ಬೆಂಗಳೂರು ಅಭಿವೃದ್ಧಿ ಹೀರಿಕೊಂಡು ಬದುಕುವ ಜೀವಿ: ಆಂಧ್ರ ಸಚಿವರಿಗೆ ಕರ್ನಾಟಕ ತಿರುಗೇಟು!
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ಹಾಗೂ ಸಚಿವ ನಾರಾ ಲೋಕೇಶ್ ಅವರು ಬೆಂಗಳೂರಿನ ಪದೇ ಪದೇ ಹೇಳಿಕೆ ನೀಡುತ್ತಿದ್ದು. ಇದೀಗ ರಾಜ್ಯದ ಸಚಿವರು ಆಂಧ್ರಪ್ರದೇಶದ ಸಚಿವರಿಗೆ ತಿರುಗೇಟು ನೀಡುವುದಕ್ಕೆ ಪ್ರಾರಂಭಿಸಿದ್ದಾರೆ. ಬೆಂಗಳೂರಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಏನೇ ಚರ್ಚೆ ಆದರೂ ನಾರಾ ಲೋಕೇಶ್ ಅವರು ಉದ್ಯಮಿಗಳನ್ನು ಹಾಗೂ ಹೂಡಿಕೆದಾರರನ್ನು ಆಂಧ್ರಪ್ರದೇಶಕ್ಕೆ ಬನ್ನಿ ಎಂದು ಪದೇ ಪದೇ ಆಹ್ವಾನಿಸುತ್ತಿದ್ದರು. ಇದಕ್ಕೆ ಈಗಾಗಲೇ ಸಚಿವ ಎಂ.ಬಿ ಪಾಟೀಲ್ ಅವರು ತಿರುಗೇಟು ನೀಡಿದ್ದಾರೆ. ಇದೀಗ ಮತ್ತೊಬ್ಬ ಸಚಿವರು ಇದಕ್ಕೆ ರಿಯಾಕ್ಟ್ ಮಾಡಿದ್ದಾರೆ.
ಬೆಂಗಳೂರು ಅಭಿವೃದ್ಧಿಯ ವೇಗದಲ್ಲಿದೆ. ಬೆಂಗಳೂರಿನ ಮೇಲೆ ಹಲವು ನಗರಗಳ ಕಣ್ಣು ಇದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶದ ಸರ್ಕಾರವು ಪದೇ ಪದೇ ಬೆಂಗಳೂರಿನ ಬದಲಿಗೆ ನೀವು ಬೇಕಾದರೆ ಆಂಧ್ರಪ್ರದೇಶಕ್ಕೆ ಬನ್ನಿ ಎಂದು ಆಹ್ವಾನವನ್ನು ನೀಡುತ್ತಲ್ಲೇ ಇದೆ. ಇದೀಗ ಮತ್ತೊಂದು ಟ್ವೀಟ್ ಮಾಡಿರುವ ಸಚಿವ ನಾರಾ ಲೋಕೇಶ್ ಅವರು ಟ್ವೀಟ್‌ವೊಂದನ್ನು ಮಾಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರು ತಿರುಗೇಟು ನೀಡಿದ್ದಾರೆ.

ಬೇರೆ ಬೇರೆ ಸಮಸ್ಯೆಗಳ ಕಾರಣಕ್ಕೆ ಬೆಂಗಳೂರಿನ ಹೊರ ವರ್ತುಲ ರಸ್ತೆಯಿಂದ ಹೆಚ್ಚಿನ ಸ್ಟಾರ್ಟ್ಅಪ್‌ಗಳು, ಸಂಸ್ಥೆಗಳು ಉತ್ತರ ಬೆಂಗಳೂರು, ವೈಟ್‌ಫೀಲ್ಡ್ ಕಡೆಗೆ ಸಾಗುತ್ತಿವೆ ಎನ್ನುವ ಸುದ್ದಿಗೆ ರಿಯಾಕ್ಟ್ ಮಾಡಿರುವ ನಾರಾ ಲೋಕೇಶ್ ಅವರು, ಉತ್ತರದ ಮಾತು ಚೆನ್ನಾಗಿದೆ. ಸ್ವಲ್ಪ ಉತ್ತರಕ್ಕೆ ಅನಂತಪುರವಿದೆ.. ಅಲ್ಲಿ ನಾವು ವಿಶ್ವ ದರ್ಜೆಯ ಏರೋಸ್ಪೇಸ್ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ! 😁 ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ದುರ್ಬಲ ವ್ಯವಸ್ಥೆಯನ್ನು ಹೊಂದಿರುವವರು ಅದನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸುವುದು ಸಾಮಾನ್ಯ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಆ ಪ್ರಯತ್ನ ತೀವ್ರ ಹತಾಶೆಯ ಹಂತಕ್ಕೆ ಹೋದರೆ ಅದು ಮತ್ತಷ್ಟು ದುರ್ಬಲವೇ ಆಗಲಿದೆ ಅಷ್ಟೇ ಎಂದು ಆಂಧ್ರಪ್ರದೇಶ ಸರ್ಕಾರದ ಸರ್ಕಸ್‌ಗೆ ತಿರುಗೇಟು ಕೊಟ್ಟಿದ್ದಾರೆ.
ಇಷ್ಟೇ ಅಲ್ಲದೆ, ಬೆಂಗಳೂರಿನ ಸಾಧನೆಗಳ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಪಟ್ಟಿಮಾಡಿದ್ದಾರೆ. ಬೆಂಗಳೂರಿನಲ್ಲಿ 2035 ರವರೆಗೆ ಶೇ 8.5 ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ, ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. 2025 ರಲ್ಲಿ ಆಸ್ತಿ ಬೆಲೆಯಲ್ಲಿ ಶೇಕಡಾ 5 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ.
ನಗರೀಕರಣ, ಹೊಸ ಆವಿಷ್ಕಾರ ಹಾಗೂ ಆರ್ಥಿಕ ಅಭಿವೃದ್ಧಿಯ ವೇಗಕ್ಕಾಗಿ ಜಾಗತಿಕ ಸೂಚ್ಯಂಕಗಳಲ್ಲಿ ಬೆಂಗಳೂರು ಅತ್ಯುನ್ನತ ಶ್ರೇಯಾಂಕ ಪಡೆದು ಮುನ್ನುಗ್ಗುತ್ತಿದೆ. 2025ರ ವೇಳೆಗೆ ಅಂದಾಜು 14.4 ದಶಲಕ್ಷ ಜನಸಂಖ್ಯೆ ಬೆಂಗಳೂರಿನಲ್ಲಿ ಇದ್ದಾರೆ. ಅಲ್ಲದೇ ವಾರ್ಷಿಕ ಶೇ 2.76 ರ ದರದಲ್ಲಿ ನಗರವು ಬೆಳೆಯುತ್ತಿದೆ. ಇದು ಭಾರತದ ಪ್ರಮುಖ ವಲಸೆ ಕೇಂದ್ರಗಳಲ್ಲಿ ಒಂದಾಗಿದೆ (ವಲಸಿಗರ ಸಂಖ್ಯೆ ಹೆಚ್ಚಾಗಿದೆ) ಎಂದು ಹೇಳಿದ್ದಾರೆ. ಮುಂದುವರಿದು ಇನ್ನೊಂದು ಜೀವಿಯಿಂದ ಪೋಷಕಾಂಶಗಳನ್ನು ಹೀರಿಕೊಂಡು ಬದುಕುವ ಜೀವಿಯನ್ನು ಏನೆಂದು ಕರೆಯುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications