Bengaluru Rent: ಬೆಂಗಳೂರಲ್ಲಿ ಬಾಡಿಗೆ ಮನೆ ಪಡೆಯುವವರು ಹುಷಾರ್! ನೀವೂ ಹೀಗೆ ಯಾಮಾರಬೇಡಿ
ಬೆಂಗಳೂರು ಬಾಡಿಗೆ ಮನೆಗಳ ಊರು ಕೂಡ ಹೌದು. ದೇಶದ ವಿವಿಧ ಭಾಗಗಳಿಂದ ಜನ ಇಲ್ಲಿಗೆ ಬಂದು ಕೆಲಸ ಮಾಡುತ್ತಾ ಬಾಡಿಗೆ ಮನೆಗಳನ್ನು ಹೆಚ್ಚಾಗಿ ಆಶ್ರಯಿಸಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಅಂದ್ರೆ ಒಂದು ರೀತಿ ಬಿಸಿನೆಸ್ ಆಗಿಬಿಟ್ಟಿದೆ. ಒಂದೊಳ್ಳೆ ಏರಿಯಾದಲ್ಲಿ ಬಾಡಿಗೆ ಸಿಕ್ಕರೆ ಸಾಕು ಅಂತ ಜನ ಕೇಳಿಕೊಳ್ಳುತ್ತಿದ್ದಾರೆ. ಆದೆ ಬಾಡಿಗೆಗೆ ಮನೆ ಪಡೆದ ಮೇಲೂ ಸಂಕಷ್ಟಗಳನ್ನು ಎದುರಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಬಾಡಿಗೆದಾರರು ಈ ಒಂದು ಸಮಸ್ಯೆಯಿಂದ ಒದ್ದಾಡುವಂತಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆ ಪಡೆಯುವುದು ಒಂದು ರೀತಿ ಸವಾಲಿನ ಕೆಲಸವೇ. ಕೆಲವರು ಎಲ್ಲ ಸೌಕರ್ಯ ಇರುವ ನೆಮ್ಮದಿಯ ಜಾಗಗಳಲ್ಲಿ ಬಾಡಿಗೆ ಮನೆಗಳನ್ನು ಹೆಚ್ಚಾಗಿ ಹುಡುಕುತ್ತಾರೆ. ಇನ್ನು ಬಾಡಿಗೆಗೆ ಮನೆ ನೀಡುವ ಮಾಲೀಕರು ಕೂಡ ರೂಲ್ಸ್ ಹಾಕುತ್ತಾರೆ. ಮುಖ್ಯವಾಗಿ ಬಾಡಿಗೆಗೂ ಮುನ್ನ ಪಾವತಿಸುವ ಡಿಪಾಸಿಟ್ ವಿಚಾರದಲ್ಲಿ ಹೆಚ್ಚು ಹುಷಾರು ಬೀಳುತ್ತಾರೆ. ಕೆಲವರು ಒಂದು ವರ್ಷದ ಬಾಡಿಗೆ ಮೊತ್ತವನ್ನು ಅಡ್ವಾನ್ಸ್ ಆಗಿ ಮೊದಲೇ ಪಡೆದುಕೊಳ್ಳುತ್ತಾರೆ.

