ್ದಾರೆ.
ಬುಧವಾರ ಸಂಜೆ ಬೆಂಗಳೂರಿನ ವಾಹನ ದಟ್ಟಣೆ ಸಾಮಾನ್ಯ ದಿನಕ್ಕಿಂತ ಎರಡು ಪಟ್ಟು ಹೆಚ್ಚಾಗಿತ್ತು. ರಾತ್ರಿ 7:30 ರ ವೇಳೆಗೆ 3.5 ಲಕ್ಷ ವಾಹನಗಳು ರಸ್ತೆಯಲ್ಲಿದ್ದವು. ಸಾಮಾನ್ಯವಾಗಿ 1.5 ಲಕ್ಷದಿಂದ 2 ಲಕ್ಷಕ್ಕೆ ವಾಹನಗಳು ಇರಬೇಕಿತ್ತು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications