Bengaluru Second Aiport: ಎಎಐ ವರದಿ ಸಲ್ಲಿಕೆ, ಯೋಜನೆ ಅನುಮೋದನೆ ಅಪ್ಡೇಟ್: ಎಂಬಿ ಪಾಟೀಲ್
ಬೆಂಗಳೂರು, ಅಕ್ಟೋಬರ್ 23: ಬೆಂಗಳೂರು ಮತ್ತು ತಮಿಳುನಾಡು ಮಧ್ಯ ತೀವ್ರ ಪೈಪೋಟಿ ಸೃಷ್ಟಿಸಿದ್ದ 'ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ಏರ್‌ಪೋರ್ಟ್' ಅಪ್ಡೇಟ್ ಸಿಕ್ಕಿದೆ. ಬೆಂಗಳೂರಿನಲ್ಲಿನ ಉದ್ದೇಶಿತ ಯೋಜನೆಗೆ ವೇಗ ಸಿಗುವ ಬಗ್ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ರಾಜಧಾನಿ ಸುತ್ತಮುತ್ತಲಿನಲ್ಲಿ ಮೂರು ಸ್ಥಳಗಳನ್ನು ಗುರುತಿಸಲಾಗಿತ್ತು. ಕರ್ನಾಟಕ ಸರ್ಕಾರದ ಮನವಿ ಮೇರೆಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (AAI) ಬಂದು ಸ್ಥಳ ಪರಿಶೀಲನೆ ಮಾಡಲಾಗಿತ್ತು. ಇದೀಗ ಕೆಲವೇ ದಿನಗಳಲ್ಲಿ ಎಎಐ ವರದಿ ಸಲ್ಲಿಕೆ ಆಗಲಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದರು.

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಸಂಬಂಧ ರಾಜ್ಯ ಸರ್ಕಾರ ಗುರುತಿಸಿದ 3 ಸ್ಥಳಗಳ ಪರಿಶೀಲನೆ ಎಎಐ ಮಾಡಿತ್ತು. ಕೆಲವೇ ದಿನಗಳಲ್ಲಿ ಕೇಂದ್ರದ ತಜ್ಞರ ತಂಡ ಏರ್‌ಪೋರ್ಟ್ ಯೋಜನೆ ಅನುಷ್ಠಾನ ಸಂಬಂಧ ವರದಿ ನೀಡಲಿದೆ. ಅವರು ನೀಡುವ ಅಭಿಪ್ರಾಯದ ಆಧಾರದ ಮೇಲೆ ಪರಿಣಿತರ ತಂಡಕ್ಕೆ ಕಾರ್ಯಗತ ಗೊಳಿಸಲು ಸಾಧ್ಯತಾ ವರದಿ (Feasibility Report) ಸಿದ್ದ ಪಡಿಸುವಂತೆ ತಿಳಿಸಲಾಗುವುದು. ಅವರು ನೀಡುವ ಅಭಿಪ್ರಾಯವನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಚರ್ಚಿಸಿ, ಅನುಮೋದನೆ ಪಡೆಯಲಾಗುವುದು ಎಂದರು.
ಒಂದಂತು ಖಚಿತ-ಬೆಂಗಳೂರು ಸಮೀಪದ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅತ್ಯಂತ ಸಮರ್ಥ ಮತ್ತು ಸೂಕ್ತ ಸ್ಥಳದಲ್ಲೇ ನಿರ್ಮಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಎರಡು- ಮೂರು ದಿನಗಳಲ್ಲೇ ಎಎಐ ವರದಿ ಸಲ್ಲಿಕೆಯಾಗುವುದು ಮಹತ್ವ ಪಡೆದುಕೊಂಡಿದೆ.
ಕಾರ್ಯಸಾಧ್ಯತೆ ನೋಡಿಕೊಂಡು ನಿರ್ಮಾಣ
ಇತ್ತೀಚೆಗೆ ನೊಯ್ಡಾ ಏರ್ಪೋರ್ಟ್, ನವಿ ಮುಂಬೈ ಏರ್‌ಪೊರ್ಟ್ ಸ್ಥಾಪಿಸಲಾಗಿದೆ. ಅಲ್ಲಿನ ಭೂಮಿ, ವಾತಾವರಣದ ಗಮನದಲ್ಲಿಟ್ಟುಕೊಂಡು ನಿರ್ಮಿಸಿದ್ದಾರೆ. ಅಲ್ಲಿ ನಿರ್ಮಾಣ ಮಾಡಿದವರಿಗೆ ಅನುಭವಿ ಉಳ್ಳವರಿಗೆ ನಾವು ಯೋಜನೆ ನೀಡಲಿದ್ದೇವೆ. ಸ್ಥಳ ತೋರಿಸಿದರೆ ಮಾತ್ರ ಏರ್‌ಪೋರ್ಟ್ ನಿರ್ಮಾಣವಾಗಲ್ಲ ಎಂದು ಹೇಳಿದರು.
ಏರ್‌ಪೋರ್ಟ್ ನಿರ್ಮಾಣ ಕಂಪನಿಗಳಾದ ಅದಾನಿ, ಟಾಟಾ, ಇತರ ಯಾವುದೇ ಸಂಸ್ಥೆಯವರು ಕಾರ್ಯಸಾಧ್ಯತೆ ನೋಡಿಕೊಂಡು, ಮೂಲಸೌಕರ್ಯ, ಸಾಧಕ ಬಾಧಕ ನೋಡಿಕೊಂಡೆ ನಿರ್ಮಿಸುತ್ತವೆ. ಸ್ಥಳೀಯರ ಆರ್ಥಿಕತೆ, ಭೌಗೋಳಿಕತೆ ನೋಡಿಕೊಂಡು ನಿರ್ಮಿಸಲು ಆ ಕಂಪನಿಗಳು ಮುಂದಾಗುತ್ತಾರೆ ಎಂದು ವಿವರಿಸಿದರು.
ಕೇಂದ್ರದ ಎಎಐ ತಜ್ಞರ ವರದಿ ಸಲ್ಲಿಕೆಯಾದ ಬಳಿಕ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಲಿದ್ದೇವೆ. ರಾಜ್ಯ ಸರ್ಕಾರದ ಮಟ್ಟದಲ್ಲಿ ನೋಡಿಕೊಂಡು ಎಲ್ಲಿಯೇ ಯಾವುದೇ ಸ್ಥಳದಲ್ಲಿ ಮಾಡಿದರೂ ಸಹಿತ ಮೆರಿಟ್ ನೋಡಿಕೊಂಡು ಮಾಡುತ್ತೇವೆ. ಈ ಬಗ್ಗೆ ವರದಿ ಬಂದ ಚರ್ಚಿಸಿ ಅನುಮೋದನೆ ಪಡೆಯುತ್ತೇವೆ ಎಂದು ಎಂಬಿ ಪಾಟೀಲ್ ಅವರು ಪುನರುಚ್ಚಿಸಿದ್ದಾರೆ. ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications