Bengaluru Today Weather: ಇಂದು ನಗರಾದ್ಯಂತ ತಂಪು-ಮಬ್ಬು ವಾತಾವರಣ: ಭಾರೀ ಮಳೆ ಸಾಧ್ಯತೆ, ವರದಿ
ಬೆಂಗಳೂರು, ಜನವರಿ 04: ಬಿಸಿಲು ಆವರಿಸಿದ್ದ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಕೆಲವೇ ಗಂಟೆಗಳಲ್ಲಿ ತೀವ್ರ ರೂಪದ ಮಬ್ಬು ವಾತಾವರಣ ಕಂಡು ಬಂದಿದೆ. ಇಂದು ಮಧ್ಯಾಹ್ನದ ನಂತರ ದಿಢೀರನೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ ಮಳೆ ಬರುವ ಸೂಚನೆ ಇದೆ. ಕಚೇರಿಯಿಂದ ಮನೆಗೆ ಹೋಗುವ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.
ನಗರದಲ್ಲಿ ಕೆಲವು ದಿನಗಳಿಂದ ಸ್ವಲ್ಪ ಪ್ರಮಾಣದ ಚಳಿ ಬಿಟ್ಟರೆ ಮಳೆ ಆಗಿರಲಿಲ್ಲ. ಅಲ್ಲದೇ ತಾಪಮಾನವು ಹೆಚ್ಚಾಗಿಯೇ ಇತ್ತು. ಇದೀಗ ಹವಾಮಾನದಲ್ಲಿ ಬದಲಾವಣೆಗಳ ಪರಿಣಾಮ ವ್ಯಾಪಕ ಮಳೆ ಸುರಿಯುವ ಸಾಧ್ಯತೆಗಳು ಇವೆ.

ಗುರುವಾರ ಬೆಳಗ್ಗೆಯಿಂದಲೂ ಬಿಸಿಲು ಮರೆಯಾಗಿತ್ತು. ಮಧ್ಯಾಹ್ನದ ನಂತರ ಕೋರಮಂಗಲ, ಡೈರಿ ವೃತ್ತ, ಬಾನಸವಾಡಿ, ಹೆಬ್ಬಾಳ, ಯಲಹಂಕ, ವಿಜಯನಗರ, ಹಂಪಿನಗರ, ಜ್ಞಾನಭಾರತಿ, ಕೆಂಗೇರಿ, ವಿದ್ಯಾರಣ್ಯಪುರ, ಹೆಬ್ಬಾಳ, ನಾಗವಾರ, ವೈಟ್‌ಫಿಲ್ಡ್, ಕಾಡುಗೋಡಿ ಸೇರಿದಂತೆ ಬೆಂಗಳೂರಿನಾದ್ಯಂತ ಅನೇಕ ಭಾಗಗಳಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿದೆ.
ಚಳಿ-ಶೀತ ವಾತಾವರಣ ಮುಂದುವರಿಕೆ
ನಗರದ ಒಂದೆರಡು ಕಡೆ ಸೋನೆ ಮಳೆ ಆಗಿದೆ ಎಂದು ವರದಿ ಆಗಿದೆ. ಇಂದು ರಾತ್ರಿ ನಗರದ ವಿವಿಧ ಕಡೆಗಳಲ್ಲಿ ಜೋರು ಮಳೆ ಆಗುವ ಸಾಧ್ಯತೆ ಇದೆ. ಮುಂದಿನ ಎರಡು ದಿನ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಚಳಿಯ ಪ್ರಮಾಣ ಹೆಚ್ಚಾಗಲಿದ್ದು, ತಾಪಮಾನ ಇಳಿಕೆ ಆಗಲಿದೆ. ಹಲವು ಬಡಾವಣೆಗಳು ಧಾರಾಕಾರ ಮಳೆ ಸಾಕ್ಷಿಯಾಗಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದಲ್ಲಿ ನಾಳೆಯಿಂದ ಬೆಳಗ್ಗೆ ಮತ್ತಷ್ಟು ದಟ್ಟ ಮಂಜು ಕಾಣಲಿದೆ. ಈ ವೇಳೆ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಆಗಿರಲಿದೆ ಎಂದು ಐಎಂಡಿ ವರದಿ ಹೇಳಿದೆ.

ವಾಯುಭಾರ ಕುಸಿತ: ನಗರಕ್ಕೆ ಮಳೆ ನಿರೀಕ್ಷೆ
ಅರಬ್ಬಿ ಸಮುದ್ರದಲ್ಲಿ ಎದ್ದಿದ್ದ ಮೇಲ್ಮೈ ಸುಳಿಗಾಳಿ ಗುರುವಾರ ತೀವ್ರ ಸ್ವರೂಪ ಪಡೆದುಕೊಂಡು ವಾಯು ಭಾರ ಕುಸಿತವಾಗಿ ಮಾರ್ಪಟ್ಟಿದೆ. ಇದರ ಪ್ರಭಾವವು ನೇರವಾಗಿ ಕರ್ನಾಟಕದ ಮೇಲೆ ಆಗಿದ್ದು, ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಹ ಅತ್ಯಧಿಕ ಭಾರಿ ಮಳೆ ನಿರೀಕ್ಷೆ ಇದೆ. ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ವಿವಿಧ ಜಿಲ್ಲೆಗಳಂತೆ ಬೆಂಗಳೂರು ನಗರ ಜಿಲ್ಲೆಯಲ್ಲೂ ಹವಾಮಾನ ಬದಲಾವಣೆಗಳ ಪ್ರಭಾವ ಉಂಟಾಗಲಿದೆ. ಇಲ್ಲಿ ಸಹ ಜೋರು ಮಳೆ ಸಂಭವ ಇದೆ. ಮುಂದಿನ ಮೂರು ದಿನ ಮಳೆಯ ನಿರೀಕ್ಷೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.












Click it and Unblock the Notifications