Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ: ಶಿರಾ - ಬಿಡದಿ ಏನಿದು ಲೆಕ್ಕಾಚಾರ: ಎಂ.ಬಿ ಪಾಟೀಲ್ ಹೇಳಿದ್ದೇನು?
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಚರ್ಚೆಗಳು ಶುರುವಾಗಿವೆ. ಇದೀಗ ಬಿಡದಿ ಹಾಗೂ ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ವಿಚಾರವಾಗಿ ಪರ - ವಿರೋಧ ಚರ್ಚೆಗಳು ನಡೆದಿವೆ. ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಹಲವು ಲಾಭಗಳಿವೆ ಎಂದು 34 ಜನ ಶಾಸಕರು ಹಾಗೂ ಸಚಿವರು ಒತ್ತಾಯಿಸುತ್ತಿದ್ದಾರೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಲವು ಸಂಕಷ್ಟಗಳು ಮುಂದುವರಿದಿವೆ. ಇದರ ನಡುವೆ ಹೊಸ ಪ್ರದೇಶಗಳ ಹೆಸರು ಸಹ ಸೇರ್ಪಡೆಯಾಗುತ್ತಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ನಗರದ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದ ಮೇಲೆಯೂ ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ. ಶಿರಾದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ.

ಶಿರಾದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಕೊಟ್ಟಿರುವ ಕಾರಣಗಳು
ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಆಗುತ್ತದೆ: ಇನ್ನು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವನ್ನು ಶಿರಾದಲ್ಲಿ ಮಾಡುವುದರಿಂದ ಬೆಂಗಳೂರಿನ ಮೇಲೆ ಒತ್ತಡ ಕಡಿಮೆಯಾಗಲಿದೆ. ಅಲ್ಲದೇ ಬೆಂಗಳೂರು ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಇನ್ನಷ್ಟು ಟ್ರಾಫಿಕ್ ಜಾಮ್ ಹೆಚ್ಚಳವಾಗಲಿದೆ. ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಿರಾ ಸೂಕ್ತ ಸ್ಥಳವಾಗಿದೆ.
ಹೆಚ್ಚು ಸರ್ಕಾರಿ ಭೂಮಿ ಇದೆ: ಎರಡನೇ ವಿಮಾನ ನಿಲ್ದಾಣಕ್ಕೆ ಬರೋಬ್ಬರಿ 4000 ಸಾವಿರದಿಂದ 5000 ಸಾವಿರ ಎಕರೆಯಷ್ಟು ಜಾಗ ಬೇಕು. ಇದಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗಲಿದೆ. ಹೀಗಾಗಿ, ಸರ್ಕಾರಿ ಜಾಗವಿದ್ದರೆ ವೆಚ್ಚ ಕಡಿಮೆ. ಶಿರಾದಲ್ಲಿ ವಿಶಾಲವಾದ ಹಾಗೂ ಸಾಕಷ್ಟು ಸರ್ಕಾರಿ ಜಾಗವಿದೆ. ಇದರಿಂದ ಕಡಿಮೆ ಬೆಲೆಗೆ ಜಾಗ ಸಿಗಲಿದೆ. ಇಲ್ಲವೇ ಭೂಮಿ ಹುಡುಕಾಟಕ್ಕೆ ಹೆಚ್ಚು ಸಮಸ್ಯೆ ಆಗುವುದಿಲ್ಲ ಎನ್ನುವ ವಾದವೂ ಇದೆ.
ಹಲವು ಜಿಲ್ಲೆಗಳಿಗೆ ಅನುಕೂಲ: ಇನ್ನು ಶಿರಾದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವುದರಿಂದ ಕರ್ನಾಟಕದ ಹಲವು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಅದೇ ಬೇರೆ ಭಾಗಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ, ಹೊರ ರಾಜ್ಯಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ. ಶಿರಾದಲ್ಲಿ ಹೊಸ ಕೈಗಾರಿಕೆ ಬರುವುದಕ್ಕೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರವನ್ನು ಇಲ್ಲಿನ ಶಾಸಕರು ಮಂಡಿಸಿದ್ದಾರೆ. ರಾಜ್ಯ ಸರ್ಕಾರವು ಇದಕ್ಕೆ ಅನುಮತಿ ನೀಡದೆ ಇರುವ ಹಿನ್ನೆಲೆಯಲ್ಲಿ ಕೇಂದ್ರದ ಮೊರೆ ಹೋಗಿದ್ದಾರೆ.
ಶಿರಾ - ಬಿಡದಿ ವಿಮಾನ ನಿಲ್ದಾಣ: ಸಚಿವ ಎಂ.ಬಿ ಪಾಟೀಲ್ ಹೇಳಿದ್ದೇನು ?
ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಸಚಿವ ಎಂ.ಬಿ ಪಾಟೀಲ್ ಅವರು ಮತ್ತೊಮ್ಮೆ ರಿಯಾಕ್ಟ್ ಮಾಡಿದ್ದಾರೆ. ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಈ ಜಾಗದಲ್ಲಿ ಕೇಂದ್ರ ತಂಡ ಈಗಾಗಲೇ ಪರಿಶೀಲನೆ ಮಾಡಿದೆ. ಇದೀಗ ಇನ್ನೊಂದು ತಜ್ಞರ ತಂಡವು ಅಧ್ಯಯನ ವರದಿಯನ್ನು ಮಂಡಿಸಲಿದೆ. ಆದರೆ, ಶಿರಾದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಇಲ್ಲಿ ಬೇಕಾದರೆ ಜಿಲ್ಲಾ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಬಿಡದಿ ಲೆಕ್ಕಾಚಾರವೇನು: ಇನ್ನು ಬಿಡದಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಅನುಕೂಲ ಆಗಲಿದೆ ಎಂದು ಹೇಳಲಾಗಿದೆ. ಬಿಡದಿಗೆ ಬೆಂಗಳೂರಿನಿಂದ ಕೆಲವೇ ಕಿ.ಮೀ ಅಂತರವಿದೆ. ಅಲ್ಲದೇ ಮೆಟ್ರೋ ಸೇವೆ ಇರುವುದರಿಂದ ಇದು ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications