Bengaluru Second Airport: ಬೆಂಗಳೂರು 2ನೇ ವಿಮಾನ ನಿಲ್ದಾಣದಿಂದ ಕೆಂಪೇಗೌಡ ಏರ್‌ಪೋರ್ಟ್‌ನ ಸ್ಥಿತಿ ಏನಾಗುತ್ತೆ?
ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಎಲ್) ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ತನ್ನ ಸೇವೆಯ ಮೂಲಕ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಈಗಾಗಲೇ ಎರಡು ಟರ್ಮಿನಲ್‌ಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದರೂ ಈ ವಿಮಾನ ನಿಲ್ದಾಣದ ಮೇಲಿನ ದಟ್ಟಣೆ ಕಾರಣದಿಂದ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈಗಾಗಲೇ ಇದಕ್ಕೆ ಮೂರು ಸ್ಥಳ ಗುರುತು ಮಾಡಿ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಾಯುತ್ತಿದೆ. ಒಂದು ವೇಳೆ ಈ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೆ, ಈಗಿರುವ ಕೆಂಪೇಗೌಡ ಏರ್‌ಪೋರ್ಟ್‌ಗೆ ಲಾಭನಾ? ನಷ್ಟನಾ ಎಂಬ ಚರ್ಚೆಗಳು ಕೂಡ ನಡೆಯುತ್ತಿವೆ. ಎರಡನೇ ಏರ್‌ಪೋರ್ಟ್ ಬಗ್ಗೆ ಜನ ಏನೆಲ್ಲ ಅಭಿಪ್ರಾಯಪಟ್ಟಿದ್ದಾರೆ ಎಂಬ ವಿವರ ಇಲ್ಲಿದೆ..
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿನಿಂದ ಕರೆಯಲಾಗುತ್ತಿದೆ. ಸುಮಾರು ಒಂದು ದಶಕಗಳಿಂದಲೂ ಹೆಚ್ಚಿನ ಕಾಲ ಒಂದು ಟರ್ಮಿನಲ್ ಮೂಲಕ ಕಾರ್ಯಾಚರಣೆ ನಡೆಸುತ್ತಿತ್ತು. ಇತ್ತೀಚೆಗಷ್ಟೇ ಜಾಗತಿಕ ವ್ಯವಸ್ಥೆಯೊಂದಿಗೆ ಎರಡನೇ ಟರ್ಮಿನಲ್ ಕೂಡ ತನ್ನ ಸೇವೆ ಶುರು ಮಾಡಿದೆ. ಈ ಹಿನ್ನೆಲೆ ಭಾರತದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪೈಕಿ ಮುಂಚೂಣಿಯಲ್ಲೂ ಇದೆ. ಪ್ರಯಾಣಿಕರ ಸೇವೆ, ಟರ್ಮಿನಲ್ ಟು ವಿನ್ಯಾಸ, ಅಚ್ಚುಕಟ್ಟಾದ ನಿರ್ವಹಣೆಯಿಂದಲೂ ಖ್ಯಾತಿ ಗಳಿಸಿದೆ. ಇದೀಗ ರಾಜ್ಯ ಸರ್ಕಾರ ನಿರ್ಮಿಸಲು ಮುಂದಾಗಿರುವ ಎರಡನೇ ಏರ್‌ಪೋರ್ಟ್‌ನಿಂದ ಈ ಹಳೇ ವಿಮಾನ ನಿಲ್ದಾಣದ ಮೇಲೂ ಕೆಲ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳು ಬೀರಬಹುದು ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವು ಕೆಂಪೇಗೌಡ ಏರ್‌ಪೋರ್ಟ್ ಮೇಲಿನ ಒತ್ತಡವನ್ನು ಸಹಜವಾಗಿ ಕಡಿಮೆ ಮಾಡಬಹುದು. ಪ್ರಮುಖ ಅಂತಾರಾಷ್ಟ್ರೀಯ ಹಾಗೂ ವಾಣಿಜ್ಯ ವಿಮಾನಗಳ ಸರಾಗ ನಿರ್ವಹಣೆಗೂ ಇದರಿಂದ ಅನುಕೂಲವಾಗಲಿದೆ. ಹೊಸ ವಿಮಾನ ನಿಲ್ದಾಣದ ಮೂಲಕ ಹೆಚ್ಚುವರಿ ಪ್ರಯಾಣಿಕರು ಬೆಂಗಳೂರಿಗೆ ಬರಲು ಪ್ರೋತ್ಸಾಹವೂ ಸಿಗುತ್ತದೆ ಎಂದು ಅಂದಾಜಿಸಲಾಗಿದೆ.
ಮುಖ್ಯವಾಗಿ ಬೆಂಗಳೂರಿನ ದೊಡ್ಡ ತಲೆನೋವಾಗಿರುವ ಟ್ರಾಫಿಕ್ ಇದೀಗ ಏರ್‌ಪೋರ್ಟ್ ರಸ್ತೆಗೂ ವಕ್ಕರಿಸಿದೆ. ಹೊಸ ಏರ್‌ಪೋರ್ಟ್ ನಿರ್ಮಾಣವಾದರೆ ಉತ್ತರ ಬೆಂಗಳೂರು ಭಾಗದಲ್ಲಿ ಟ್ರಾಫಿಕ್ ಗಣನೀಯವಾಗಿ ಕಡಿಮೆಯಾಗಬಹುದು. ವ್ಯಾಪಾರ ಹಾಗೂ ಉದ್ಯಮ ದೃಷ್ಟಿಯಿಂದ ನೋಡುವುದಾದರೆ, ಹೊಸ ಏರ್‌ಪೋರ್ಟ್ ಸುತ್ತಮುತ್ತ ವ್ಯಾಪಾರ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನವೂ ಸಿಗಲಿದೆ. ಬೆಂಗಳೂರಿನಲ್ಲೇ ಎರಡು ವಿಮಾನ ನಿಲ್ದಾಣಗಳ ಕಾರ್ಯಾಚರಣೆಯಿಂದ ಉದ್ಯೋಗಾವಕಾಶಗಳು ಕೂಡ ಹೆಚ್ಚಾಗಬಹುದು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಕೆಂಪೇಗೌಡ ಏರ್‌ಪೋರ್ಟ್‌ಗೆ ಏನೆಲ್ಲ ನಷ್ಟ?
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ಈಗಾಗಲೇ ಈ ಭಾಗ ಅಭಿವೃದ್ಧಿಯಲ್ಲಿ ಸಾಗಿದೆ. ಈಗ ಎರಡನೇ ಏರ್‌ಪೋರ್ಟ್‌ನ ಪ್ರತಿಸ್ಪರ್ಧೆಯಿಂದ ಕೆಐಎಎಲ್‌ನ ಆದಾಯ ಕುಗ್ಗುವ ಸಾಧ್ಯತೆ ಇದೆ. ಕೆಐಎಎಲ್‌ಗೆ ಬರುವ ವಿಮಾನ ಸಂಚಾರ ಕಡಿಮೆಯಾದರೆ, ಆದಾಯದ ಮೇಲೆ ನೇರವಾಗಿ ಪರಿಣಾಮ ಬೀಳಬಹುದು. ಈಗಾಗಲೇ ಕೆಂಪೇಗೌಡ ಏರ್‌ಪೋರ್ಟ್ ಎರಡನೇ ರನ್‌ವೇ ಹಾಗೂ ಹೊಸ ಟರ್ಮಿನಲ್‌ಗೆ ಬಂಡವಾಳ ಹೂಡಿಕೆ ಮಾಡಿದೆ. ಹೊಸ ಏರ್‌ಪೋರ್ಟ್‌ನಿಂದ ಇದಕ್ಕೂ ನಷ್ಟವಾಗಬಹುದು.
ಏರ್‌ಲೈನ್ಸ್ ಮತ್ತು ವಾಣಿಜ್ಯ ಸಂಸ್ಥೆಗಳು ಸಹ ಹೊಸ ಏರ್‌ಪೋರ್ಟ್‌ಗೆ ಸ್ಥಳಾಂತರವಾದರೆ ಕೆಐಎಎಲ್‌ನಲ್ಲಿ ವ್ಯವಹಾರ ಕೂಡ ಕುಗ್ಗಬಹುದು. ಎರಡು ವಿಮಾನ ನಿಲ್ದಾಣಗಳ ನಡುವಿನ ಏರ್ ಟ್ರಾಫಿಕ್ ಮ್ಯಾನೇಜ್‌ಮೆಂಟ್‌ಗೂ ಸಮಸ್ಯೆಯಾಗಬಹುದು. ವಿದೇಶಿ ಪ್ರಯಾಣಿಕರು ಹಾಗೂ ಹೊಸ ಪ್ರಯಾಣಿಕರಿಗೆ ಎರಡನೇ ಏರ್‌ಪೋರ್ಟ್‌ನಿಂದ ನಗರ ಪ್ರವೇಶಿಸುವ ಅನುಕೂಲತೆ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೆ, ಇದರಿಂದ ಅವರಿಗೆ ಗೊಂದಲ ಹಾಗೂ ಸಮಸ್ಯೆ ಎದುರಾಗಬಹುದು. ಪರಿಣಾಮ ಏನೇ ಇದ್ದರೂ ಎರಡನೇ ಏರ್‌ಪೋರ್ಟ್ ಬರುವುದಂತೂ ಪಕ್ಕಾ ಎನ್ನಲಾಗಿದೆ.












Click it and Unblock the Notifications