Bengaluru Rain: ಬೆಂಗಳೂರಿಗೆ ಆಗಸ್ಟ್ 14ರವರೆಗೆ ವ್ಯಾಪಕ ಮಳೆ ಮುನ್ಸೂಚನೆ
ಬೆಂಗಳೂರು, ಆಗಸ್ಟ್ 08: ಬೆಂಗಳೂರಿನಲ್ಲಿ ವಿವಿಧ ಬಡಾವಣೆಗಳಲ್ಲಿ ಗುರುವಾರ ಮಟ ಮಟ ಮಧ್ಯಾಹ್ನವೇ ಜೋರು ಮಳೆಯ ಆಗಮನವಾಯಿತು. ನೋಡ ನೋಡುತ್ತಿದ್ದಂತೆ ಜಿಟಿ ಜಿಟಿ ಮಳೆ ಸುರಿಯಿತು. ಈ ಮೂಲಕ ಬೆಂಗಳೂರಿನಲ್ಲೂ ಮುಂಗಾರು ಮಳೆ ಚುರುಕುಗೊಳ್ಳುವ ಮುನ್ಸೂಚನೆ ನೀಡಿದೆ. ನಗರದಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗುರುವಾರ ಮಾತ್ರವಲ್ಲದೇ, ನೆನ್ನೆ ಬುಧವಾರ ನಗರದ ಹಲವು ಕಡೆಗಳಲ್ಲಿ ಉತ್ತಮ ಮಳೆ ಆಗಿದೆ. ಹೀಗಾಗಿ ವಾತಾವರಣ ತಂಪಿನಿಂದ ಕೂಡಿದೆ. ನೆನ್ನೆ ಹೆರೋಹಳ್ಳಿಯಲ್ಲಿ12 ಮಿಲಿ ಮೀಟರ್ ಮಳೆ, ಹೆಚ್ ಗೊಲ್ಲಹಳ್ಳಿ ಮತ್ತು ಚಾಮರಾಜಪೇಟೆಯಲ್ಲಿ ತಲಾ 10.5 ಮಿಲಿ ಮೀಟರ್ ಮಳೆ ಆಗಿದೆ. ಉಳಿದೆಡೆ ಹಗುರ ಮಳೆ ದಾಖಲಾಗಿದೆ.

ಕಳೆದ 48 ಗಂಟೆಯಿಂದ ನಗರದಲ್ಲಿ ಚಳಿಯ ವಾತಾವರಣದಲ್ಲಿ ಏರಿಕೆ ಆಗಿದ್ದು, ತಾಪಮಾನದಲ್ಲಿ ಇಳಿಕೆ ಆಗಿದೆ. ಗುರುವಾರ ಮಧ್ಯಾಹ್ನ ಕೋರಮಂಗಲ, ಮಡಿವಾಳ, ಡೈರಿ ವೃತ್ತ, ದೊಮ್ಮಲೂರು, ಇಂದಿರಾನಗರ, ಎಂಜಿ ರಸ್ತೆ, ಹೆಬ್ಬಾಳ, ಯಲಹಂಕ, ಹಳೆ ಮದ್ರಾಸ್ ರಸ್ತೆ, ಯಲಚೇನಹಳ್ಳಿ, ರಾಗಿಗುಡ್ಡ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಹಗುರ ಮಳೆ ಸುರಿದಿದೆ.
ಹವಾಮಾನ ಇಲಾಖೆ ಪ್ರಕಾರ, ಆಗಸ್ಟ್ 14ರವರೆಗೆ ಸಿಲಿಕಾನ್ ಸಿಟಿಯಲ್ಲಿ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ. ನಿತ್ಯ ಕೆಲ ಕಾಲ ಬಿಸಿಲಿನ ದರ್ಶನವಾದರೂ ಇಡೀ ದಿನ ತೇವಭರಿತ ಗಾಳಿ ಬೀಸಲಿದೆ. ಆಗಾಗ ತುಂತುರು ಮಳೆ ಬಂದು ಹೋಗಲಿದೆ. ಮಳೆ ಮಧ್ಯಾಹ್ನ ಇಲ್ಲವೇ ಸಂಜೆ, ಕೆಲವೊಮ್ಮೆ ತಡರಾತ್ರಿ ಅಬ್ಬರಿಸುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಳೆಗೆ ಬಂದಾಗೆಲ್ಲ ವಾಟರ್‌ಲಾಗಿಂಗ್ ಸಮಸ್ಯೆ ಉಲ್ಬಣ
ನಗರದಲ್ಲಿ ಕಳೆದ ಸೋಮವಾರ ಸುರಿದ ಭಾರೀ ಮಳೆಗೆ ಅನೇಕ ಕಡೆಗಳಲ್ಲಿ ವಾಟರ್‌ಲಾಗಿಂಗ್ ಸಮಸ್ಯೆ ಉಂಟಾಯಿತು. ರಸ್ತೆ ಪಕ್ಕದಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗದೇ ಅಲ್ಲಲ್ಲಿಯೇ ರಸ್ತೆಗಳ ಮೇಲೆ ನಿಂತ ಪರಿಣಾಮ ವಾಹನ ಸವಾರರು ಭಯದಲ್ಲಿಯೇ ಸಂಚರಿಸಬೇಕಾಯಿತು.
ಕೇವಲ ಹತ್ತು ನಿಮಿಷ ಮಳೆಗೆ ನಗರದ ಪ್ರಮುಖ ರಸ್ತೇಗಳೆ ಜಲಾವೃತಗೊಳ್ಳತ್ತವೆ. ರಸ್ತೆಗೆ ಬಿದ್ದ ಮಳೆ ನೀರು ಸರಾಗವಾಗಿ ರಾಜಕಾಲುವೆಗೆ ಹರಿದು ಹೋಗುತ್ತಿಲ್ಲ. ಇದೆಲ್ಲ ನಿರ್ವಹಿಸಬೇಕಾದ ಬಿಬಿಎಂಪಿ ಏನು ಮಾಡುತ್ತಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ರಾಜ್ಯದ ವಿವಿಧೆಡೆ ಮಳೆ ಮುಂದುವರಿಕೆ
ಅರಬ್ಬಿ ಸಮುದ್ರದಲ್ಲಿನ ಹವಾಮಾನದಲ್ಲಿ ಬದಲಾವಣೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಮಲೆನಾಡು ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆ ಮುಂದುವರಿದಿದೆ. ಹಾವೇರಿ, ಬೆಳಗಾವಿ, ಧಾರವಾಡ, ವಿಜಯಪುರ ಸೇರಿದಂತೆ ಒಂದಷ್ಟು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಮಳೆ ಸುರಿಯುತ್ತಿದೆ. ನದಿಗಳು ಭರ್ತಿಯಾಗಿದ್ದು, ಕೆಲವೆಡೆ ಪ್ರವಾಹ ಭೀತಿ, ಸಂಕಷ್ಟಗಳು ಮುಂದುವರಿದಿವೆ.
ಮುಂದಿನ ಮೂರು ದಿನ ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಜೋರು ಮಳೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಹಲವೆಡೆ ಸಾಧಾರಣ ಮಳೆ ಮುಂದುವರಿಯಲಿದೆ.












Click it and Unblock the Notifications