Bengaluru Suburban Rail Project: ಹಳ್ಳ ಹಿಡಿದ ₹15,767 ಕೋಟಿ ವೆಚ್ಚದ ಕಾಮಗಾರಿ, ಜನಸಾಮಾನ್ಯರು ಹೇಳೋದೇನು ಗೊತ್ತಾ?
Bengaluru Suburban Rail: ಬಹು ನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿ 2025ರ ವೇಳೆಗೆ ಮುಗಿಯುತ್ತದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದೀಗ ಮತ್ತೆ ಈ ಗಡುವನ್ನು ವಿಸ್ತರಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಬಗ್ಗೆ ಜನಸಾಮಾನ್ಯರು ಹೇಳುವುದೇನು ಎಂದು ಇಲ್ಲಿ ತಿಳಿಯಿರಿ.
ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರವು 2025ಕ್ಕೆ ಇದ್ದ ಗಡುವನ್ನು ಇದೀಗ 2027ಕ್ಕೆ ವಿಸ್ತರಿಸಿದೆ. 40 ವರ್ಷಗಳಿಂದ ಬಾಕಿ ಉಳಿದಿದ್ದ ಈ ಯೋಜನೆಯನ್ನು 40 ತಿಂಗಳಲ್ಲಿ ಅಂದರೆ 2025ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮೂಲತಃ ಜೂನ್ 2022ರಲ್ಲಿ ಭರವಸೆ ನೀಡಿದ್ದರು.

ರೈಲ್ವೆ ಸಚಿವಾಲಯದಿಂದ ಈ ಯೋಜನೆಗೆ ₹15,767 ಕೋಟಿ ರೂಪಾಯಿ ಮಂಜೂರಾಗಿದೆ ಎನ್ನುವ ಮಾಹಿತಿ ನೀಡಿದ್ದು, ನಾಲ್ಕು ಕಾರಿಡಾರ್‌ಗಳಲ್ಲಿ 58 ನಿಲ್ದಾಣಗಳೊಂದಿಗೆ 148 ಕಿಲೋ ಮೀಟರ್ ಉಪನಗರ ರೈಲ್ವೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಯೋಜನೆಗೆ ಕರ್ನಾಟಕ ಸರ್ಕಾರ ಶೇಕಡಾ 50ರಷ್ಟು ಹಣ ನೀಡಿದರೆ, ರೈಲ್ವೆ ಸಚಿವಾಲಯ ಶೇಕಡಾ 50 ರಷ್ಟು ಹಣ ನೀಡಲಾಗುತ್ತದೆ ಎಂದು ತಿಳಿದುಬಂದಿತ್ತು.
ಇನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಈ ಯೋಜನೆಯ ವಿಳಂಬವದ ಬಗ್ಗೆ ರಾಜ್ಯದ ಸರ್ಕಾರವನ್ನು ದೂಷಿಸಿದ್ದಾರೆ. "ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಈ ಯೋಜನೆ ಕಾಮಗಾರಿ ಮುಕ್ತಾಯಕ್ಕೆ 2027ಕ್ಕೆ ಗಡುವು ನೀಡಿದೆ. ಅತೀ ಬೇಗನೆ ಇದನ್ನು ಕೈಗೆತ್ತಿಕೊಳ್ಳಬೇಕು. ನಾನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ಮತ್ತು ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನು ಮುಂದಿಟ್ಟರೆ ಅವರು ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಿದ್ಧರಿದ್ದಾರೆ" ಎಂದು ಹೇಳಿದರು.
ಮತ್ತೊಂದೆಡೆ ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಯೋಜನೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಇದಕ್ಕೆ ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕಬಾಣಾವರದ ನಿವಾಸಿ ಶ್ರೀನಿವಾಸ್ ನಾಯಕ್ ಮಾತನಾಡಿ, "2020ರ ಅಕ್ಟೋಬರ್‌ನಲ್ಲಿ ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಿದಾಗ 72 ತಿಂಗಳೊಳಗೆ (6 ವರ್ಷ) ಪೂರ್ಣಗೊಳ್ಳಬೇಕಿತ್ತು. ಆದರೆ ಇದುವರೆಗೂ ಯಾವುದೇ ಪ್ರಗತಿ ಆಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಕಣ್ಣಾಮುಚ್ಚಾಲೆ ಆಟ ಆಡುತ್ತಿವೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈಟ್‌ಫೀಲ್ಡ್‌ನ ನಿವಾಸಿಯೊಬ್ಬರು ಮಾತನಾಡಿ, "ಸಿಎಂ, ಸಂಸದರು, ಶಾಸಕರು, ಉನ್ನತ ಅಧಿಕಾರಿಗಳು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ. ಕಾರಣ ಉಪನಗರ ರೈಲು ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದು, ಇದೇ ಉತ್ತಮ ಸಮಯವಾಗಿದೆ. ಈ ಹಿನ್ನೆಲೆ ಈ ಪ್ರಮುಖ ಯೋಜನೆಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸೂಕ್ತ ಸಮಯದ ಒಳಗೆ ಪೂರ್ಣಗೊಳಿಸಬೇಕು ಎಂದು ನಾವು ಸಂಸದ ಅಭ್ಯರ್ಥಿಗಳಿಗೆ ಒತ್ತಾಯ ನೀಡುತ್ತೇವೆ," ಅಂತಾ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಅಲ್ಲದೆ, ನಗರದ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು, ರೈಲ್ವೆ ಸಚಿವಾಲಯವು ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸುಮಾರು 287 ಕಿಲೋ ಮೀಟರ್ ವೃತ್ತಾಕಾರದ ರೈಲು ಯೋಜನೆಯನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಹೊರಡಿಸಿದೆ.
ಬೆಂಗಳೂರು ನಗರದ ಸುತ್ತಲಿನ ನಿಡವಂಡ-ದೊಡ್ಡಬಳ್ಳಾಪುರ (40.9 ಕಿಮೀ), ದೊಡ್ಡಬಳ್ಳಾಪುರ-ದೇವನಹಳ್ಳಿ (28.5 ಕಿಮೀ), ದೇವನಹಳ್ಳಿ-ಮಾಲೂರು (46.5 ಕಿಮೀ), ಮಾಲೂರು-ಹೀಲಳಿಗೆ (52 ಕಿಮೀ), ಹೆಜ್ಜಾಲ-ಸೋಲೂರು (43.5 ಕಿಮೀ), ಸೋಲೂರು- ನಿಡವಂಡ (34.2 ಕಿಮೀ) ಮತ್ತು ಹೆಜ್ಜಲ-ಹೀಳಲಗಿ (42 ಕಿಮೀ) ವೆಗೆ ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಹೊರಡಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications