Bengaluru Suburban Rail: ಕಾರಿಡಾರ್-2 'ಮಲ್ಲಿಗೆ' ಅಪ್‌ಡೇಟ್
ಬೆಂಗಳೂರು, ನವೆಂಬರ್ 07: ಉದ್ಯಾನ ನಗರಿಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ 'ಮಲ್ಲಿಗೆ' (ಕಾರಿಡಾರ್-2) ಬೆನ್ನಿಗಾನಹಳ್ಳಿ-ಮತ್ತಿಕೆರೆ ನಡುವೆ ಸಂಪರ್ಕ ಕಲ್ಪಿಸಲಿದ್ದು, ಈ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂಉಪ ನಗರ ರೈಲು ಯೋಜನೆ ಸೌಲಭ್ಯ ಸಿಗಲಿದೆ. ಈ ಮಾರ್ಗದ ಕುರಿತು ಅಪ್‌ಡೇಟ್ ಒಂದಿದೆ.
ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಮೂಲಕ ಅನುಷ್ಠಾನ ಮಾಡಲಾಗುತ್ತಿದೆ. ಸುಮಾರು 149 ಕಿ. ಮೀ. ಮಾರ್ಗದ ಬಿಎಸ್‌ಆರ್‌ಪಿ ಯೋಜನೆ 4 ಕಾರಿಡಾರ್ 64 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 'ಮಲ್ಲಿಗೆ' ಕಾರಿಡಾರ್ ಮೂಲಕ ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಸಂಚಾರವನ್ನು ನಡೆಸಬಹುದಾಗಿದೆ.

'ಮಲ್ಲಿಗೆ' ಕಾರಿಡಾರ್‌ನ ರೈಲು ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಹೈದರಾಬಾದ್ ಮೂಲದ ಎನ್‌ಸಿಸಿ ಲಿಮಿಟೆಡ್ ಕಡಿಮೆ ವೆಚ್ಚದ ಟೆಡರ್ ಸಲ್ಲಿಕೆ ಮಾಡಿದ ಕಂಪನಿಯಾಗಿದೆ. ಮಾಹಿತಿಗಳ ಪ್ರಕಾರ ಲಿಮಿಟೆಡ್ 556 ಕೋಟಿ ರೂ. ಮೊತ್ತದ ಬಿಡ್ ಸಲ್ಲಿಸಿದೆ.
ನಿಲ್ದಾಣಗಳು: 'ಮಲ್ಲಿಗೆ' ಕಾರಿಡಾರ್ ಒಟ್ಟು 24 ಕಿ. ಮೀ. ಜಾಲವನ್ನು ಹೊಂದಿದೆ. ಇದರಲ್ಲಿ 14 ನಿಲ್ದಾಣಗಳಿವೆ. ಬೆನ್ನಿಗಾನಹಳ್ಳಿ, ಕಸ್ತೂರಿ ನಗರ, ಸೇವಾ ನಗರ, ಬಾಣಸವಾಡಿ, ನಾಗವಾರ, ಕನಕ ನಗರ, ಹೆಬ್ಬಾಳ, ಮತ್ತಿಕೆರೆ ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಪ್ರವೇಶ ಮತ್ತು ನಿರ್ಗಮನ ದ್ವಾರ ರಚನೆ, ಮೇಲ್ಸೇತುವೆ ನಿರ್ಮಾಣ, ಒಳ ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಕಾಮಗಾರಿಗಳು ಇದರಲ್ಲಿ ಸೇರಿದ್ದವು.
ಈ ಯೋಜನೆ ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್ ಒಟ್ಟು ಎರಡು ಪ್ಯಾಕೇಜ್‌ಗಳಲ್ಲಿ ಯೋಜನೆಯ ಟೆಂಡರ್ ಕರೆಯಲಿದೆ. ಬೆನ್ನಿಗಾನಹಳ್ಳಿ-ಮತ್ತಿಕೆರೆ ಮತ್ತು ಯಶವಂತಪುರ-ಚಿಕ್ಕಬಾಣಾವರ ಎಂದು ಯೋಜನೆಯನ್ನು ವಿಭಾಗಿಸಲಾಗಿದೆ. ಯಶವಂತಪುರ-ಚಿಕ್ಕಬಾಣಾವರದ ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.
ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕಳೆದ ವಾರ 'ಮಲ್ಲಿಗೆ'ಕಾರಿಡಾರ್‌ನ ಕಾಮಗಾರಿ ವೀಕ್ಷಣೆ ಮಾಡಿದ್ದರು. ಸಬ್ ಅರ್ಬನ್ ರೈಲು ಯೋಜನೆಯಲ್ಲಿ 9 ಬೋಗಿಯ ರೈಲು ನಿಲುಗಡೆಗೆ ಅನುಕೂಲವಾಗುವಂತೆ ಪ್ಲಾಟ್ ಫಾರ್ಮ್ ನಿರ್ಮಾಣ ಮಾಡಲಾಗುತ್ತದೆ. ಮೊದಲ ಹಂತದ ಕಾಮಗಾರಿಯನ್ನು ಟೆಂಡರ್ ನೀಡಿದ 24 ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ಷರತ್ತು ಹಾಕಲಾಗಿದೆ.
2023ರಲ್ಲಿ ಮಲ್ಲಿಗೆ ಕಾರಿಡಾರ್ ಮಾರ್ಗದ ನಿಲ್ದಾಣವನ್ನು ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿತ್ತು. ಆಗ ಕೇವಲ ಒಂದು ಸಂಸ್ಥೆ ಮಾತ್ರ ಪಾಲ್ಗೊಂಡಿತ್ತು. 800 ಕೋಟಿ ರೂ. ಮೊತ್ತಕ್ಕೆ ಬಿಡ್ ಸಲ್ಲಿಕೆ ಮಾಡಿತ್ತು. ಆದ್ದರಿಂದ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಲಾಗಿತ್ತು.
ಉಪ ನಗರ ರೈಲು ಯೋಜನೆ ಪ್ಲಾಟ್ ಫಾರ್ಮ್ ಹೇಗಿರಬೇಕು ಎಂಬ ಗೊಂದಲವಿತ್ತು. 2019ರ ವಿಸ್ತೃತ ಯೋಜನಾ ವರದಿ ಅನ್ವಯ 9 ಬೋಗಿಯ ರೈಲು ನಿಲುಗಡೆ ಮಾಡುವಂತೆ ನಿಲ್ದಾಣವನ್ನು ವಿನ್ಯಾಸಗೊಳಿಸಬೇಕಿದೆ. 2022ರಲ್ಲಿ ಮಲ್ಲಿಗೆ ಕಾರಿಡಾರ್ ನಿರ್ಮಾಣದ ಟೆಂಡರ್ ಅನ್ನು ಎಲ್ & ಟಿ ಸಂಸ್ಥೆಗೆ ನೀಡಲಾಗಿದೆ.
ಈ ಮಾರ್ಗದಲ್ಲಿ ಎತ್ತರಿಸಿದ ಎರಡು ನಿಲ್ದಾಣಗಳು, ಎರಡು ಇಂಟರ್ ಚೇಂಜ್ ನಿಲ್ದಾಣಗಳು ಇವೆ. 16.5 ಕಿ. ಮೀ. ಮಾರ್ಗ ನೆಲಮಟ್ಟದಲ್ಲಿ ಮತ್ತು ಹೆಬ್ಬಾಳ-ಯಶವಂತಪುರ ನಡುವೆ 8.5 ನಷ್ಟು ಎತ್ತರಿಸಿದ (ಎಲಿವೇಟೆಡ್) ಮಾರ್ಗ ನಿರ್ಮಾಣಗೊಳ್ಳಲಿದೆ. ಕೆ-ರೈಡ್ ಹಾಕಿರುವ ಗಡುವಿನ ಪ್ರಕಾರ ಕಾರಿಡಾರ್ 2, 4 ಮಲ್ಲಿಗೆ, ಕನಕ 2025 ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಬೇಕು. ಎಲ್ & ಟಿ ಕಂಪನಿಗೆ ಎರಡು ಕಾರಿಡಾರ್ ನಿರ್ಮಾಣದ ಟೆಂಡರ್ ಕೊಡಲಾಗಿದೆ. ಉಪ ನಗರ ರೈಲು ಯೋಜನೆಯಲ್ಲಿ ಉಳಿದ ಎರಡು ಕಾರಿಡಾರ್ ಸಂಪಿಗೆ, ಪಾರಿಜಾತ ಪೂರ್ಣಗೊಳ್ಳುವುದು ಮತ್ತಷ್ಟು ವಿಳಂಬವಾಗಲಿದೆ.












Click it and Unblock the Notifications