Bengaluru Rains: ಇಂದು ಗುರುವಾರ ಸಂಜೆ ವಿವಿಧೆಡೆ ಮಳೆ, ಹವಾಮಾನ ಮುನ್ಸೂಚನೆ
ಬೆಂಗಳೂರು, ಆಗಸ್ಟ್ 31: ರಾಜ್ಯದ ಮಹಾನಗರ ಬೆಂಗಳೂರಿನಲ್ಲಿ ಇಂದು ಗುರುವಾರ (ಆ.31) ಸಂಜೆ ವಿವಿಧ ಪ್ರದೇಶಗಳಲ್ಲಿ ಮಳೆರಾಯ ತಂಪೆರೆಯಲಿದ್ದಾನೆ. ಇಂದಿನಿಂದ ನಗರದಲ್ಲಿ ಮುಂಗಾರು ಸಕ್ರಿಯಗೊಳ್ಳಲಿದೆ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ.
ದಶಕಗಳ ಬಳಿಕ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ದಾಖಲಾಗಿದೆ. ಇದರಿಂದಾಗಿ ಮಳೆಗಾಲದಲ್ಲಿ ಒಣ ಹವೆಯ ವಾತಾವಣರ ಸೃಷ್ಟಿಯಾಗಿದ್ದು, ಇದು ಅಂತ್ಯಗೊಳ್ಳಲಿದೆ. ನಿರೀಕ್ಷೆಯಂತೆ ಇಂದು ಸಂಜೆ ವಿವಿಧೆಡೆ ಮಳೆ ಆಗಲಿದೆ. ಇನ್ನೂ ಮುಂದಿನ ಒಂದು ವಾರ ನಗರದಲ್ಲಿ ತುಂತುರು ಮಳೆ ಮುಂದುವರಿಯಲಿದೆ.

ಬುಧವಾರ ಆಗಸ್ಟ್ 30ರಂದು ಬಿಎಂಟಿ ಬಡಾವಣೆಯಲ್ಲಿ 12 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದಂತೆ ಬಿಳೆಕಳಿಯಲ್ಲಿ 5.5 ಮಿಲಿ ಮೀಟರ್, ಪಟ್ಟಾಭಿರಾಮನಗರದಲ್ಲಿ 5 ಮಿಲಿ ಮೀಟರ್ ಸೇರಿ ಕೆಲವೆಡೆ ಹಗುರು ಮಳೆ ಬಿದ್ದಿದೆ. ಇದು ಮುಂಗಾರು ಮಳೆ ಸಕ್ರಿಯಗೊಳ್ಳುವ ಮುನ್ಸೂಚನೆ ಎನ್ನಲಾಗುತ್ತಿದೆ.
ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗುರುವಾರ ಮಧ್ಯಾಹ್ನದ ನಂತರ ಅಲ್ಲಲ್ಲಿ ಜೋರು ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಬಿದ್ದಿದೆ. ಹೀಗಾಗಿ ಸಂಜೆ ನಂತರ ಸೆಕೆ ವಾತಾವರಣ ಕಣ್ಮರೆಯಾಗಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಹಿತಿ ನೀಡಿದೆ.
ಬೆಂಗಳೂರಿಗೆ ಸೆಪ್ಟಂಬರ್ 5ರವರೆಗೆ ಆಗಾಗ ಲಘು ಮಳೆ ಇಲ್ಲವೇ ಸಾಧಾರಣ ಮಳೆ ನಿರೀಕ್ಷೆ ಇದೆ. ಇದರ ಹೊರತು ಯಾವುದೇ ಗಂಭೀರ ಇಲ್ಲವೇ ಭಾರಿ ಮಳೆ ಸ್ವರೂಪ ಹವಾಮಾನ ಬದಲಾವಣೆಗಳು ಇಲ್ಲ ಎಂದು ಇಲಾಖೆ ಹೇಳಿದೆ.

ರಾಜಧಾನಿಯು ಈ ಆಗಸ್ಟ್ ತಿಂಗಳಲ್ಲಿ ಶೇಕಡಾ 90ರಷ್ಟು ಮಳೆ ಕೊರತೆ ಕಂಡಿದೆ. ಅಂದರೆ ವಾಡಿಕೆಗಿಂತ ಅತ್ಯಧಿಕ ಕಡಿಮೆ ಶೇ.12ರಷ್ಟು ಮಾತ್ರವೇ ಮಳೆ ದಾಖಲಾಗಿದೆ. ಒಳನಾಡಿನ ಜಿಲ್ಲೆಗಳಲ್ಲಿಯೂ ಸಹ ಮಳೆ ಕೊರತೆ ಆಗಿದೆ.
ಕರ್ನಾಟಕ ಈ ಜಿಲ್ಲೆಗಳಲ್ಲಿ ಮಳೆ ಸಂಭವ
ಇನ್ನೂ ಕರ್ನಾಟಕದ ಕರಾವಳಿಯ ಮೂರು ಜಿಲ್ಲೆಗಳು ಸೇರಿದಂತೆ ಒಳನಾಡಿನ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಶಿವಮೊಗ್ಗ, ಕೊಡಗು, ಮೈಸೂರು, ಮಂಡ್ಯ ಹಾಗೂ ಬೆಳಗಾವಿ, ಧಾರವಾಡ, ವಿಜಯಪುರ, ಭಾಗಲಕೋಟೆ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮುಂದಿನ ಐದು ದಿನ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ.
ಈ ಭಾಗದಲ್ಲಿ ಬಿಸಿಲಿಗೆ ರೈತರು ಬೆಳೆದ ಬೆಳೆ ಒಣಗುತ್ತಿವೆ. ಮಳೆ ಬಾರದೆ ರೈತರಿಗೆ ಆರ್ಥಿಕ ನಷ್ಟವಾಗಿದೆ. ಕೆಲವರು ಒಣಗಿದ ಮೊಣಕಾಲುದ್ದದ ಬೆಳೆಯನ್ನು ಹರಗಿಸಿದ್ದಾರೆ. ಇನ್ನೂ ಕೆಲವು ಇವತ್ತಲ್ಲ ನಾಳೆ ಮಳೆ ಬರಲಿದೆ ಎಂದು ಕಾಯುತ್ತಾ ಕುಳಿತಿದ್ದಾರೆ. ಎಲ್ಲೆಡೆ ಶುಷ್ಕ ವಾತಾವರಣವೇ ಮುಂದುವರಿದಿದೆ.












Click it and Unblock the Notifications