Bengaluru Second Airport: ಯೋಜನೆ ಒಪ್ಪಿಗೆಯಲ್ಲಿ ಕೇಂದ್ರ ಯಾರ ಪರ? ಕರ್ನಾಟಕ ಅಥವಾ ತಮಿಳುನಾಡು!
ಬೆಂಗಳೂರು, ಏಪ್ರಿಲ್ 12: ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Second Airport) ಯೋಜನೆ ಸಾಕಾರಕ್ಕಾಗಿ 03 ಸ್ಥಳಗಳ ಪರಿಶೀಲನೆ ಮುಗಿದಿದೆ. ಇನ್ನೇನು ಕೇಂದ್ರದಿಂದ ಯಾವ ಸ್ಥಳದಲ್ಲಿ ನಿರ್ಮಿಸಿಬೇಕು ಎಂಬ ಸೂಚನೆ, ಯೋಜನೆಗೆ ಅನುಮೋದನೆ ನೀಡುವುದು ಸೇರಿದಂತೆ ಕೆಲವು ಪ್ರಕ್ರಿಯೆ ಬಾಕಿ ಇದೆ. ಏರ್‌ಪೋರ್ಟ್ ನಿಲ್ದಾಣ ಯೋಜನೆ ಪ್ರಕ್ರಿಯೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಎರಡು ಒಂದೇ ಹಂತದಲ್ಲಿವೆ. ಹೀಗಿದ್ದಾಗ ಕೇಂದ್ರ ಸರ್ಕಾರ ಯಾವ ಪರ ಒಲವು ತೋರಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನ ಕುಣಿಗಲ್ ಬಳಿ ಹಾಗೂ ಕನಕಪುರ ರಸ್ತೆಯ ಎರಡು ಕಡೆ ಗುರುತಿಸಲಾಗಿದ್ದ ಸ್ಥಳವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಅಧಿಕಾರಿಗಳು ಬಂದು ಪರಿಶೀಲಿಸಿದ್ದಾರೆ. ತಾಂತ್ರಿಕ ಅಂಶಗಳ ಆಧಾರದಲ್ಲಿ, ಎಲ್ಲಿ ನಿರ್ಮಿಸಿದರೆ ಸೂಕ್ತ ಎಂದು ಪರಿಶೀಲಿಸಿದ್ದಾರೆ. ಈ ತಂಡ ಜಾಗವನ್ನು ಶಿಫಾರಸು ಮಾಡಲಿದೆ. ಅದಕ್ಕೆ ಕೇಂದ್ರ ಒಪ್ಪಿಗೆ ನೀಡಬೇಕಿದೆ.

ಇತ್ತ ಬೆಂಗಳೂರು ಸಮೀಪ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಿಸಲು ಮುಂದಾದ ತಮಿಳುನಾಡು ಸರ್ಕಾರ ಸೂಚಿಸಿದ ಸ್ಥಳವನ್ನು ಕೇಂದ್ರದ ತಂಡ ಬಂದು ಈಗಾಗಲೇ ಪರಿಶೀಲಿಸಿಕೊಂಡು ಹೋಗಿದೆ. ಹೀಗಾಗಿ ಎರಡು ರಾಜ್ಯಗಳು ಹೊಸ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಾಣಕ್ಕೆ ಒಪ್ಪಿಗೆ ಪಡೆಯುವಲ್ಲಿ ಕಾಯುತ್ತಿವೆ.
ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಾಣವಾದರೆ ಬೆಂಗಳೂರಿಗೆ ಸಮಸ್ಯೆ ಆಗಲಿದೆ. ವಲಸೆ ಪ್ರಮಾಣ ಹೆಚ್ಚಾಗಲಿದೆ. ಬೆಂಗಳೂರಲ್ಲಿ ಅಪಾರ ಪ್ರಮಾಣ ತಮಿಳರು ಆಗಮಿಸಬಹುದು. ಸ್ಥಳೀಯರಿಗೆ ಉದ್ಯೋಗ ಸಮಸ್ಯೆ ಆಗಬಹುದು. ಅಲ್ಲದೇ, ಹಾಲಿ ದೇವನಹಳ್ಳಿ ವಿಮಾನ ನಿಲ್ದಾಣದ ಮೇಲಿನ ಸಂಚಾರ ಅವಲಂಬನೆ ಕಡಿಮೆ ಆಗಿ ಆರ್ಥಿಕತೆಗೂ ಹೊಡೆತ ಬೀಳಬಹುದು. ಅಲ್ಲದೇ ಈಗಾಗಲೇ ಹೊಸೂರು ಪ್ರದೇಶ ಕೈಗಾರಿಕೆ ಅಭಿವೃದ್ಧಿಯಲ್ಲಿ ಮುಂದಿದೆ. ಹೊಸೂರು ಸಮೀಪದವರೆಗೆ ನಮ್ಮ ಮೆಟ್ರೋ ಲೈನ್ ನಿರ್ಮಾಣವಾಗಿದೆ. ಇದೆಲ್ಲ ಕಾರಣದಿಂದ ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಏರ್‌ಪೋರ್ಟ್ ನಿರ್ಮಿಸುವ ಮೊದಲೇ ಬೆಂಗಳೂರಿನಲ್ಲಿ ಏರ್‌ಪೋರ್ಟ್ ನಿರ್ಮಾಣ ಯೋಜನೆಗೆ ಹಸಿರು ನಿಶಾನೆ ಪಡೆಯಬೇಕೆಂಬುದು ಕರ್ನಾಟಕದ ಇಂಗಿತವಾಗಿದೆ.
ಈ ವಿಚಾರದಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಪೈಪೋಟಿಗೆ ಬಿದ್ದಿವೆ. ಕೇಂದ್ರಕ್ಕೆ ಹೆಚ್ಚಿನ ತರಿಗೆ ಪಾಲು ಕೊಡುವ ಕರ್ನಾಟಕಕ್ಕೆ ಯೋಜನೆ ವಿಚಾರದಲ್ಲಿ ಮನ್ನಣೆ ಸಿಗಬೇಕು ಎಂಬುದು ಜನರ ಆಶಯ. ಅದಲ್ಲದೇ, ರಾಜ್ಯದಲ್ಲಿ ಬಹುಪಾಲು ತೆರಿಗೆ ಬೆಂಗಳೂರಿನಿಂದಲೇ ಕೇಂದ್ರಕ್ಕೆ ಹೋಗುತ್ತದೆ.

ಕರ್ನಾಟಕದ ಯೋಜನೆಗೆ ಅನುಮೋದನೆ ನೀಡುವ ವಿಶ್ವಾಸ
ಬೆಂಗಳೂರು ಐಟಿ ಕೇಂದ್ರ, ಉದ್ಯಾನ ನಗರಿ, ಸಿಲಿಕಾನ್ ವ್ಯಾಲಿ, ಮಹಾನಗರ, ವಿದೇಶಿ ಕಂಪನಿಗಳ ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳ ಹೀಗೆ ಅನೇಕ ಕಾರಣಗಳಿಂದ ಬೆಂಗಳೂರು ಪ್ರಸಿದ್ಧಿ ಪಡೆದಿದೆ. ಎಲ್ಲ ವಿಧದ ಕಂಪನಿಗಳು, ಕಚೇರಿಗಳು ಇಲ್ಲಿವೆ. ಇವು ಸೇರಿದಂತೆ ಕೆಲವು ಪ್ರಮುಖ ಕಾರಣಗಳಿಂದ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ನಿರ್ಮಿಸಲು ಒಪ್ಪಿಗೆ ನೀಡುವ ವಿಶ್ವಾಸವಿದೆ.
