ಬೆಂಗಳೂರು ಗುಲಾಬಿ ಈರುಳ್ಳಿ ರಫ್ತು ಸ್ಥಗಿತ: ಬೆಳೆಗಾರರು ಕಂಗಾಲು; ಕೇಂದ್ರದ ತುರ್ತು ನೆರವಿಗೆ ಡಾ. ಸುಧಾಕರ್ ಆಗ್ರಹ

ಚಿಕ್ಕಬಳ್ಳಾಪುರ: ಭೌಗೋಳಿಕ ಮಾನ್ಯತೆ (GI Tag) ಪಡೆದಿರುವ ವಿಶಿಷ್ಟ 'ಬೆಂಗಳೂರು ಗುಲಾಬಿ ಈರುಳ್ಳಿ' (Bangalore Rose Onion) ಬೆಳೆಗಾರರು ತೀವ್ರ ಮಾರುಕಟ್ಟೆ ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಿ ನೆರವಿಗೆ ಧಾವಿಸಬೇಕು ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ರೈತರ ಹಿತರಕ್ಷಣೆಗಾಗಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ತುರ್ತು ಮಾರುಕಟ್ಟೆ ಬೆಂಬಲ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ

ಬೆಂಗಳೂರು ಗುಲಾಬಿ ಈರುಳ್ಳಿಯು ಗಾತ್ರದಲ್ಲಿ ಚಿಕ್ಕದಾದ, ಕಡು ಕೆಂಪು ಬಣ್ಣದ ಮತ್ತು ಹೆಚ್ಚು ಖಾರವಿರುವ ವಿಶಿಷ್ಟ ತಳಿಯಾಗಿದೆ. ಇದನ್ನು ಪ್ರಮುಖವಾಗಿ ಕರ್ನಾಟಕದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಡಾ. ಸುಧಾಕರ್ ಅವರ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಮತ್ತು ಅಸ್ಥಿರ ವಾತಾವರಣದಿಂದಾಗಿ ಈರುಳ್ಳಿ ರಫ್ತು ಸರಪಳಿಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.

Bengaluru

ಸಾಂಪ್ರದಾಯಿಕವಾಗಿ ಈ ಈರುಳ್ಳಿಯನ್ನು ಆಗ್ನೇಯ ಏಷ್ಯಾ ಮತ್ತು ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ ಈಗ ರಫ್ತು ಸ್ಥಗಿತಗೊಂಡಿರುವುದರಿಂದ, ಪ್ರತಿ ಚೀಲಕ್ಕೆ (50 ಕೆ.ಜಿ) 1,200 ರಿಂದ 1,500 ರೂ. ಇದ್ದ ಬೆಲೆ ದಿಢೀರನೆ 100ರಿಂದ 200ರೂ. ಗೆ ಕುಸಿದಿದೆ. ಇದರಿಂದಾಗಿ ರೈತರು ಹಾಕಿದ ಬಂಡವಾಳವೂ ಸಿಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕಟಾವು ಮಾಡಿದ ಈರುಳ್ಳಿಯನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಸದ ಡಾ. ಸುಧಾಕರ್ ಅವರ ಪ್ರಮುಖ ಬೇಡಿಕೆಗಳು

ರೈತರ ನೆರವಿಗೆ ಧಾವಿಸಿರುವ ಡಾ. ಸುಧಾಕರ್ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು, ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ ಕನಿಷ್ಠ ಬೆಂಬಲ ಬೆಲೆಯಡಿ ಈರುಳ್ಳಿ ಖರೀದಿಸಲು ಆಗ್ರಹಿಸಿದ್ದಾರೆ. ಹಾಗೆಯೇ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಸಂಪರ್ಕಿಸಿ, ಪ್ರಸ್ತುತ ರಫ್ತು ಮಾರುಕಟ್ಟೆಯ ಬಿಕ್ಕಟ್ಟನ್ನು ನಿಭಾಯಿಸಲು ಪರ್ಯಾಯ ರಫ್ತು ಮಾರುಕಟ್ಟೆಗಳನ್ನು ತೆರೆಯುವಂತೆ ಕೋರಿದ್ದಾರೆ. ದೀರ್ಘಕಾಲೀನ ಪರಿಹಾರವಾಗಿ, 'ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ'ಯಡಿ (PMKSY) ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗದಲ್ಲಿ ಈರುಳ್ಳಿ ಸಂಸ್ಕರಣೆ, ನಿರ್ಜಲೀಕರಣ ಮತ್ತು ಉಪ್ಪಿನಕಾಯಿ ಘಟಕಗಳನ್ನು ಸ್ಥಾಪಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದ್ದಾರೆ. ಇದರಿಂದ ಕಚ್ಚಾ ರಫ್ತಿನ ಮೇಲಿನ ಅವಲಂಬನೆ ಕಡಿಮೆಯಾಗಿ ರೈತರಿಗೆ ಉತ್ತಮ ಮೌಲ್ಯವರ್ಧನೆ ಸಿಗಲಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಗುಲಾಬಿ ಈರುಳ್ಳಿಯ ವಿಶೇಷತೆ

2015ಲ್ಲಿ ಭೌಗೋಳಿಕ ಮಾನ್ಯತೆ (GI) ಪಡೆದಿರುವ ಈ ಈರುಳ್ಳಿಯನ್ನು ದೇಶದ ಬೇರೆ ಯಾವುದೇ ಭಾಗದಲ್ಲಿ ಬೆಳೆಯುವುದಿಲ್ಲ. ಈ ಭಾಗದ ಮಣ್ಣು ಮತ್ತು ಹವಾಮಾನವು ಈ ವಿಶಿಷ್ಟ ಬೆಳೆಗೆ ಮಾತ್ರ ಸೂಕ್ತವಾಗಿದೆ. ಇದರಲ್ಲಿ ಪ್ರೋಟೀನ್, ರಂಜಕ, ಕಬ್ಬಿಣಾಂಶ ಮತ್ತು ಕ್ಯಾರೋಟಿನ್ ಹೆಚ್ಚಿನ ಪ್ರಮಾಣದಲ್ಲಿದೆ. ಭಾರತದಲ್ಲಿ ಇದರ ಸ್ಥಳೀಯ ಬಳಕೆ ಕಡಿಮೆ ಇದ್ದರೂ, ಮಲೇಷ್ಯಾ, ಸಿಂಗಾಪುರ್, ಇಂಡೋನೇಷ್ಯಾ, ಬಹ್ರೇನ್, ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಉಪ್ಪಿನಕಾಯಿ ಮತ್ತು ಸಂಸ್ಕರಿತ ಆಹಾರ ತಯಾರಿಕೆಗೆ ಇದಕ್ಕೆ ಭಾರೀ ಬೇಡಿಕೆಯಿದೆ. ಸರ್ಕಾರ ಸೂಕ್ತ ಶೇಖರಣಾ ಘಟಕಗಳು ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ಒದಗಿಸಿದರೆ, ಭವಿಷ್ಯದಲ್ಲಿ ರೈತರು ಅಕಾಲಿಕ ಬೆಲೆ ಕುಸಿತದಿಂದ ಪಾರಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+