Bengaluru Rains: ನಗರದಲ್ಲಿಂದು ಮಳೆ ಸಿಂಚನ, ವಿವಿಧ ಬಡಾವಣೆಗಳು ಕೂಲ್ ಕೂಲ್: ಆ.9ರ ತನಕ ಮಳೆ!
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಮುಂದುವರಿದಿದೆ. ಮಂಗಳವಾರ ಸಂಜೆ ಬೆಂಗಳೂರಿನಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ವಿವಿಧ ಬಡಾವಣೆಗಳಲ್ಲಿ ಮಳೆ ಸುರಿಯಿತು. ಸಂಜೆ 5 ಗಂಟೆ ಹೊತ್ತಿಗೆ ಅನಕೇ ಪ್ರದೇಶಗಳಲ್ಲಿ ಮಳೆ ದಾಖಲಾಗಿದೆ. ಆಗಸ್ಟ್ 9ರವರೆಗೆ ನಗರದಲ್ಲಿ ಅಲ್ಲಲ್ಲಿ ಜೋರು ಮಳೆ ಮುನ್ಸೂಚನೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಇಂದು ಸಂಜೆ 4 ಗಂಟೆ ನಂತರ ಆರ್.ಆರ್ ನಗರ, ಗೊಟ್ಟಿಗೆರೆ, ಕೋರಮಂಗಲ, ಸಿಲ್ಕ್ ಸಂಸ್ಥೆ, ಕನಕಪುರ ರಸ್ತೆ, ಬಿಎಂಟಿ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳ, ಚೌಡೇಶ್ವರಿ, ಯಲಹಂಕ, ಜಕ್ಕೂರು, ಮಹಾದೇವಪುರ, ಮಾರತ್ತಹಳ್ಳಿ, ಜಕ್ಕಸಂದ್ರ, ಡೈರಿ ವೃತ್ತ,ಜೆಪಿ ನಗರ, ಜಯನಗರ, ಚಾಮರಾಜ ಪೇಟೆ, ಮೆಜೆಸ್ಟಿಕ್ ಸುತ್ತಮುತ್ತ, ವಿದ್ಯಾರಣ್ಯಪುರ, ಯಶವಂತಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಜಿಟಿ ಜಿಟಿ ಮಳೆ ಸುರಿದಿದೆ.

ಮಳೆ ಸಕ್ರಿಯ: ಬೆಂಗಳೂರಿಗರಲ್ಲಿ ಹರ್ಷ
ಬೆಂಗಳೂರು ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಭಾಗದ ಬಡಾವಣೆಗಳಲ್ಲಿ ವಾತಾವರಣ ತಂಪಾಗಿದ್ದು, ಅಲ್ಲಲ್ಲಿ ಜೋರು ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಮಳೆ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮಳೆ ಫೋಟೋ, ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸುರಿಯುತ್ತಿದ್ದ ಮುಂಗಾರು ಮಳೆ ಮತ್ತೆ ರಾಜಧಾನಿ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ ಎಂದು #BengaluruRains ಹ್ಯಾಷ್ ಟ್ಯಾಗ್ ಹಾಕಿ ಹರ್ಷ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 9ರವರೆಗೆ ಬೆಂಗಳೂರಿಗೆ ಮಳೆ ಮುನ್ಸೂಚನೆ
ಕಳೆದ ಕೆಲವು ದಿನಗಳಲ್ಲಿ ಒಂದೆರಡು ಕಡೆಗಳಲ್ಲಿ ಸೋನೆ ರೂಪದಲ್ಲಿ ಬಂದಿದ್ದ ಮಳೆ, ಇದೀಗ ಮತ್ತೆ ಬೆಂಗಳೂರಿನಲ್ಲಿ ದರ್ಶನ ನೀಡಿದೆ. ಆಗಸ್ಟ್ 9ರವರೆಗೆ ನಗರದಲ್ಲಿ ಮಳೆ ಆರ್ಭಟ ಮುಂದುವರಿಯಲಿದೆ. ಆದರೆ ನಗರದ ಯಾವ ಭಾಗದಲ್ಲೂ ಭಾರೀ ಮಳೆ ಬರುವ ಎಚ್ಚರಿಕೆ ಸದ್ಯದ ಮುನ್ಸೂಚನೆಯಲ್ಲಿ ಇಲ್ಲ. ಬಂಗಾಳಕೊಲ್ಲಿ ಸಮುದ್ರಮಟ್ಟದಲ್ಲಿ ಹವಾಮಾನದಲ್ಲಿ ಬದಲಾವಣೆಗಳು ಆದಲ್ಲಿ ಧಾರಾಕಾರ ಮಳೆ ನಿರೀಕ್ಷಿಸಬಹುದಾಗಿದೆ. ಬೆಂಗಳೂರಿನಲ್ಲಿ ಸದ್ಯ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಮುಂದಿನ ಒಂದು ವಾರ ಇದೇ ರೀತಿಯ ಮಳೆ ವಾತಾವರಣ ಮುಂದುವರಿಯಲಿದೆ. ಮಳೆಯಿದಿಂದಾಗಿ ನಗರದಲ್ಲಿ ತಾಪಮಾನ ಕಡಿಮೆ ಆಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
⚠️ ATTENTION: Heavy Rains reported from South, West and Parts of East Bengaluru⚠️#BengaluruRains pic.twitter.com/IZYdqfBhYH
— Namma Karnataka Weather (@namma_vjy) August 4, 2026
ಕರ್ನಾಟಕ ಹವಾಮಾನ ವರದಿ
ರಾಜ್ಯ ಕರಾವಳಿ, ಮಲೆನಾಡು ಜಿಲ್ಲೆಗಳು ಹಾಗೂ ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ಭಾರೀಯಿಂದ ಅತ್ಯಧಿಕ ಭಾರೀ ಮಳೆ ಸುರಿಯುತ್ತಿದೆ. ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಳಗಾವಿ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.


Click it and Unblock the Notifications
