Bengaluru Roads: ಬೆಂಗಳೂರು ವಾಹನ ಸವಾರರಿಗೆ ಡಿಕೆ ಶಿವಕುಮಾರ್ ಭರ್ಜರಿ ಗುಡ್‌ನ್ಯೂಸ್
ಬೆಂಗಳೂರು, ಏಪ್ರಿಲ್ 07: ಬೆಂಗಳೂರಿನಲ್ಲಿ ತಗ್ಗು ಗುಂಡಿಗಳ ರಸ್ತೆಗಳದ್ದೆ ಆರ್ಭಟ. ಎಲ್ಲಿ ನೋಡಿದರು ರಸ್ತೆಗುಂಡಿಗಳು. ವಾಹನ ಸಂಚಾರಕ್ಕೆ ತೊಂದರೆ ಎಂದು ಗೊಣಗುತ್ತಿದ್ದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಬೆಂಗಳೂರಿನ ರಸ್ತೆಗಳ ಗುಣಮಟ್ಟ ಹೆಚ್ಚಿಸಲು ಸರ್ಕಾರ ಕೋಟ್ಯಾಂತರ ರೂಪಾಯಿ ವ್ಯಯಿಸಿ ಅಭಿವೃದ್ಧಿ ಮಾಡಲು ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನಗರದ 10 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ರಸ್ತೆಗಳ ಡಾಂಬರೀಕರಣ (ಬ್ಲಾಕ್ ಟಾಪಿಂಗ್) ಕಾಮಗಾರಿಗಳ ಭೂಮಿ ಪೂಜೆಯನ್ನು ಸೋಮವಾರ ನೆರವೇರಿಸಿದರು.

ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಅವರು ಸಿಹಿ ಸುದ್ದಿ ಪ್ರಕಟಿಸಿದರು. ಬೆಂಗಳೂರಿನ ರಸ್ತೆಗಳ ಗುಣಮಟ್ಟ ಹೆಚ್ಚಿಸಲು ನಗರದ 1600 ಕಿ.ಮೀ ನಷ್ಟು ಬ್ಲಾಕ್ ಮತ್ತು ವೈಟ್ ಟಾಪಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಬೆಂಗಳೂರು ನಗರದ ವಿವಿಧೆಡೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಸೋಮವಾರ ಒಂದೇ ದಿನ 10 ಕಡೆಗಳಲ್ಲಿ ಬ್ಲಾಕ್ ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಲಾಗಿದೆ.
450 ಕಿ.ಮೀ. ರಸ್ತೆ ಕಾಮಗಾರಿ: ಡಿಕೆ ಶಿವಕುಮಾರ್
ಬೆಂಗಳೂರು ನಗರದೊಳಗೆ ಒಟ್ಟು 1600 ಕಿ.ಮೀ ರಸ್ತೆಗೆ ವೈಟ್ ಟಾಪಿಂಗ್ ಹಾಗೂ ಬ್ಲಾಕ್ ಟಾಪಿಂಗ್ ಕಾರ್ಯಕ್ರಮ ರೂಪಿಸಿದ್ದೇವೆ. ಈ ಹಿಂದೆ 196 ಕಿ.ಮೀ ಉದ್ದದ ರಸ್ತೆ ಕಾಮಗಾರಿ ಕೈಗೊತ್ತಿಕೊಂಡಿದ್ದೆವು. ಇಂದು ಸುಮಾರು 450 ಕಿ.ಮೀ ಉದ್ದದ ರಸ್ತೆಗೆ ಕಾಮಗಾರಿ ಮಾಡಲಾಗುತ್ತಿದೆ. ಇನ್ನು 350 ಕಿ.ಮೀ ಉದ್ದದ ಕಾಮಗಾರಿ ಡಿಫೆಕ್ಟ್ ಲಾಯಬಲಿಟಿ ಪಿರಿಯಡ್ (ಡಿಎಲ್ ಪಿ)ಯಾಗಿ ಬಾಕಿ ಉಳಿದಿದೆ. ಇದರ ಹಿನ್ನೆಲೆಯಲ್ಲಿ ಇನ್ನು ಕೆಲ ಕಾಲ ಈ ರಸ್ತೆಗಳಲ್ಲಿ ಹಾನಿಯಾದರೆ ಗುತ್ತಿಗೆದಾರರೇ ಅದನ್ನು ಸರಿಪಡಿಸಬೇಕಾಗುತ್ತದೆ. ಹೀಗಾಗಿ ಈ ರಸ್ತೆಯ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಎಂದು ತಿಳಿಸಿದರು.

ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ರಸ್ತೆಗಳ ಉನ್ನತೀಕರಣಕ್ಕೆ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ರೂ.6 ಸಾವಿರ ಕೋಟಿ ನೀಡಿದ್ದಾರೆ. ಬೆಂಗಳೂರಿನ ಮುಕ್ಕಾಲು ಭಾಗದ ರಸ್ತೆಯ ಬ್ಲಾಕ್ ಹಾಗೂ ವೈಟ್ ಟಾಪಿಂಗ್ ಕೆಲಸ ತೆಗೆದುಕೊಂಡಿದ್ದೇವೆ. ಈ ರೀತಿಯ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು, ಸ್ವತಃ ನಾನೇ ಈ ರಸ್ತೆಗಳ ಕಾಮಗಾರಿ ಪರಿಶೀಲನೆ ಮಾಡಿದ್ದೇನೆ.
ನಗರದಲ್ಲಿ 1600 ಕಿ.ಮೀ ಉದ್ದದ ಮುಖ್ಯರಸ್ತೆ (ಆರ್ಟಿರಿಯಲ್) ಉಪಮುಖ್ಯ ರಸ್ತೆ (ಸಬ್ ಆರ್ಟಿರಿಯಲ್ ರೋಡ್)ಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗೆ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಈ ಎಲ್ಲ ಕಾಮಗಾರಿಗಳು ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಅವರು ಭರವಸೆ ನೀಡಿದರು.
ಪೊಲೀಸ್ ಇಲಾಖೆಗೆ ಮಹತ್ವದ ಸೂಚನೆ
ಬೆಂಗಳೂರಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಪೊಲೀಸ್ ಜಂಟಿ ಆಯುಕ್ತರ ಜತೆ ಚರ್ಚೆ ಮಾಡಲಾಗಿದೆ. ಎಲ್ಲೆಲ್ಲಿ ರಸ್ತೆ ಸರಿಯಿಲ್ಲ ಎಂದು ಪೊಲೀಸರ ಗಮನಕ್ಕೆ ಬರುತ್ತದೆಯೋ ಅದನ್ನು ಪಾಲಿಕೆ ಆಯುಕ್ತರಿಗೆ ತಿಳಿಸಬೇಕು ಎಂದು ತಿಳಿಸಿದ್ದೇನೆ. ರಸ್ತೆ ಹದಗೆಟ್ಟಿರುವುದು ನಮ್ಮ ಇಂಜಿನಿಯರ್ ಗಳಿಗೆ, ಶಾಸಕರ ಕಣ್ಣಿಗೆ ಕಾಣದಿರಬಹುದು. ಆದರೆ ಪೊಲೀಸ್ ಇಲಾಖೆಯವರ ಗಮನಕ್ಕೆ ಬಂದರೆ ಅದನ್ನು ಲಿಖಿತ ರೂಪದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ಇನ್ನು ಮಳೆ ನೀರುಗಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಶ್ವಬ್ಯಾಂಕ್ ನಿಂದ ರೂ.2 ಸಾವಿರ ಕೋಟಿ ನೆರವು ಪಡೆಯುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ ಎಂದು ಕೇಳಿದಾಗ, ಕಸದ ಸಮಸ್ಯೆಯನ್ನು ನಾವು ನಿಭಾಯಿಸುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ, ಇದನ್ನು ಬಗೆಹರಿಸುವುದು ನಮ್ಮ ಜವಾಬ್ದಾರಿ. ಇದಕ್ಕಾಗಿ ನಾವು ಟೆಂಡರ್ ಗಳನ್ನು ಕರೆಯಲಾಗಿದೆ. ನಾವು ನಮ್ಮ ಕೆಲಸ ಮಾಡುತ್ತೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದರು.












Click it and Unblock the Notifications