Bengaluru Road: ವೈಟ್‌ಟಾಪಿಂಗ್ ಕಾಮಗಾರಿ, ರಸ್ತೆಗುಂಡಿ ದುರಸ್ತಿಗೆ ವೇಗ: GBA ನಿರ್ದೇಶನ
ಬೆಂಗಳೂರು, ಸೆಪ್ಟಂಬರ್ 24: ಬೆಂಗಳೂರಲ್ಲಿ ರಸ್ತೆಗುಂಡಿ ಸಮಸ್ಯೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಕ್ತಿ ನೀಡಲು ಮುಂದಾಗಿದೆ. ನಗರದ ಎಲ್ಲ ರಸ್ತೆಗಳಲ್ಲಿ ರಸ್ತೆಗುಂಡಿ ಮುಚ್ಚಿಸಲು ಮುಂದಾಗಿದೆ. ಜೊತೆಗೆ ವೈಟ್ ಟಾಪಿಂಗ್ ಕಾಮಗಾರಿಯನ್ನು ನಿಧಾನಗೊಳಿಸುವಂತಿಲ್ಲ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ವೇಗ ನೀಡಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಸಮನ್ವಯತೆಯಿಂದ ಕೆಲಸ ಮಾಡಿವ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ತಿಳಿಸಿದರು.

ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿರುವ ಕಡೆ ಸಮನ್ವಯದೊಂದಿಗೆ ಕೆಲಸ ಆಗಬೇಕು. ಸಂಚಾರಕ್ಕೆ ತೊಂದರೆ ಆಗದಂತೆ ಕ್ರಮವಹಿಸಿ. ವೈಟ್ ಟಾಪಿಂಗ್ ನಡೆಯುತ್ತಿರುವ ರಸ್ತೆಗಳಲ್ಲಿ ಗುಂಡಿಗಳು ಹಾಗೂ ಪ್ಯಾಚ್‌ವರ್ಕ್ ಇದ್ದರೆ ಅದನ್ನು ಗುತ್ತಿಗೆ ಪಡೆದ ಸಂಸ್ಥೆಗಳಿಂದಲೇ ಮುಚ್ಚಿಸಬೇಕು. ಇತರೆ ರಸ್ತೆಗಳ ಗುಂಡಿಗಳನ್ನು ನಗರ ಪಾಲಿಕೆಯ ವಿಭಾಗದ ಇಂಜಿನಿಯರ್‌ಗಳು ತುರ್ತು ಆಧಾರದ ಮೇಲೆ ಮಾಡಬೇಕೆಂದು ನಿರ್ದೇಶಿಸಿದರು.
ಈ ಭಾಗದಲ್ಲಿ ರಸ್ತೆಗುಂಡಿ ದುರಸ್ತಿಗೆ ಕ್ರಮ
ನಾರಾಯಣ ಪಿಳೈ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾರ್ಯ ಪ್ರಗತಿಯಲ್ಲಿದೆ. ಅದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಸೇಂಟ್ ಜಾನ್ಸ್ ಚರ್ಚ್ ರಸ್ತೆಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಬಾಕಿ ಇರುವ ರಸ್ತೆಗುಂಡಿಗಳನ್ನು ಕಾಲ ಮಿತಿಯೊಳಗಾಗಿ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದರು.

ಹಳೆಯ ಪೋಸ್ಟ್ ಆಫೀಸ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ರಸ್ತೆಯ ಅರ್ಧ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಈ ಸಂಬಂಧ ಪೂರ್ಣಗೊಂಡಿರುವ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅನುವುಮಾಡಿ ಉಳಿದರ್ಧ ಭಾಗದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ತ್ವರಿತವಾಗಿ ಮುಗಿಸಬೇಕು.
ಇನ್ನೂ ಕೆ.ಆರ್ ವೃತ್ತದಲ್ಲಿ ಕೆಲವೆಡೆ ರಸ್ತೆ ಮೇಲ್ಮೈ ಹಾಳಾಗಿದೆ. ಅದನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಮೇಲ್ಮೈ ದುರಸ್ತಿ ಮಾಡಬೇಕು. ರೇಸ್ ಕೋರ್ಸ್ ರಸ್ತೆಯಲ್ಲಿ ರಸ್ತೆ ಗುಂಡಿಗಳು ಹಾಗೂ ಪ್ಯಾಚ್‌ವರ್ಕ್ ಅನ್ನು ಎರಡು ದಿನಗಳ ಒಳಗೆ ಕೈಗೊಳ್ಳಬೇಕು. ಚಾಲುಕ್ಯ ವೃತ್ತದಲ್ಲಿ ಪ್ಯಾಚ್‌ವರ್ಕ್ ಹಾಗೂ ರಸ್ತೆ ಮೇಲ್ಮೈ ದುರಸ್ತಿ ಕಾರ್ಯವನ್ನು ಇಂದೇ ಕೈಗೆತ್ತಿಕೊಳ್ಳಬೇಕು. ಜೊತೆಗೆ ತೋಟಗಾರಿಕಾ ವಿಭಾಗದಿಂದ ಸಸಿಗಳನ್ನು ನೆಡುವ ಕೆಲಸವೂ ಆಗಬೇಕೆಂದರು.
ಶಿವಾನಂದ ವೃತ್ತದಲ್ಲಿ ಈಗಾಗಲೇ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೆತ್ತಿಕೊಳ್ಳಳಾಗಿದೆ. ಸರ್ವೀಸ್ ರಸ್ತೆಯ ಪ್ಯಾಚ್ ವರ್ಕ್ ಮಾಡಬೇಕು. ಅದಲ್ಲದೆ ಮಳೆ ನೀರು ಸರಾಗವಾಗಿ ಹರಿದು ಹೋಗುವ ಸಲುವಾಗಿ ಗ್ರೇಟಿಂಗ್ಸ್ ಗಳ ಬಳಿ ಸ್ವಚ್ಛತೆ ಕಾಪಾಡುವುದು, ಮಿಷನ್ ರಸ್ತೆಯ ಮೇಲ್ಮೈ ಹಾಳಾಗಿರುವುದನ್ನು ನಿನ್ನೆ ಡಾಂಬರು ಹಾಕಲಾಗಿದ್ದು, ಬಾಕಿ ರಸ್ತೆ ಗುಂಡಿ/ರಸ್ತೆ ಮೇಲ್ಮೈ ಹಾಳಾಗಿದ್ದರೆ ಅದನ್ನು ಕೂಡಾ ಆದ್ಯತೆ ಮೇರೆಗೆ ದುರಸ್ತಿಗೊಳಿಸಬೇಕು. ಜೆಸಿ ರಸ್ತೆಯಲ್ಲಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.












Click it and Unblock the Notifications