ಬೇಸಿಗೆ ಧಗೆ: ಬಿಯರ್, ಮಜ್ಜಿಗೆ ಮೊರೆ ಹೋದ ಬೆಂಗಳೂರಿನ ಜನ!
ಬೆಂಗಳೂರು, ಏಪ್ರಿಲ್. 17: ಮಳೆ ಇಲ್ಲದೆ ನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ಜನ ತಣ್ಣಗಿನ ಪಾನಿಯಗಳ ಮೊರೆ ಹೋಗುತ್ತಿದ್ದಾರೆ. ಇದೇ ವೇಳೆ ಸಿಲಿಕಾನ್ ಸಿಟಿಯಲ್ಲಿ ಮದ್ಯ ಮತ್ತು ಡೈರಿ ಉತ್ಪನ್ನಗಳು ದಾಖಲೆಯ ಮಾರಾಟ ಕಂಡಿವೆ. ಬಿಯರ್ ಮತ್ತು ಮಜ್ಜಿಗೆ ಮಾರಾಟ ದಾಖಲೆ ಕಂಡಿವೆ.
ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ಬಿಯರ್ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ. ಏಪ್ರಿಲ್ 1 ರಿಂದ 11 ರವರೆಗೆ 17.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, 2021 ರಲ್ಲಿ 8.83 ಲಕ್ಷ ಲೀಟರ್, 2022 ರಲ್ಲಿ 9.20 ಲಕ್ಷ ಲೀಟರ್ ಮತ್ತು ಕಳೆದ ವರ್ಷ ಇದೇ ಅವಧಿಯಲ್ಲಿ 13.16 ಲಕ್ಷ ಲೀಟರ್ ಮಾರಾಟವಾಗಿತ್ತು.

ಈ ವರ್ಷ 4.51 ಲಕ್ಷ ಲೀಟರ್‌ಗಳಷ್ಟು ಏರಿಕೆಯಾಗಿರುವುದು ತಾಪಮಾನ ಏರಿಕೆಗೆ ಕಾರಣವಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮದ್ಯ ಮಾರಾಟ ಕೊಂಚ ಹೆಚ್ಚುತ್ತದೆ. ಆದರರೆ, ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಇನ್ನೂ ಅಂತಹ ವೇಗ ಪಡೆದುಕೊಂಡಿಲ್ಲ. ಈ ವೇಳೆಯೂ ಬಿಯರ್ ಮಾರಾಟ ಹೆಚ್ಚಾಗಿದೆ.
ದಾಖಲೆ ಬರೆದ ಮೊಸರು, ಮಜ್ಜಿಗೆ
ಮತ್ತೊಂದೆಡೆ, ಕರ್ನಾಟಕದಲ್ಲಿ ಡೈರಿ ಉತ್ಪನ್ನಗಳ ಮಾರಾಟವು ವಿಶೇಷವಾಗಿ ಬೇಸಿಗೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ. ಏಪ್ರಿಲ್ 6 ರಂದು 13.56 ಲಕ್ಷ ಲೀಟರ್ ಮೊಸರು ಮಾರಾಟವಾಗಿದೆ. ಇದು ಡೈರಿ ಉತ್ಪನ್ನಗಳ ಬೇಡಿಕೆ ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಏಪ್ರಿಲ್ 11 ರಂದು ಬರೋಬ್ಬರಿ 51.60 ಲಕ್ಷ ಲೀಟರ್ ಹಾಲು ಮಾರಾಟವಾಗಿದೆ. ಈ ಮೂಲಕ ಕರ್ನಾಟಕ ಹಾಲು ಒಕ್ಕೂಟದಲ್ಲಿ (ಕೆಎಂಎಫ್) ದೈನಂದಿನ ಹಾಲು ಮಾರಾಟಕ್ಕೆ ಹೊಸ ದಾಖಲೆ ಬರೆದಿದೆ.

ಕೆಎಂಎಫ್‌ನ ಅಧಿಕಾರಿಗಳು ಹಾಲಿನ ಮಾರಾಟದಲ್ಲಿ ಗಣನೀಯ ಏರಿಕೆಯಾಗಿರುವುದನ್ನು ಸೂಚಿಸಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 10% ಹೆಚ್ಚಳವಾಗಿದೆ. ಹಾಲಿನ ಉತ್ಪನ್ನಗಳ ಸೇವನೆಯಲ್ಲಿನ ಏರಿಕೆಯು ಬೇಸಿಗೆಯಿಂದಲೇ ಎಂದು ಹೇಳಲಾಗಿದೆ. ಹವಮಾನ ಬಿಸಿಯಾದಂತೆ ಡೈರಿ ಉತ್ಪನ್ನಗಳ ಬಳಕೆ ಕೂಡ ಹೆಚ್ಚಾಗಲಿದೆ. ಅದರಲ್ಲೂ ವಿಶೇಷವಾಗಿ ಹಾಲು ಹೆಚ್ಚು ಮಾರಾಟವಾಗುತ್ತದೆ.
22% ರಷ್ಟು ಮೊಸರು ಮಾರಾಟದಲ್ಲಿ ಏರಿಕೆಯಾಗಿದೆ. ಮಜ್ಜಿಗೆ ಮತ್ತು ಲಸ್ಸಿಯಂತಹ ಉತ್ಪನ್ನಗಳೂ ಸಹ ಜನಪ್ರಿಯತೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದು, ಅಂದಾಜು 1.5 ಲೀಟರ್‌ಗಳ ದೈನಂದಿನ ಮಾರಾಟವಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಜ್ಜಿಗೆ ಮಾರಾಟವು 30% ರಷ್ಟು ಏರಿಕೆಯಾಗಿದೆ. ಮಾರ್ಚ್ 2024 ರಲ್ಲಿ ನಂದಿನಿ ಐಸ್ ಕ್ರೀಮ್ ಮಾರಾಟದಲ್ಲಿ 36% ರಷ್ಟು ಗಮನಾರ್ಹವಾದ ಹೆಚ್ಚಳ ಕಂಡಿದೆ. ಬಿಸಿಲು ಹೀಗೆ ಮುಂದುವರೆದರೇ ಮಾರಾಟ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ.
ಗಗನಕ್ಕೆ ಏರುತ್ತಿದೆ ತರಕಾರಿ ಬೆಲೆ
ಬಿಸಿಲಿನ ತಾಪ ಮತ್ತು ಮಳೆಯಿಲ್ಲದ ಕಾರಣ ತರಕಾರಿ ಬೆಲೆಗಳು ಹೆಚ್ಚುತ್ತಲೇ ಇವೆ. ಟೊಮೇಟೊ ಬೆಲೆ ಕೆಜಿಗೆ 25 ರೂ.ಗೆ ಏರಿಕೆಯಾಗಿದೆ. ಮುಂದೆ ಇನ್ನು ಟೊಮೇಟೊ ಬೆಲೆ ಮತ್ತಷ್ಟು ಹೆಚ್ಚಾಗುವ ಸೂಚನೆ ಸಿಕ್ಕಿದೆ. ಹಸಿರು ಮೆಣಸಿನಕಾಯಿ ಕೆಜಿಗೆ 120 ರೂ., ಕ್ಯಾಪ್ಸಿಕಂ ಕೆಜಿಗೆ 80 ರೂ., ಹುರುಳಿಕಾಯಿ ಕೆಜಿಗೆ 115 ರೂ.ಗೆ ಮಾರಾಟವಾಗುತ್ತಿದೆ. ತರಕಾರಿಗಳ ದರ ಹೆಚ್ಚಳ ಮತ್ತು ಕೊರತೆಯಿಂದಾಗಿ ಗ್ರಾಹಕರು ತಮ್ಮ ದೈನಂದಿನ ಖರೀದಿಯನ್ನು ಕೂಡ ಕಡಿಮೆಗೊಳಿಸಿದ್ದಾರೆ.












Click it and Unblock the Notifications