ಮದುವೆ ಊಟಕ್ಕೂ ಎಐ ನೆರವು: Buffet GPT ರೂಪಿಸಿದ ಬೆಂಗಳೂರಿನ ಟೆಕ್ಕಿ
ಬೆಂಗಳೂರು: ಮದುವೆ ಎಂದರೆ ಭರ್ಜರಿ ಬಫೆಟ್ ಊಟ ಇರುತ್ತೆ. ಆದರೆ ಅಸಂಖ್ಯಾತ ತಿಂಡಿಗಳ ನಡುವೆ ಏನು ತಿನ್ನಬೇಕು, ಏನು ಬಿಡಬೇಕು ಎಂಬ ಗೊಂದಲ ಬಹುತೇಕ ಎಲ್ಲ ಅತಿಥಿಗಳಿಗೂ ಇರ್ತಾರೆ. ಈ ಸಮಸ್ಯೆಗೆ ಬೆಂಗಳೂರಿನ ಒಬ್ಬ ಸಾಫ್ಟ್‌ವೇರ್ ವೃತ್ತಿಪರ ತಂತ್ರಜ್ಞಾನ ಆಧಾರಿತ ಹೊಸ ಪರಿಹಾರ ಕಂಡುಕೊಂಡಿದ್ದಾರೆ. ಟೆಕ್ಕಿ ಪಂಕಜ್ ಅವರು 'BuffetGPT' ಎಂಬ ಕೃತಕ ಬುದ್ಧಿಮತ್ತೆ (AI) ಆಧಾರಿತ ಟೂಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ಈ ಟೂಲ್ ಮದುವೆ ಬಫೆಟ್‌ನ ಸಂಪೂರ್ಣ ಮೆನುವನ್ನು ಸ್ಕ್ಯಾನ್ ಮಾಡಿ, ಅತಿಥಿಗಳಿಗೆ ವೈಯಕ್ತಿಕ ಆಹಾರ ಯೋಜನೆಯನ್ನು ರೂಪಿಸಿಕೊಡುತ್ತದೆ. ಇದರ ಮೂಲಕ ಹೊಟ್ಟೆಗೆ ಹೆಚ್ಚು ಒತ್ತಡ ಕೊಡದೆ, ಹೆಚ್ಚು ಬಗೆಯ ಆಹಾರವನ್ನು ಸವಿಯಲು ಸಹಾಯವಾಗುತ್ತದೆ ಎನ್ನಲಾಗಿದೆ.

ಭಾರತೀಯ ಮದುವೆಗಳ ಬಫೆಟ್‌ಗಳು ವೈವಿಧ್ಯಮಯ ಆಹಾರ ಆಯ್ಕೆಗಳಿಗೆ ಪ್ರಸಿದ್ಧಿ ಪಡೆದಿವೆ. ಆದರೆ ಎಲ್ಲವನ್ನೂ ತಿನ್ನಲು ಸಾಧ್ಯವಾಗದೆ, "ಅದು ತಿನ್ನಲೇ ಇಲ್ಲ", "ಇದು ಮಿಸ್ ಆಯ್ತು" ಎಂಬ ಬೇಸರದೊಂದಿಗೆ ಹಲವರು ಮದುವೆಯಿಂದ ಹೊರಬರುತ್ತಾರೆ. ಇದೇ ಅನುಭವ ಪಂಕಜ್ ಅವರನ್ನು ಕಾಡಿದ್ದು, ಇದಕ್ಕೆ ತಂತ್ರಜ್ಞಾನ ಬಳಸಿ ಪರಿಹಾರ ಹುಡುಕಲು ಪ್ರೇರೇಪಿಸಿದೆ ಎಂದು ಅವರು ಹೇಳಿದ್ದಾರೆ.
ಏನಿದು BuffetGPT?
ಮದುವೆ ಬಫೆಟ್‌ಗಳನ್ನು ಹಾಸ್ಯಭರಿತವಾಗಿ ಒಂದು ರೀತಿಯ ಸ್ಕ್ಯಾಮ್ ಎಂದು ಕರೆಯುವ ಪಂಕಜ್, ತಮ್ಮ ಅನುಭವವೇ BuffetGPT ಹುಟ್ಟಿಗೆ ಕಾರಣ ಎಂದಿದ್ದಾರೆ. ಇದು ಸಂಪೂರ್ಣ ಬಫೆಟ್ ಅನ್ನು ಸ್ಕ್ಯಾನ್ ಮಾಡಿ, ತಿನ್ನಬೇಕಾಗಿರುವುದರ ಸಲಹೆ ನೀಡುವ ಎಐ ಏಜೆಂಟ್ ಎಂದು ವಿವರಿಸಿದ್ದಾರೆ. ಈ ಟೂಲ್ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಬಫೆಟ್‌ನಲ್ಲಿ ಇರಿಸಿರುವ ಪ್ರತಿಯೊಂದು ಆಹಾರ ಪದಾರ್ಥವನ್ನು ಗುರುತಿಸುತ್ತದೆ. ನಂತರ ಮಾನವನ ಹೊಟ್ಟೆಯ ಸಾಮರ್ಥ್ಯದ ಆಧಾರದಲ್ಲಿ ಎಷ್ಟು ತಿನ್ನಬೇಕು, ಯಾವ ಆಹಾರವನ್ನು ಬಿಡಬೇಕು ಎಂಬುದನ್ನು ಲೆಕ್ಕ ಹಾಕುತ್ತದೆ.
ಮದುವೆಯಲ್ಲೇ ಪ್ರಯೋಗ
BuffetGPT ಇನ್ನೂ ಆರಂಭಿಕ ಹಂತದಲ್ಲಿದ್ದು, ಆಲ್ಫಾ ಆವೃತ್ತಿಯಾಗಿ ಮಾತ್ರ ಪರೀಕ್ಷಿಸಲಾಗಿದೆ. ಸ್ನೇಹಿತನ ಮದುವೆಯಲ್ಲಿ ಮೊದಲ ಬಾರಿ ಈ ಟೂಲ್ ಪ್ರಯೋಗಿಸಲಾಗಿದ್ದು, "ನಿರೀಕ್ಷೆಗೂ ಮೀರಿದ ಸಮರ್ಪಕ ಫಲಿತಾಂಶ ನೀಡಿದೆ" ಎಂದು ಪಂಕಜ್ ತಿಳಿಸಿದ್ದಾರೆ. ಮದುವೆ ಊಟದ ಅನುಭವಕ್ಕೂ ಕೃತಕ ಬುದ್ಧಿಮತ್ತೆ ಕಾಲಿಟ್ಟಿರುವ ಈ ಹೊಸ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದು, ಭವಿಷ್ಯದಲ್ಲಿ ಮದುವೆ ಅತಿಥಿಗಳಿಗೆ ಉಪಯುಕ್ತ ಡಿಜಿಟಲ್ ಮಾರ್ಗದರ್ಶಿಯಾಗುವ ಸಾಧ್ಯತೆ ಇದೆ.
ಈ ಎಐ ಟೂಲ್ ಸಂಪೂರ್ಣ ಬಫೆಟ್‌ನ್ನು ಸ್ಕ್ಯಾನ್ ಮಾಡುವ ಮೂಲಕ ಲಭ್ಯವಿರುವ ಎಲ್ಲ ಆಹಾರ ಪದಾರ್ಥಗಳ ಮಾಹಿತಿ ನೀಡುತ್ತದೆ. ಇದರಿಂದ ಅತಿಥಿಗಳು ಏನು-ಏನು ಇದೆ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದು. ಪ್ರತಿಯೊಬ್ಬರ ಹೊಟ್ಟೆಯ ಸಾಮರ್ಥ್ಯವನ್ನು ಲೆಕ್ಕಹಾಕಿ ಎಷ್ಟು ಪ್ರಮಾಣದಲ್ಲಿ ಯಾವ ಆಹಾರ ತಿನ್ನಬೇಕು ಎಂಬ ವೈಯಕ್ತಿಕ ಸಲಹೆ ನೀಡುತ್ತದೆ. ಇದರಿಂದ ಹೊಟ್ಟೆ ತುಂಬಿಕೊಂಡು ಅಸೌಕರ್ಯ ಅನುಭವಿಸುವ ಪರಿಸ್ಥಿತಿ ತಪ್ಪುತ್ತದೆ. ಯಾವ ಆಹಾರವನ್ನು ಆದ್ಯತೆಯಾಗಿ ಸವಿಯಬೇಕು, ಯಾವುದನ್ನು ಬಿಡಬಹುದು ಎಂಬ ಸ್ಪಷ್ಟ ಮಾರ್ಗದರ್ಶನ ಸಿಗುತ್ತದೆ. ಇದರಿಂದ 'ಇದು ತಿನ್ನಬೇಕಿತ್ತಲ್ಲ' ಎಂಬ ಪಶ್ಚಾತ್ತಾಪ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.












Click it and Unblock the Notifications