Bengaluru Second Airport: ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಸದ್ದಿಲ್ಲದೆ ರೆಡಿಯಾಯ್ತು ಬೃಹತ್ ರಸ್ತೆ, ಎಲ್ಲಿ?
ಬಹುನಿರೀಕ್ಷಿತ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಎಲ್ಲಿ ಎನ್ನುವ ಪ್ರಶ್ನೆಗೆ ಇನ್ನೂ ಅಧಿಕೃತ ಉತ್ತರ ಸಿಕ್ಕಿಲ್ಲ. ಆದರೆ, ಈ ಏರ್‌ಪೋರ್ಟ್‌ಗಾಗಿ ಈಗಾಗಲೇ ಹಲವು ಸ್ಥಳಗಳನ್ನು ನಿಗದಿ ಮಾಡಲಾಗಿದೆ. ಸರ್ಕಾರ ಕೂಡ ಈಗಾಗಲೇ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ತುದಿಗಾಲಲ್ಲಿ ನಿಂತಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದಾಗಿ ಹೇಳಿದೆ. ಆದರೆ, ಸದ್ದಿಲ್ಲದೆ ಈಗಾಗಲೇ ಎರಡನೇ ಏರ್‌ಪೋರ್ಟ್‌ಗಾಗಿ ರಸ್ತೆ ರೆಡಿಯಾಗಿದೆ.
ಬೆಂಗಳೂರಿನ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸಲು 11 ಕಿ.ಮೀ ಉದ್ದದ ಮೇಜರ್ ಆರ್ಟೀರಿಯಲ್ ರಸ್ತೆ (ಎಂಎಆರ್) ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಇದು ಬೆಂಗಳೂರಿನ ಮೊದಲ 10 ಲೇನ್ ರಸ್ತೆಯಾಗಲಿದ್ದು, 300 ಅಡಿ ಅಗಲ ಇರುವ ಈ ರಸ್ತೆ ಬಿಡಿಎ ಕೆಂಪೇಗೌಡ ಲೇಔಟ್ ಮೂಲಕ ಹಾದು ಹೋಗಲಿದೆ. ಸದ್ಯ ಇಲ್ಲಿ ಒತ್ತುವರಿ ತೆರವು ಮಾಡುವ ಕೆಲಸ ಕೂಡ ನಡೆಯುತ್ತಿದ್ದು, ಇನ್ನು ಮೂರೇ ತಿಂಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಈ ರಸ್ತೆಯನ್ನು ಎರಡನೇ ಏರ್‌ಪೋರ್ಟ್ ಉದ್ದೇಶದಿಂದಲೇ ನಿರ್ಮಿಸಲಾಗುತ್ತಿದೆ ಎಂದೂ ಹೇಳಲಾಗಿದೆ.

ಮಾಗಡಿ ರಸ್ತೆ ಹಾಗೂ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಈ ರಸ್ತೆಗಾಗಿ ಚಲ್ಲಘಟ್ಟ ಬಳಿ ರೈಲ್ವೆ ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಕೂಡ ಅನುಮೋದನೆ ನೀಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2019ರಲ್ಲೇ ಇದಕ್ಕಾಗಿ ಮನವಿ ಮಾಡಿತ್ತು. ಆಗ ಕೋವಿಡ್ ಹಾಗೂ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಯೋಜನೆ ನಿಧಾನವಾಯಿತು. ಈ ಒಂದರ ವೆಚ್ಚವೇ ಸುಮಾರು 39 ಕೋಟಿ ಎಂದು ವರದಿಯಾಗಿದೆ. ಇದು ಎರಡು ರಸ್ತೆಗಳ ನಡುವೆ ಪ್ರಮುಖ ಸಂಪರ್ಕದ ಹಾದಿಯಾಗಿ ಕಾರ್ಯನಿರ್ವಹಿಸುವುದಲ್ಲದೆ, ಸಂಚಾರ ದಟ್ಟಣೆ ಕೂಡ ಕಡಿಮೆ ಮಾಡಲಿದೆ.
ಈ ರಸ್ತೆಯು ಬೆಂಗಳೂರು ಪಶ್ಚಿಮದಿಂದ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಲಿದ್ದು, ಬಿಡದಿ ಅಥವಾ ನೆಲಮಂಗಲದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿರುವ ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ಇದು ತುಂಬಾ ಅನುಕೂಲವಾಗಲಿದೆ ಎನ್ನಲಾಗಿದೆ. ಮುಖ್ಯವಾಗಿ ಈ ರಸ್ತೆಯು ಪಿಆರ್‌ಆರ್ ಅನ್ನು ಕೂಡ ಸಂಪರ್ಕಿಸಲಿದ್ದು, ಬೆಂಗಳೂರಿನ ವಾಹನ ದಟ್ಟಣೆ ತಪ್ಪಿಸುವಲ್ಲಿ ಈ ರಸ್ತೆ ಗೇಮ್ ಚೇಂಜರ್ ಎಂದು ಹೇಳಲಾಗಿದೆ.

ಈ ರೈಲ್ವೆ ಕೆಳಸೇತುವೆ (ಆರ್‌ಯುಬಿ) ನಿರ್ಮಾಣದ ಟೆಂಡರ್ ಪಡೆದು ಖಾಸಗಿ ಕಂಪನಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆಯು ಮೇಜರ್ ಆರ್ಟಿರಿಯಲ್ ರಸ್ತೆಯಲ್ಲಿ (ಎಂಎಆರ್) ಬಿಎಂಆರ್‌ಸಿಎಲ್‌ನಿಂದ ನಿರ್ಮಾಣ ಹಂತದಲ್ಲಿರುವ ಮೆಟ್ರೋ ಮಾರ್ಗದೊಂದಿಗೆ ಲಿಂಕ್ ಆಗಲಿದೆ. ಇದು ನಾಲ್ಕು ಲೇನ್‌ಗಳಲ್ಲಿ ವ್ಯಾಪಿಸಲಿದ್ದು, ಈ ಟೋಲ್ ಫ್ರೀ ರಸ್ತೆಯ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳಿಸುವುದಾಗಿ ಬಿಡಿಎ ಅಧಿಕಾರಿಗಳು ಸಹ ಹೇಳಿದ್ದಾರೆ.
ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ 10.75 ಕಿ.ಮೀ ಉದ್ದದ ಎಂಎಆರ್ ಯೋಜನೆಯ ರಸ್ತೆಯು 100 ಮೀಟರ್ ಅಗಲ ಮತ್ತು 8 ಲೇನ್‌ಗಳನ್ನು ಹೊಂದಿರಲಿದೆ. ಅಲ್ಲದೆ ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ 9 ಬ್ಲಾಕ್‌ಗಳನ್ನೂ ಸಂಪರ್ಕಿಸಲಿದ್ದು, ದೂರದೃಷ್ಟಿಯ ಹಿನ್ನೆಲೆ ಈ ರಸ್ತೆಯನ್ನು ಸಿದ್ಧಪಡಿಸಲಾಗುತ್ತಿದೆ. ಬಹುತೇಕ ಈ ರಸ್ತೆಯು ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸುಲಭವಾಗಲಿ ಎಂಬ ಕಾರಣಕ್ಕೆ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಬೆಂಗಳೂರು ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಶೀಘ್ರವೇ ಸ್ಥಳ ಘೋಷಿಸುತ್ತೇವೆ. ವಿಮಾನ ನಿಲ್ದಾಣ ಸ್ಥಾಪನೆಗೆ ಹಲವು ಪ್ರದೇಶಗಳ ಪ್ರಸ್ತಾವನೆ ಬಂದಿತ್ತು. ಅವುಗಳನ್ನು ಪರಿಶೀಲಿಸಲಾಗಿದ್ದು, ಮುಂದಿನ ದಶಕಗಳಲ್ಲಿ ಆಗುವ ಬೆಳವಣಿಗೆ, ಸಂಚಾರ ಮತ್ತು ವಿಮಾನ ಹಾರಾಟ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಸ್ಥಳ ಆಯ್ಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಹೇಳಿದ್ದಾರೆ.












Click it and Unblock the Notifications