Bengaluru Suburban Train: ಉಪನಗರ ರೈಲು ಯೋಜನೆ ಕಾಮಗಾರಿ ಎಲ್ಲಿಗೆ ಬಂತು?-ಇಲ್ಲಿದೆ ಮಾಹಿತಿ
ಬೆಂಗಳೂರು, ಫೆಬ್ರವರಿ, 08: ರಾಜ್ಯ ರಾಜಧಾನಿ ಬೆಂಗಳೂರು ರೈಲ್ವೆ, ಮೆಟ್ರೋ ಕ್ಷೇತ್ರದಲ್ಲಂತೂ ಅಭಿವೃದ್ಧಿ ಕಾಣುತ್ತಲೇ ಇದೆ. ಇನ್ನು ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-4ಕ್ಕೆ ಟೆಂಡರ್ ಆಗಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ. ಆದರೆ ಜಮೀನು ಹಸ್ತಾಂತರ ಆಗಿಲ್ಲದಿರುವುದು ಯೋಜನೆ ವಿಳಂಬಕ್ಕೆ ಕಾರಣ ಆಗಿದೆ.
ಹೀಲಲಿಗೆಯಿಂದ ರಾಜಾನುಕುಂಟೆಗೆ ಸಂಪರ್ಕಿಸುವ ಈ ಕಾರಿಡಾರ್ 9 ಕಿಲೋ ಮೀಟರ್ ಎತ್ತರಿಸಿದ ಮಾರ್ಗ ಮತ್ತು 38 ಕಿಲೋ ಮೀಟರ್ ನೆಲಮಟ್ಟದ ಮಾರ್ಗವನ್ನು ಒಳಗೊಂಡಿದೆ. ನೈರುತ್ಯ ರೈಲ್ವೆಯಿಂದ ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿಗೆ (ಕೆ-ರೈಡ್) 193 ಹೆಕ್ಟೇರ್ ಭೂಮಿ ಹಸ್ತಾಂತರ ಆಗಬೇಕಿದೆ. 2023ರ ಡಿಸೆಂಬರ್‌ನಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಮೂರು ವಾರ ಕಳೆದರೂ ಭೂಮಿ ಹಸ್ತಾಂತರ ಆಗಿಲ್ಲ.

ಈ ಮಾರ್ಗದಲ್ಲಿ ರಾಜಾನಕುಂಟೆ, ಮುದ್ದನಹಳ್ಳಿ, ಯಲಹಂಕ (ಎಲಿವೇಟೆಡ್ ಇಂಟರ್‌ಚೇಂಜ್), ಜಕ್ಕೂರು, ಹೆಗಡೆ ನಗರ, ಥಣಿಸಂದ್ರ, ಹೆಣ್ಣೂರು, ಹೊರಮಾವು, ಚನ್ನಸಂದ್ರ, ಬೆನ್ನಿಗಾನಹಳ್ಳಿ (ಇಂಟರ್‌ಚೇಂಜ್), ಕಗ್ಗದಾಸಪುರ, ಮಾರತ್ತಹಳ್ಳಿ (ಎಲಿವೇಟೆಡ್), ಬೆಳ್ಳಂದೂರು ರಸ್ತೆ, ಕಾರ್ಮೆಲರಾಂ, ಅಂಬೇಡ್ಕರ್ ನಗರ, ಹುಸ್ಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮತ್ತು ಹೀಲಲಿಗೆಯಲ್ಲಿ ನಿಲ್ದಾಣಗಳು ನಿರ್ಮಾಣ ಆಗಲಿವೆ.
ಎಲ್ ಆ್ಯಂಡ್ ಟಿ ಕಂಪನಿ 1040.51 ಕೋಟಿ ರೂಪಾಯಿಗೆ ಗುತ್ತಿಗೆ ಪಡೆದಿದ್ದು, 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಆದರೆ ಕಾಮಗಾರಿಗೆ ಬೇಕಿರುವ ಶೇಕಡಾ 85ರಷ್ಟು ಜಮೀನು ರೈಲ್ವೆ ಹಳಿಗಳಿಗೆ ಹೊಂದಿಕೊಂಡಿದೆ. ಈ ಭೂಮಿಯನ್ನು ನೈರುತ್ಯ ರೈಲ್ವೆ ಭೂಮಿ ಹಸ್ತಾಂತರಿಸಬೇಕು. ಉಳಿದ ಶೇಕಡಾ 15ರಷ್ಟು (34 ಹೆಕ್ಟೇರ್) ಜಮೀನು ಖಾಸಗಿ ಆಗಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕೆ-ರೈಡ್ ಸ್ವಾಧೀನಪಡಿಸಿಕೊಳ್ಳಬೇಕಿದೆ.
4 ಕಾರಿಡಾರ್‌ಗಳಲ್ಲಿ ಚಿಕ್ಕಬಾಣಾವರ-ಬೈಯಪ್ಪನಹಳ್ಳಿವರೆಗಿನ 2ನೇ ಕಾರಿಡಾರ್ ಕಾಮಗಾರಿ ಮಾತ್ರ ನಡೆಯುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ ಎಂಬ ಮಾಹಿತಿ ಇದೆ. ತಿಂಗಳಿಗೆ ಶೇಕಡಾ 5ರಷ್ಟು ಕಾಮಗಾರಿ ಆದರೂ ಮುಗಿಸಬೇಕು. ಕಾರಿಡಾರ್-2 ಟೆಂಡರ್ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿಯೇ ಕಾರಿಡಾರ್-4 ಅನ್ನೂ ಪಡೆದಿದೆ. 2026ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಆದರೆ ಆ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಗಳು ಕಡಿಮೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications