ಬೆಂಗಳೂರಿನ ಪ್ರಮುಖ ಮಾರುಕಟ್ಟೆ ಪುನರ್ ಅಭಿವೃದ್ಧಿಗೆ ಅಂತಿಮ ರೂಪ: ರಾಜೇಂದ್ರ ಚೋಳನ್
Russell Market: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರದ ರಸೆಲ್ ಮಾರುಕಟ್ಟೆಯ ಪುನರ್ ಅಭಿವೃದ್ಧಿಗೆ ವಿಸ್ತೃತ ಯೋಜನಾ ವರದಿ (DPR) ಅಂತಿಮ ಅಂತದಲ್ಲಿದ್ದು, ಅದನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆಯೊಂದಿಗೆ ಶಿವಾಜಿನಗರ ನಗರ ಮಾರುಕಟ್ಟೆಯೂ ಅಭಿವೃದ್ಧಿ ಆಗಲಿದೆ.
ಕೇಂದ್ರ ನಗರ ಪಾಲಿಕೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗುರುವಾರ (ಸೆಪ್ಟೆಂಬರ್ 11)ರಂದು ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಮತ್ತು ನಾಗರಿಕ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ರಸೆಲ್ ಮಾರುಕಟ್ಟೆ ಪಾರಂಪರಿಕ ಕಟ್ಟಡವಾಗಿದೆ. ಇದಕ್ಕೆ ಆಧುನಿಕ ಸ್ಪರ್ಷ ನೀಡಿ, ಬೆಂಗಳೂರಿಗೆ ಜೀವಂತ, ಶಾಶ್ವತ ಹಾಗೂ ಜನಸ್ನೇಹಿ ಮಾರುಕಟ್ಟೆಯಾಗಿ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಇದೆ ಎಂದಿದ್ದಾರೆ.

ಪುನರ್ ವಿನ್ಯಾಸಗೊಳಿಸುವ ರಸೆಲ್ ಮಾರುಕಟ್ಟೆಯಲ್ಲಿ, ಸಂಚಾರ ದಟ್ಟಣೆ ತಪ್ಪಿಸುವುದು, ದೃಶ್ಯಾವಲೋಕನ ಹಾಗೂ ಪ್ರವೇಶ ಸೌಲಭ್ಯಕ್ಕೆ ಆದ್ಯತೆ ನೀಡಲಾಗುವುದು. ಮಾರಾಟಗಾರರು ಹಾಗೂ ಗ್ರಾಹಕರಿಗಿಬ್ಬರಿಗೂ ಅನುಕೂಲವಾಗುವಂತೆ ಮರುರಚನೆ ಮಾಡಲಾಗುವುದು. ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ, ಒಳಚರಂಡಿ, ನೀರು, ವಿದ್ಯುತ್, ಅಗ್ನಿ ಸುರಕ್ಷತೆ, ಶೌಚಾಲಯ ಸೌಲಭ್ಯಗಳು, ಸಮಗ್ರ ತ್ಯಾಜ್ಯ ವಿಂಗಡಣೆ ಹಾಗೂ ಕಾಂಪೋಸ್ಟಿಂಗ್ ವ್ಯವಸ್ಥೆಯ ಜೊತೆಗೆ ಸೌರಶಕ್ತಿ, ಮಳೆನೀರು ಸಂಗ್ರಹಣೆ ಮತ್ತು ವಿದ್ಯುತ್ ಉಳಿತಾಯ ವಿನ್ಯಾಸ ಮಾಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆ: ಮುನ್ಸಿಪಲ್ ಕಮೀಷನರ್ ಆಗಿದ್ದ ಟಿ.ಬಿ ರಸೆಲ್ ರವರ ನೇತೃತ್ವದಲ್ಲಿ 1927ರಲ್ಲಿ ನಿರ್ಮಿತವಾದ ಈ ರಸಲ್ ಮಾರುಕಟ್ಟೆಯು, ಇಂಡೋ-ಸರಸೆನಿಕ್ ಶೈಲಿಯ ವಾಸ್ತುಶಿಲ್ಪದ ಸ್ಮಾರಕವಾಗಿದೆ. ಗೋಥಿಕ್ ಶಿಖರಗಳು, ಅಲಂಕೃತ ಕಮಾನುಗಳು ಮತ್ತು ಗೋಪುರಾಕಾರದ ಗುಂಬಜಗಳೊಂದಿಗೆ ಮಾರುಕಟ್ಟೆಯು ತನ್ನ ವೈಶಿಷ್ಟ್ಯವನ್ನು ತೋರಿಸುತ್ತದೆ. ಪುನರ್ ಅಭಿವೃದ್ಧಿಯಲ್ಲಿ ಈ ಪರಂಪರೆಯ ಸ್ವರೂಪವನ್ನು ಉಳಿಸಿಕೊಂಡು, ಮುಖಭಾಗ ಮತ್ತು ಪ್ರಮುಖ ವಾಸ್ತು ಅಂಶಗಳನ್ನು ಕಾಪಾಡುತ್ತಾ ತಾಂತ್ರಿಕ ಬಲವರ್ಧನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಲಾಗಿದೆ.
