ಬೆಂಗಳೂರು ಎರಡನೇ ವಿಮಾನ ನಿಲ್ದಾಣ: ಈ ಭಾಗದಲ್ಲಿ ಮಾಡೋಕೆ ಬಿಡಲ್ಲ, ಬೇಕಾದರೆ ರಾಜೀನಾಮೆ ಕೊಡ್ತೀನಿ ಎಂದ ಪ್ರಭಾವಿ ಶಾಸಕ!
Bengaluru Second Airport: ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೈಪೋಟಿ ಹೆಚ್ಚಾಗಿರುವುದು ಗೊತ್ತಿರುವ ವಿಷಯ. ಆದರೆ, ಈ ಭಾಗದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಬಿಡುವುದಿಲ್ಲ. ಬೇಕಾದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ ಎಂದು ಪ್ರಭಾವಿ ಶಾಸಕರು ಹೇಳಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣದ ವಿಚಾರದಲ್ಲಿ ರೈತರೊಂದಿಗೆ ನಿಲ್ಲುವುದಾಗಿಯೂ ಅವರು ಹೇಳಿದ್ದಾರೆ. ಯಾವ ಭಾಗದಲ್ಲಿ ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎನ್ನುವ ವಿವರ ಇಲ್ಲಿದೆ.
ನಗರದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಪ್ರದೇಶಗಳಲ್ಲಿ 5 ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಜಾಗಗಳಲ್ಲಿ ಕೇಂದ್ರ ತಂಡವು ಪರಿಶೀಲನೆ ಮಾಡಿದ್ದು. ಯಾವುದು ಸೂಕ್ತವೋ ಆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಆದರೆ, ಶಾರ್ಟ್ ಲಿಸ್ಟ್ ಮಾಡಿರುವ ಪ್ರಮುಖ ಪ್ರದೇಶಗಳಲ್ಲೇ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬಾರದು ಎನ್ನುವ ಆಗ್ರಹ ಇಲ್ಲಿನ ಶಾಸಕರಿಂದಲೇ ಕೇಳಿ ಬಂದಿದೆ. ಅಲ್ಲದೇ ಇಲ್ಲಿ ರಾಜಕೀಯ ಉದ್ದೇಶಕ್ಕಾಗಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಅದೇನು ಎನ್ನುವ ವಿವರ ನೋಡೋಣ.

ಯಾವುದೇ ಕಾರಣಕ್ಕೂ ನೆಲಮಂಗಲದಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬಾರದು ಎನ್ನುವ ಆಗ್ರಹ ಕೇಳಿ ಬಂದಿದೆ. ಈ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಾನು ಬಿಡುವುದಿಲ್ಲ. ಆ ರೀತಿಯ ಪರಿಸ್ಥಿತಿ ಎದುರಾದರೆ, ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದೇನೆ. ರೈತರ ಪರವಾಗಿ ನಾನು ನಿಲ್ಲಲಿದ್ದೇನೆ ಅಂತ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಅವರು ಹೇಳಿದ್ದಾರೆ. ಈ ಮೂಲಕ ಮತ್ತೊಂದು ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿರೋಧ ವ್ಯಕ್ತವಾದಂತೆ ಆಗಿದೆ. ಈಗಾಗಲೇ ಮಾಗಡಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಎರಡನೇ ವಿಮಾನ ನಿಲ್ದಾಣವನ್ನು ನೆಲಮಂಗಲದಲ್ಲಿ ನಿರ್ಮಾಣ ಮಾಡುವ ಅವಶ್ಯಕತೆಯೇ ಇಲ್ಲ. ಇಲ್ಲಿ ರಾಜಕೀಯ ಉದ್ದೇಶದಿಂದ ಸರ್ವೇ ಕಾರ್ಯ ನಡೆಸಲಾಗಿದೆ. ಇಲ್ಲಿ ವಿಮಾನ ನಿಲ್ದಾಣದ ಅವಶ್ಯಕತೆಯೇ ಇಲ್ಲ. ಈ ಭಾಗದಲ್ಲಿ ಈಗಾಗಲೇ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗಿದೆ. ಇನ್ನು ವಿಮಾನ ನಿಲ್ದಾಣವೂ ಈ ಭಾಗದಲ್ಲಿ ನಿರ್ಮಾಣವಾದರೆ ಭಾರೀ ಸಂಕಷ್ಟ ಎದುರಾಗಲಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ( ದೇವನಹಳ್ಳಿ) ನೆಲಮಂಗಲದ ನಡುವೆ ಅಂತರ ತೀರ ಕಡಿಮೆ ಇದೆ ಎಂದು ಅವರು ವಾದಿಸಿದ್ದಾರೆ.
ಈ ಭಾಗದಲ್ಲಿ ರೈತರಿಂದ ವಿರೋಧ: ಇನ್ನು ನೆಲಮಂಗಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ರೈತರಿಂದ ವಿರೋಧ ವ್ಯಕ್ತವಾಗುತ್ತಿದೆ. ಇಲ್ಲಿನ ಮೋಟಗಾನಹಳ್ಳಿ, ಗುಡೇಮಾರನಹಳ್ಳಿ ಹಾಗೂ ಲಕ್ಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ಜನರು ವಿಮಾನ ನಿಲ್ದಾಣ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೀವ ಬೇಕಾದರೂ ಕೊಡುತ್ತೇವೆ ಜಾಗ ಕೊಡಲ್ಲ ಅಂತ ರೈತರು ಹೇಳಿದ್ದಾರೆ.
ಈ ಭಾಗದಲ್ಲಿ ವಿಮಾನ ನಿಲ್ದಾಣ ಮಾಡಲಿ: ಇನ್ನು ಬೆಂಗಳೂರಿನ ಹೊಸ ವಿಮಾನ ನಿಲ್ದಾಣವನ್ನು ಬೆಂಗಳೂರು ದಕ್ಷಿಣ ಭಾಗದಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯವೂ ಹೆಚ್ಚಾಗಿದೆ. ಈ ಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ, ರಾಮನಗರ, ಮಂಡ್ಯ ಹಾಗೂ ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇರುವವರಿಗೆ ಲಾಭವಾಗಲಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.












Click it and Unblock the Notifications