ಒಪ್ಪಂದದ ಪ್ರಕಾರ ಬಾಡಿಗೆದಾರರು ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಈ ಅಡ್ವಾನ್ಸ್ ಅಥವಾ ಠೇವಣಿ ಹಣವನ್ನು ಮಾಲೀಕರು ವಾಪಸ್ ಕೊಡಬೇಕು. ಆದರೆ ಇತ್ತೀಚೆಗೆ ಮಾಲೀಕರು ಈ ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದಾರೆ ಎಂದು ಹಲವು ದೂರುಗಳು ಕೇಳಿಬಂದಿವೆ. ಅಲ್ಲದೆ ಇದು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬೆಂಗಳೂರಿನ ದೊಡ್ಡ ಹಗರಣ
ಹೌದು, ಬೆಂಗಳೂರಿನ ಪ್ರತಿಷ್ಠಿತ ಏರಿಯಾಗಳಲ್ಲಿರುವ ಮನೆ ಮಾಲೀಕರು ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಹಣ ಪಡೆದು, ಅದನ್ನು ಮನೆ ಖಾಲಿ ಮಾಡುವಾಗ ಬಾಡಿಗೆದಾರರಿಗೆ ಹಿಂತಿರುಗಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಾಡಿಗೆದಾರರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಹಂಚಿಕೊಂಡು ನೋವು ಹೇಳಿಕೊಂಡಿದ್ದಾರೆ. ಬಿಟಿಎಂ ಲೇಔಟ್‌ನ ಫ್ಲಾಟ್‌ವೊಂದರಲ್ಲಿ ವಾಸಿಸುತ್ತಿರುವ ಬೆಂಗಳೂರಿನ ಬಾಡಿಗೆದಾರರೊಬ್ಬರು ತಮ್ಮ ಮನೆ ಮಾಲೀಕರು ತಮ್ಮ ಭದ್ರತಾ ಠೇವಣಿಯನ್ನು ಹಿಂತಿರುಗಿಸದೆ ನಾಪತ್ತೆಯಾಗಿದ್ದಾರೆ ಎಂದಿದ್ದಾರೆ. ಅಲ್ಲದೆ ಇದು ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿರುವ ದೊಡ್ಡ ಹಗರಣ ಎಂದು ಕರೆದಿದ್ದಾರೆ.
ನಾವು ಅವರ ಸೂಚನೆ ಮೇರೆಗೆ ಫ್ಲಾಟ್ ಖಾಲಿ ಮಾಡಿದೆವು. ಆದರೆ ಒಪ್ಪಂದದ ಪ್ರಕಾರ ಮಾಲೀಕರು ತಮ್ಮ ಭದ್ರತಾ ಠೇವಣಿಯನ್ನು ವಾಪಸ್ ಕೊಡಬೇಕಿತ್ತು. ಆದರೆ, ಅವರು ಹಣ ನೀಡುತ್ತಿಲ್ಲ. ಫೋನ್, ಮೆಸೇಜ್‌ಗೂ ಉತ್ತರಿಸುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಕೊನೆಗೆ ಮನೆ ಮಾಲೀಕರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಅಗತ್ಯವಿದ್ದರೆ ಎಲ್ಲ ಸಾಕ್ಷಿ, ಬಾಡಿಗೆ ಒಪ್ಪಂದ, ಮೆಸೇಜ್, ಫೋನ್ ಕರೆಯ ದಾಖಲೆಗಳು ಮತ್ತು ಠೇವಣಿ ವಹಿವಾಟಿನ ಬ್ಯಾಂಕ್ ವಿವರಗಳನ್ನು ಒದಗಿಸಲು ನಾನು ಸಿದ್ಧ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಕೆಲ ಬಾಡಿಗೆ ಮನೆ ಮಾಲೀಕರು ಇದನ್ನೇ ದೊಡ್ಡ ದಂಧೆ ಮಾಡಿಕೊಂಡಿದ್ದಾರೆ. ಬಾಡಿಗೆದಾರರಿಂದ ಹಣ ಸುಲಿಗೆ ಮಾಡಲು ಲಕ್ಷಾಂತರ ರೂಪಾಯಿ ಠೇವಣಿ ಕೇಳುತ್ತಾರೆ. ಅದನ್ನು ನಿಯಮಾನುಸಾರವಾಗಿ ವಾಪಸ್ ಕೊಡದೆ ಅಲೆದಾಡಿಸುತ್ತಾರೆ. ಇಂತಹವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಆಗ್ರಹಿಸುತ್ತಿದ್ದಾರೆ.












Click it and Unblock the Notifications