Bengaluru 2nd Airport: 3 ಸ್ಥಳ ನಿಗದಿ, ಸಿದ್ದರಾಮಯ್ಯ ಅಂಗಳದಲ್ಲಿ ಚೆಂಡು
ಬೆಂಗಳೂರು, ಫೆಬ್ರವರಿ 04: ಉದ್ಯಾನ ನಗರಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣದ ಕುರಿತು ಬೆಂಗಳೂರಿನಿಂದ ದೆಹಲಿ ತನಕ ಚರ್ಚೆಗಳು ನಡೆಯುತ್ತವೆ. ರಾಜಕಾರಣಿಗಳು, ಉದ್ಯಮಿಗಳು, ಸಾರ್ವಜನಿಕರು ಬೇರೆ ಬೇರೆ ಸ್ಥಳವನ್ನು 2ನೇ ವಿಮಾನ ನಿಲ್ದಾಣಕ್ಕೆ ಸೂಚಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ ವಿಮಾನ ನಿಲ್ದಾಣದ ವಿಚಾರದಲ್ಲಿ ಪಟ್ಟು ಹಿಡಿದಿದ್ದಾರೆ.
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಸ್ಥಳ ಎಂದು ಅಂತಿಮಗೊಳಿಸಿದ ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಿಮಾನ ನಿಲ್ದಾಣದ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಲಾಗುತ್ತದೆ.

ತುಮಕೂರಿನಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬುದು ಡಾ. ಜಿ. ಪರಮೇಶ್ವರ ಒತ್ತಾಯ. ಡಿ. ಕೆ. ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಅಥವ ರಾಮನಗರದಲ್ಲಿ ನಿರ್ಮಾಣ ಮಾಡಬೇಕು ಎಂದು ಹೇಳುತ್ತಿದ್ದಾರೆ. ಸದ್ಯ ಈ ವಿಚಾರದಲ್ಲಿ ಡಿ. ಕೆ. ಶಿವಕುಮಾರ್ ಮೇಲುಗೈ ಸಾಧಿಸಿದ್ದಾರೆ.
ಮೂರು ಸ್ಥಳಗಳು ನಿಗದಿ: ಸರ್ಕಾರದ ಉನ್ನತ ಮಟ್ಟದ ಮಾಹಿತಿ ಪ್ರಕಾರ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಬಿಡಿದಿ, ಹಾರೋಹಳ್ಳಿ ಮತ್ತು ಸೋಲೂರು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಬಿಡದಿ ಮತ್ತು ಹಾರೋಹಳ್ಳಿ ಡಿ. ಕೆ. ಶಿವಕುಮಾರ್ ತವರು ಜಿಲ್ಲೆಯಲ್ಲಿವೆ. ಸೋಲೂರು ನೆಲಮಂಗಲ-ಕುಣಿಗಲ್ ನಡುವೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾರೋಗ್ಯದ ಕಾರಣ ಎರಡು ದಿನದಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರು ಯಾವ ಸ್ಥಳವನ್ನು ಅಂತಿಮಗೊಳಿಸುತ್ತಾರೋ ಅದರ ಆಧಾರದ ಮೇಲೆ ಎಎಐಗೆ 2ನೇ ವಿಮಾನ ನಿಲ್ದಾಣದ ಕುರಿತು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಕೆ ಮಾಡಲಿದೆ.
2024ರಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ಎಂ. ಬಿ. ಪಾಟೀಲ್ 2ನೇ ವಿಮಾನ ನಿಲ್ದಾಣಕ್ಕೆ 7 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದರು. ಬಳಿಕ 5 ಸ್ಥಳಗಳನ್ನು ಅಂತಿಮಗೊಳಿಸಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ 3 ಸ್ಥಳ ಅಂತಿಮಗೊಂಡಿದೆ.
2ನೇ ವಿಮಾನ ನಿಲ್ದಾಣದ ಕುರಿತು ಸರ್ಕಾರ ಇನ್ನೂ ಎಎಐಗೆ ಪ್ರಸ್ತಾವನೆ ಸಲ್ಲಿಕೆ ಮಾಡಿಲ್ಲ. ರಾಜ್ಯದಲ್ಲಿ ವಿಮಾನ ನಿಲ್ದಾಣ ನಿರ್ಮಾಣವ ವಿಚಾರದಲ್ಲಿ ಉಂಟಾಗಿರುವ ಜಟಾಪಟಿಯೇ ಈ ವಿಳಂಬಕ್ಕೆ ಕಾರಣ. ಬೆಂಗಳೂರು ಗ್ರಾಮಾಂತರ ಅಥವ ರಾಮನಗರಲ್ಲಿ ವಿಮಾನ ನಿಲ್ದಾಣವಾಗಬೇಕು ಎಂದು ಡಿ. ಕೆ. ಶಿವಕುಮಾರ್ ಪಟ್ಟುಹಿಡಿದಿದ್ದಾರೆ.
ಡಾ. ಜಿ. ಪರಮೇಶ್ವರ ತುಮಕೂರಿನಲ್ಲಿ 2ನೇ ವಿಮಾನ ನಿಲ್ದಾಣವಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ತುಮಕೂರಿನಲ್ಲಿ 2 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ವಸಂತ ನಸರಾಪುರ ಕೈಗಾರಿಕಾ ಪ್ರದೇಶದಲ್ಲಿನ 3 ಸಾವಿರ ಎಕರೆ, ಶಿರಾ ತಾಲೂಕಿನ ಸಿಬಿ ದೇವಾಲಯದ ಬಳಿ 4 ರಿಂದ 5 ಸಾವಿರ ಎಕರೆ ಜಾಗಗಳು ಇದಾಗಿವೆ.
ಬೆಂಗಳೂರು 2ನೇ ವಿಮಾನ ನಿಲ್ದಾಣದ ಸ್ಥಳ ಅಂತಿಮವಾಗುವುದು ರಿಯಲ್ ಎಸ್ಟೇಟ್ ಬೆಳವಣಿಗೆ ದೃಷ್ಟಿಯಿಂದ ಮಹತ್ವದ್ದಾಗಿದೆ. ಆದ್ದರಿಂದ ಎಲ್ಲಿ ನಿಲ್ದಾಣ ನಿರ್ಮಾಣ? ಎಂಬ ಚರ್ಚೆಗಳು ಜೋರಾಗಿದೆ.
ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತೇವೆ ಎಂದು ಘೋಷಣೆ ಮಾಡಿದ ಬಳಿಕ ಬೆಂಗಳೂರು 2ನೇ ವಿಮಾನ ನಿಲ್ದಾಣದ ಕುರಿತು ಚರ್ಚೆಗಳು ಆರಂಭವಾಗಿದೆ. ಆದರೆ ಎಲ್ಲಿ ವಿಮಾನ ನಿಲ್ದಾಣ ನಿರ್ಮಾಣ? ಎಂಬುದು ಇನ್ನೂ ಖಚಿತವಾಗಿಲ್ಲ.












Click it and Unblock the Notifications