ಬೆಂಗಳೂರು ಮಂದಿಗೆ ಗುಡ್‌ನ್ಯೂಸ್: ರಾಜಕಾಲುವೆ ಅಭಿವೃದ್ಧಿಗೆ ಸರ್ಕಾರದಿಂದ ₹5,000 ಕೋಟಿ
ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಎಲ್ಲೆಡೆ ಅನಾಹುತಗಳು ಸಂಭವಿಸುತ್ತಿರುವ ಹಿನ್ನೆಲೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿಗೆ ವಿಶ್ವಸಂಸ್ಥೆ ಸಹಯೋಗದಲ್ಲಿ 5,000 ಕೋಟಿ ರೂಪಾಯಿ ವ್ಯಯಿಸಲು ಸರ್ಕಾರ ನಿರ್ಧರಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಇಂದು ಬೆಳಗಾವಿ ಅಧಿವೇಶನದಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಳೆಗಾಲದಲ್ಲಿ ಬೆಂಗಳೂರಿನಲ್ಲೂ ನೀರು ಒಳ ಚರಂಡಿಯಲ್ಲಿ ಹರಿಯದೆ ರಸ್ತೆ ಮೇಲೆ ಹರಿಯುವ ಕಾರಣ ಪ್ರವಾಹ ಸ್ಥಿತಿ ಉಂಟಾಗುತ್ತಿದೆ. ಈ ವರ್ಷದ ಕೂಡ ಮಳೆಗಾಲದಲ್ಲಿ ಯಥೇಚ್ಚವಾಗಿ ಹಾನಿ ಉಂಟಾಗಿದೆ. ಮಳೆ ನೀರು ರಸ್ತೆಗಳ ಮೇಲೆ ಹರಿದು ವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಪರಿಣಾಮ ಜನ ಸಾಕಷ್ಟು ಸಮಸ್ಯೆಗಳಿಗೆ ತುತ್ತಾಗಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರಾಜಕಾಲುವೆಗಳ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಬೇಕು ಎಂದು ತೀರ್ಮಾನಿಸಿ ಕಂದಾಯ ಇಲಾಖೆಗೆ ಜವಾಬ್ದಾರಿ ನೀಡಿದ್ದಾರೆ. ಬೆಂಗಳೂರಿನಲ್ಲಿ 856 ಕಿ.ಮೀ ರಾಜಕಾಲುವೆಗಳು ಇವೆ. ಕೆಲವು ಕಡೆ ಮೂರನೇ ಹಂತದ ಕಾಲುವೆಗಳು 200 ಕಿ.ಮೀ ಎಂದು ಗುರುತಿಸಲಾಗಿದೆ. ಕಾಲುವೆಗಳನ್ನು ಹೆಚ್ಚು ನೀರು ಕೊಂಡೊಯ್ಯಲು ಶಾಶ್ವತ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದ್ದು, 350 ಕಿ.ಮೀ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು ಎಂದು ವಿವರಿಸಿದ್ದಾರೆ.
ಇನ್ನು ಮೊದಲ ಹಂತದಲ್ಲಿ 240 ಕೋಟಿ ರೂಪಾಯಿ ಟೆಂಡರ್‌ಗೆ ಹೋಗಲಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಬಾಕಿ ಇರುವ ಎಲ್ಲಾ ರಾಜಕಾಲುವೆಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ನೀಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸ್ವತಃ ಡಿಕೆ ಶಿವಕುಮಾರ್ ಅವರು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದಿದ್ದಾರೆ.
ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿಗೆ ಒನ್ ಟೈಮ್ ಪ್ರಾಜೆಕ್ಟ್ ಬಗ್ಗೆ ವಿಶ್ವಬ್ಯಾಂಕ್ ಜೊತೆ ಮಾತುಕತೆ ನಡೆಸಲಾಗಿದೆ. 3000 ಕೋಟಿ ರೂಪಾಯಿ ಸಾಲ ಪಡೆದು ಬೆಂಗಳೂರಿನಲ್ಲಿ ಮಳೆಹಾನಿ ತಪ್ಪಿಸುವ ಯೋಜನೆ ರೂಪಿಸಿದ್ದೇವೆ. ಈ ಪೈಕಿ 2000 ಕೋಟಿ ರೂಪಾಯಿ ಹಣವನ್ನು ರಾಜಕಾಲುವೆ ಸರಿಪರಿಸಲು ಬಿಬಿಎಂಪಿಗೆ ಹಾಗೂ 1000 ಕೋಟಿ ರೂಪಾಯಿ ಹಣವನ್ನು ಜಲಮಂಡಳಿಗೆ ನೀಡಲಾಗುವುದು ಎಂದು ಹೇಳಿದ್ದಾರೆ.

ಒಳಚರಂಡಿ ವ್ಯವಸ್ಥೆ ಇಲ್ಲದ ಕಡೆ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ. ನಮ್ಮ ಹಣಕಾಸು ಇಲಾಖೆ ಹಾಗೂ ವಿಪತ್ತು ನಿರ್ವಹಣೆ ಇಲಾಖೆಯಿಂದಲೂ 2,000 ಕೋಟಿ ರೂಪಾಯಿ ಹಣವನ್ನು ರಾಜಕಾಲುವೆ ಅಭಿವೃದ್ಧಿಗೆ ನೀಡಲಾಗುವುದು ಎಂದಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಬರ ಹೆಚ್ಚಾಗಿತ್ತು. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಬೆಳೆಹಾನಿಯಾಗಿದೆ ಎಂದಿದ್ದಾರೆ.
ಮಳೆ-ಬೆಳೆ ಹಾನಿಗೆ ಕೊಟ್ಟ ಪರಿಹಾರವೆಷ್ಟು?:
ಬರ ಪರಿಹಾರವಾಗಿ ರಾಜ್ಯ ಸರ್ಕಾರ ಕಳೆದ ವರ್ಷ 4200 ಕೋಟಿ ರೂಪಾಯಿ ಹಣವನ್ನು ರೈತರಿಗೆ ಪರಿಹಾರದ ರೂಪದಲ್ಲಿ ನೀಡಿದೆ. ಮಳೆಹಾನಿಗೆ ಈ ವರ್ಷ 297 ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ರೈತರಿಗೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಈ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆ 115 ಮಿ.ಮೀ. ಆಗಿದ್ದು, ವಾಸ್ತವದಲ್ಲಿ 151 ಮಿ.ಮೀ ಮಳೆಯಾಗಿದೆ. ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು 928 ಮಿ.ಮೀ ಮಳೆಯಾಗಿದೆ. ಹಿಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಅಂದರೆ 213 ಮಿ.ಮೀ ಮಳೆಯಾಗಿದೆ. ಎಲ್ಲ ಸೇರಿ ಒಟ್ಟಾರೆ ವಾಡಿಕೆಗಿಂತ ಶೇ 20 ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದೆಲ್ಲೆಡೆ ಒಂದೇ ರೀತಿ ಮಳೆಯಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯೂ ಆಗಿದೆ ಎಂದು ಸಚಿವರು ಹೇಳಿದ್ದಾರೆ.












Click it and Unblock the Notifications