ಬೆಂಗಳೂರು ಉಪನಗರ ರೈಲಿಗೆ ರೂ.500 ಕೋಟಿ ಘೋಷಿಸಿದ ಕೇಂದ್ರ: 2 ಕಾರಿಡಾರ್‌ಗೆ ವೇಗ ಸಿಗುವ ನಿರೀಕ್ಷೆ
ಬೆಂಗಳೂರು: ಕೇಂದ್ರ ಸರ್ಕಾರದ ಬಜೆಟ್ 2026ರಲ್ಲಿ ಬೆಂಗಳೂರು ಭಾಗದ ರೈಲು ಅಭಿವೃದ್ಧಿ ಯೋಜನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುದಾನ ಘೋಷಿಸಿದ್ದಾರೆ. ಈ ಹಂಚಿಕೆ ಕಳೆದ ಸಾಲಿಗಿಂತ ಕೊಂಚ ಹೆಚ್ಚು ಎನ್ನಬಹುದು. ಆದರೆ ನಿರೀಕ್ಷೆಯಷ್ಟು ಅಲ್ಲ ಎನ್ನಲಾಗಿದೆ. ಬೆಂಗಳೂರು ಉಪನಗರ ರೈಲು ಸಾರಿಗೆ ಯೋಜನೆಗೆ ಬಜೆಟ್‌ನಲ್ಲಿ 500 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ.
ಬೆಂಗಳೂರು ಉಪನಗರ ರೈಲು ಯೋಜನೆಗೆ (BSRP) ಕೇಂದ್ರ ಬಜೆಟ್ 500 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಕಳೆದ ವರ್ಷ 2025-26ರಲ್ಲಿ 350 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಅದಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 150 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಘೋಷಿಸಲಾಗಿದೆ. ಈ ಬೆಂಗಳೂರು ಉಪನಗರ ರೈಲು ಯೋಜನೆಯು 2020 ರಲ್ಲಿ ಅನುಮೋದನೆ ನೀಡಲಾಯಿತು. ಅಲ್ಲಿಂದ ಈವರೆಗೆ ನಿಧಾನಗತಿಯಲ್ಲಿ ಕಾಮಗಾರಿ ಸಾಗಿದ್ದು, 2027ರಲ್ಲಿ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಈ ಉಪನಗರ ರೈಲು ಯೋಜನೆಗೆ ಅನುದಾನ ಒದಗಿಸಲಾಗುತ್ತದೆ. ಇದರ ಕಾಮಗಾರಿಯನ್ನು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE)ಗೆ ನೀಡಲಾಗಿದೆ. ಈ ಯೋಜನೆಯಿಂದ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಗೆ ರೈಲು ಸೇವೆ ಲಭ್ಯವಾಗಲಿದೆ. ನಗರದ ಒಳಗಿನ ಸಂಚಾರ ನಿಯಂತ್ರಣಗೊಳ್ಳಲಿದೆ. ಆದರೆ ಈ ಕಾಮಗಾರಿಯು ನಿಗದಿತ ವೇಗದಲ್ಲಿ ಸಾಗುತ್ತಿಲ್ಲ.
ಎರಡು ಕಾರಿಡಾರ್ ಕಾಮಗಾರಿ ಪ್ರಗತಿ, ವೇಗ ನೀಡುವ ಅಗತ್ಯತೆ
ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಮತ್ತು ಹೀಲಲಿಗೆ-ರಾಜನಕುಂಟೆ ಎರಡು ಕಾರಿಡಾರ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಭೂಸ್ವಾಧೀನ ಹಾಗೂ ಗುತ್ತಿಗೆದಾರರು ಅರ್ಧಕ್ಕೆ ಕೆಲಸ ಕೈ ಬಿಟ್ಟ ಸಮಸ್ಯೆಗಳು ತಲೆದೂರಿದ್ದವು. ಹೀಗಾಗಿ ಈ ಎರಡು ಮಾರ್ಗಗಳ ನಿರ್ಮಾಣ ಕಾಮಗಾರಿ ವೇಗಕ್ಕೆ ಅಡಚಣೆ ಉಂಟಾಗಿತ್ತು. ಕೆಲವು ವಾರಗಳ ಕಾಲ ಕೆಲಸವು ಸ್ಥಗಿತಗೊಂಡಿತ್ತು.
2025ರಲ್ಲಿ ಕೆ-ರೈಡ್ ಬಾಕಿ ಇರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹೊಸ ಟೆಂಡರ್‌ಗಳನ್ನು ಆಹ್ವಾನಿಸಿತು. ಮುಂಬರುವ ಕರ್ನಾಟಕ ಬಜೆಟ್ 2026ರಲ್ಲಿ ರಾಜ್ಯ ಸರ್ಕಾರ ಒಂದಷ್ಟು ಕೋಟಿ ಹಣ ಘೋಷಿಸದರೆ ದೀರ್ಘಕಾಲದಿಂದ ಬಾಕಿ ಇರುವ ಯೋಜನೆಗೆ ಮರು ಜೀವ ಬರಲಿದೆ. ಕಾಮಗಾರಿ ಕೆಲಸಗಳು ಮತ್ತಷ್ಟು ವೇಗ ಪಡೆಯುವ ನಿರೀಕ್ಷೆ ಇದೆ.
ಬೆಂಗಳೂರು ಏಳು ಹೈಸ್ಪೀಡ್ ರೈಲು ಕಾರಿಡಾರ್
ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವರು ಏಳು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಘೋಷಿಸಿದ್ದಾರೆ. ಇವು ಪ್ರಮುಖ ನಗರಗಳ ನಡುವೆ ವೇಗ ಸಂಪರ್ಕ ಕಲ್ಪಸುತ್ತವೆ. ಅದರಲ್ಲಿ ಎರಡು ಕಾರಿಡಾರ್‌ಗಳು ಬೆಂಗಳೂರು-ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕ ಸಾಧಿಸಲಿವೆ. ಇದು ಈ ಮಹಾನಗರಗಳ ಪ್ರಯಾಣಿಕರಿಗೆ ಅನುಕೂಲ ಒದಗಿಸಲಿದೆ. ಸಂಚಾರದ ಗಣನೀಯ ಸಮಯವನ್ನು ಉಳಿತಾಯ ಮಾಡುತ್ತದೆ.
ಪ್ರಸ್ತಾವಿತ ಐ ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣವಾದರೆ, ಭವಿಷ್ಯದಲ್ಲಿ ರೈಲುಗಳು ಗರಿಷ್ಠ 350 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡುವಷ್ಟು ಸಾಮರ್ಥ್ಯದ ಮಾರ್ಗ ಇದಾಗಿರಲಿವೆ. ಆದರೆ ರೈಲುಗಳು ಈ ಮಾರ್ಗದಲ್ಲಿ ಪ್ರತಿ ಗಂಟೆಗೆ 320 ಕಿಲೋ ಮೀಟರ್ ಮತ್ತು ಸರಾಸರಿ 250 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಮಾಡುವ ಚಿಂತನೆ ಇದೆ.












Click it and Unblock the Notifications