"ರಸ್ತೆ ಗುಂಡಿ ಮುಚ್ಚಲು ಒಂದು ತಿಂಗಳಷ್ಟೇ ಡೆಡ್‌ಲೈನ್, ಇಲ್ಲದಿದ್ರೆ..." ಸಿಎಂ ಕೊಟ್ಟ ಎಚ್ಚರಿಕೆ ಏನು?
ಬೆಂಗಳೂರಿಗರಿಗೆ ದೊಡ್ಡ ತಲೆನೋವಾಗಿರುವ ರಸ್ತೆಗುಂಡಿ ಸಮಸ್ಯೆಗೆ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಿ ಸಿಗುವ ನಿರೀಕ್ಷೆ ಇದೆ. ಇತ್ತೀಚೆಗೆ ಭಾರೀ ಮಳೆ ಸುರಿಯುತ್ತಿರುವುದರಿಂದ ನಗರದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ವಿಪರೀತವಾಗಿದೆ. ಇದೇ ವಿಚಾರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ರಸ್ತೆ ಗುಂಡಿಗಳ ಸಮಸ್ಯೆಗೆ ಬ್ರೇಕ್ ಹಾಕಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಸಿಲಿಕಾನ್ ಸಿಟಿಯಲ್ಲಿರುವ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಡೆಡ್‌ಲೈನ್ ಕೂಡ ಕೊಟ್ಟಿದ್ದಾರೆ.
ಈ ಸಂಬಂಧ ಬೆಂಗಳೂರು ನಗರ ರಸ್ತೆಗಳ ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ. ರಸ್ತೆ ಗುಂಡಿಗಳಿಂದ ವಾಹನ ಸವಾರರು ಪ್ರತಿದಿನ ಸಮಸ್ಯೆ ಎದುರಿಸುತ್ತಿದ್ದಾರೆ, ಈ ಬಗ್ಗೆ ಆಕ್ರೋಶ ಕೇಳಿಬರುತ್ತಿದ್ದರೂ ಈವರೆಗೆ ಗುಂಡಿ ಮುಚ್ಚದೆ ಇರುವುದು ಅಕ್ಷಮ್ಯ. ಪ್ರತಿ ವಾರ್ಡ್‌ನ ಇಂಜಿನಿಯರ್‌ಗಳು, ಮುಖ್ಯ ಇಂಜಿನಿಯರ್‌ಗಳು ಈಗಾಗಲೇ ಕ್ರಮ ವಹಿಸಬೇಕಿತ್ತು. ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು ಮತ್ತು ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲೇಬೇಕು. ಅಕ್ಟೋಬರ್ ಅಂತ್ಯ ವೇಳೆಗೆ ಎಲ್ಲ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡಿರುವ ಆಯುಕ್ತರು ಫೀಲ್ಡ್ ವರ್ಕ್ ಮಾಡಿ, ನಿಗಾ ಇರಿಸಬೇಕು. ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ಗುತ್ತಿಗೆದಾರರೊಂದಿಗೆ ಶಾಮೀಲಾಗದೆ ಒದಗಿಸಿರುವ ಅನುದಾನಕ್ಕೆ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು, ವೈಜ್ಞಾನಿಕವಾದ ಕಾಮಗಾರಿಗಳನ್ನು ಪೂರೈಸಲು ಕ್ರಮ ವಹಿಸಬೇಕು. ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ? ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ? ಎಂದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಂಡಿ ಮುಚ್ಚುವ ಸಂಬಂಧ ಬಿಡಿಎ, ಬಿಎಂಆರ್‌ಸಿಎಲ್, ಜಲಮಂಡಳಿ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಲಾಗುವುದು, ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯ ಆಯುಕ್ತರು ಪ್ರತಿ ವಾರ ಐದೂ ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚನೆ ನೀಡಿದ್ದಾರೆ.
ಎಷ್ಟು ಗುಂಡಿ ಬಾಕಿ ಇದೆ?
ಹಣದ ಕೊರತೆಯಿದ್ದರೆ ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಒಂದು ತಿಂಗಳ ನಂತರ ಮತ್ತೆ ಮೌಲ್ಯ ಮಾಪನ ನಡೆಸಲಾಗುವುದು. ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳಲ್ಲಿ ಒಟ್ಟು 14,795 ರಸ್ತೆ ಗುಂಡಿಗಳನ್ನು ಗುರುತಿಸಿಲಾಗಿದೆ. ಈಗಾಗಲೇ 6,749 ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 8,046 ಗುಂಡಿಗಳು ಮುಚ್ಚಲು ಬಾಕಿ ಇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಗುಂಡಿ ಮುಚ್ಚಲು ಜೆಟ್‌ಪ್ಯಾಚರ್ ತಂತ್ರಜ್ಞಾನ
ಎಲ್ಲ ನಗರ ಪಾಲಿಕೆಗಳಿಗೂ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು 25 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಪಾಲಿಕೆಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ. ನೂತನ ತಂತ್ರಜ್ಞಾನ ಜೆಟ್‌ಪ್ಯಾಚರ್ ಬಳಸಿಕೊಳ್ಳಲು ರೂ.2.50 ಕೋಟಿಗಳ ಮೊತ್ತದ ಟೆಂಡರ್ ಚಾಲ್ತಿಯಲ್ಲಿದ್ದು, ಸದರಿ ತಂತ್ರಜ್ಞಾನದಿಂದ ತೇವಾಂಶವಿರುವ ಸಮಯದಲ್ಲಿಯೂ ಗುಂಡಿಗಳನ್ನು ಮುಚ್ಚಬಹುದಾಗಿದೆ. ಐದೂ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ತಾಂತ್ರಿಕ ಸಮನ್ವಯಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳಬೇಕು.












Click it and Unblock the Notifications