ಕೇಂದ್ರ ಬಿಜೆಪಿ ನಿರ್ಧಾರ ಬಗ್ಗೆ ಒಂದಷ್ಟು ಆತಂಕ
ತಮಿಳುನಾಡಿನಲ್ಲಿ ಬಿಜೆಪಿ ಮೊದಲಿನಿಂದಲೂ ಖಾತೆ ತೆರೆದು ಇಲ್ಲಿ ಅಧಿಕಾರ ಚುಕ್ಕಾಣೆ ಹಿಡಿಯಬೇಕೆಂಬ ಹಪಾಹಪಿ ಇಟ್ಟುಕೊಂಡೇ ಬಂದಿದೆ. ಇತ್ತೀಚೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಚಾಳನೆ ನೀಡಿದೆ. ಭಾರತದಲ್ಲೇ ಮೊದಲ ವಿಶಾಲ ಸಾಗರದ ಮೇಲೆ ಸ್ವಯಂ ಪ್ರೇರಿತ ಗೇಟ್ ತೆರೆದುಕೊಳ್ಳುವ ಪಂಬನ್ ಬ್ರಿಡ್ಜ್ ಲೋಕಾರ್ಪಣೆ ಮಾಡಿದೆ. ಈ ಕಾರಣದಿಂದ ಅಲ್ಲಿಯವರನ್ನು ಒಳಿಸಿಕೊಳ್ಳಲು, ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ತಮಿಳುನಾಡಿನೊಂದಿಗೆ ಇದೆ ಎಂದು ತೋರಿಸಿಕೊಳ್ಳಲು ಈ ಪ್ರಮುಖ ಏರ್‌ಪೋರ್ಟ್ ಯೋಜನೆ ಅನುಮೋದನೆ ನೀಡಿದರೆ ಹೇಗೆ ಎಂಬ ಆತಂಕ ಬೆಂಗಳೂರಿಗೂ ಇದೆ.
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ...!
ಬೆಂಗಳೂರಿನ 3 ಹಾಗೂ ಹೊಸೂರು ಸ್ಥಳಗಳನ್ನು ಕೇಂದ್ರ ಎಎಐ ತಂಡ ಅಧ್ಯಯನ ಮಾಡಿಕೊಂಡು ಹೋಗಿದೆ. ಈ ಕುರಿತು ವರದಿಯಲ್ಲಿ ಯಾವ ಜಾಗ ಶಿಫಾರಸು ಮಾಡುತ್ತೋ ತಿಳಿಯಲಿದೆ. ಇದಾದ ಬಳಿಕ ಕೇಂದ್ರ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಎಲ್ಲಿ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಾಣಕ್ಕೆ ಒಪ್ಪಿಗೆ ನೀಡುತ್ತದೆ? ಎಂದು ಕಾದು ನೋಡಬೇಕಿದೆ. ಈ ವಿಚಾರದಲ್ಲಿ ವಿಳಂಬವಾದಷ್ಟು ಗೊಂದಲ ಉಂಟಾಗುವ ಸಾಧ್ಯತೆ ಇದೆ. ಯಾವುದೇ ರಾಜ್ಯಕ್ಕೆ ಅನುಮೋದನೇ ನೀಡಿದರೂ ಸಹಿತ ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ಆಪವಾದಕ್ಕೂ ಗುರಿಯಾಗಬಹುದು ಎಂದು ವಿಶೇಷಿಸಲಾಗುತ್ತಿದೆ.
ಸದ್ಯ ಇದೇ ವಿಚಾರದಲ್ಲಿ ತಮಿಳುನಾಡು ಸಹ ಯೋಜನೆ ಅನುಮೋದನೆಗಾಗಿ ಕಾಯುತ್ತಿದೆ. ಒಂದು ವೇಳೆ ತಮಗೆ ಸಿಗದಿದ್ದರೆ ಏನು ಮಾಡಬೇಕು ಎಂಬಿತ್ಯಾದಿ ಯೋಚನೆಗಳನ್ನು ಹಾಕಿದೆ. ಕೆಲವು ವಿಘ್ನಗಳ ಹೊರತಾಗಿದೆ. ಜಾಗ ಫೈನಲ್ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ತಮಿಳುನಾಡಿಗೆ ಎಎಐ ತಂಡ ಭೇಟಿ ನೀಡಿ ಪರಿಶೀಲಿಸಿತ್ತು. ಅದಾದ ಬೆಂಗಳೂರಿನ ಯೋಜನೆ ಪ್ರಸ್ತಾವನೆ ಅನ್ವಯ ರಾಜ್ಯಕ್ಕೆ ಬಂದು ಮೂರು ದಿನ ಜಾಗ ಪರಿಶೀಲಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಬಿಗ್ ಅಪ್ಡೇಟ್ ಸಿಗಲಿದೆ.












Click it and Unblock the Notifications