ಸ್ವಚ್ಛತಾ ಕಾರ್ಯ ನಡೆಸಿ: ರಸೆಲ್ ಮಾರುಕಟ್ಟೆ ಆವರಣದ ಸುತ್ತಲಿನ ಪ್ರದೇಶದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡಿರುವುದನ್ನು ಗಮನಿಸಿ, ಸ್ವಚ್ಚತಾ ಅಭಿಯಾನ ನಡೆಸಲು ವೇಳಾಪಟ್ಟಿ ಸಿದ್ಧಪಡಿಸಿ, ಸ್ವಚ್ಛತಾ ಕಾರ್ಯ ನಡೆಸಬೇಕು. ಜೊತೆಗೆ ಸ್ಥಳದಲ್ಲಿರುವ ಎಲ್ಲಾ ಮಳಿಗೆಗಳಿಗೆ ತ್ಯಾಜ್ಯವನ್ನು ಎಲ್ಲೆಂದಲ್ಲಿ ಬಿಸಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಕಾಲುವೆ ಹೂಳೆತ್ತಲು ಸೂಚನೆ: ರಸೆಲ್ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ನೀರುಗಾಲುವೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಲುವೆಗಳಲ್ಲಿ ಹೂಳೆತ್ತಿ ಸ್ವಚ್ಛಗೊಳಿಸಿ ಬಾಕಿಯಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಹರ್ಷದ್ ರವರು ಮಾತನಾಡಿ, ಶಿವಾಜಿನಗರ ವ್ಯಾಪ್ತಿಯಲ್ಲಿರುವ ರಸೆಲ್ ಮಾರುಕಟ್ಟೆಯು ಅತ್ಯಂತ ಪುರಾತನ ಕಟ್ಟಡವಾಗಿದ್ದು, ಅದಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನಿರ್ಮಾಣ ಮಾಡಬೇಕು. ಸ್ಥಳಿಯವಾಗಿ ಯಾವುದೇ ಸಮಸ್ಯೆಗಳಾಗಂತೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ತಪಾಸಣೆಯ ವೇಳೆಯ ಇತರೆ ಪ್ರಮುಖ ಅಂಶಗಳು:
1. ಹಫೀಝಿಯಾ ಶಾಲೆ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚನೆ.
2. ಭಾರತಿನಗರದಲ್ಲಿ ನಡೆಯುತ್ತಿರುವ ಸಮುದಾಯ ಭವನ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ.
3. ಪೂರ್ ಹೌಸ್ ಆಸ್ಪತ್ರೆ ಕಾಮಗಾರಿಯನ್ನು ಬ್ರ‍್ಯಾಂಡ್ ಬೆಂಗಳೂರು ಹಾಗೂ ಪಾಲಿಕೆಯ ವತಿಯಿಂದ ಜಂಟಿಯಾಗಿ ಪೂರ್ ಹೌಸ್ ಆಸ್ಪತ್ರೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಶೀಘ್ರವಾಗಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆ ಒದಗಿಸಲು ಸೂಚನೆ ನೀಡಿದರು.
4. ಕ್ವೀನ್ಸ್ ರಸ್ತೆಯ ಬಳಿ ತ್ಯಾಜ್ಯ ವಿಲೇವಾರಿ ಘಟಕ (ಟ್ರಾನ್ಸ್ ಫರ್ ಸ್ಟೇಷನ್) ನಿರ್ಮಾಣಕ್ಕಾಗಿ ಜಾಗ ಗುರುತಿಸಿದ್ದು, ಈಗಾಗಲೇ ಕೆಲಸ ಕೂಡಾ ಪ್ರಾರಂಭವಾಗಿದೆ. ಕಾಲಮಿತಿಯೊಳಗಾಗಿ ಕಾಮಗಾರಿಯನ್ನು ಮುಗಿಸಲು ಅಧಿಕಾರಿಗಳಿಗೆ ಸೂಚನೆ.
ಈ ವೇಳೆ ಮುಖ್ಯ ಎಂಜಿನಿಯರ್ ವಿಜಯ್ ಕುಮಾರ್ ಹರಿದಾಸ್, ಕಾರ್ಯಪಾಲಕ ಎಂಜಿನಿಯರ್ ಸೇರಿದಂತೆ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications