Bengaluru weather: ಬೆಂಗಳೂರಿನಲ್ಲಿ ಭಾನುವಾರ ಸುರಿದ ಲಘು ಮಳೆ, ಜುಲೈ 6ರವರೆಗಿನ ಹವಾಮಾನ ವರದಿ
ಬೆಂಗಳೂರು, ಜೂನ್ 30: ಬೆಂಗಳೂರಿನಲ್ಲಿ ಭಾನುವಾರವು ಮುಂಗಾರು ಮಳೆ ಮುಂದುವರಿದಿದ್ದು, ಕೆಲವೆಡೆ ಜೋರು ಮಳೆ ಸುರಿದಿದೆ. ಇಡೀ ದಿನ ಬಿಸಿಲಿನ ದರ್ಶನ ಅಪರೂಪವಾಗಿತ್ತು. ಆಗಾಗ ಬಂದ ಜಡಿ ಮಳೆಗೆ ವಾಹನ ಸವಾರರು, ತೊಂದರೆ ಅನುಭವಿಸಿದರು.
ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಇದೇ ರೀತಿಯ ವಾತಾವರಣ ಎರಡು ವಾರದಿಂದ ಮುಂದುವರಿದಿದೆ. ಆಗಾಗ ಹಗುರ ಮಳೆ ಸಹಿತ ಬಿಸಿಲಿನ ದರ್ಶನವು ಆಗುತ್ತಿದೆ. ಇಂದು ಭಾನುವಾರ ಸಂಜೆ ವಿಜಯನಗರ, ದೀಪಾಂಜಲಿನಗರ, ನಾಯಂಡಹಳ್ಳಿ, ಹಂಪಿನಗರ, ಚಂದ್ರಾಲೇಔಟ್, ಮೆಜೆಸ್ಟಿಕ್ ಸುತ್ತಮುತ್ತ, ಚಾಮರಾಜಪೇಟೆ, ಹೆಬ್ಬಾಳ, ಕೋರಮಂಗಲ ಹಾಗೂ ಇನ್ನಿತರ ಬಡಾವಣೆಗಳಲ್ಲಿ ಲಘು ಮಳೆ ಉಂಟಾಯಿತು.

ಆಗಾಗ ಬರುತ್ತಿದ್ದ ಮಳೆಗೆ ಜನರು ಮಳೆಯಿಂದ ರಕ್ಷಿಸಿಕೊಳ್ಳಲು ಮೇಲ್ಸೇತುವೆ ಕೆಳಗೆ, ಮೆಟ್ರೋ ವಯಾಡಕ್ಟ ಕೆಳಗೆ ನಿಂತಿದ್ದು ಕಂಡು ಬಂತು. ಕೆಲವು ರಸ್ತೆಗಳ ಮೇಲೆ ನೀರು ನಿಂತು, ಕೆಲವೆಡೆ ಸಿಗ್ನಲ್‌ಗಳಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಯಿತು.
ಸಂಜೆ ವೇಳೆ ರಸ್ತೆ ಅಕ್ಕಪಕ್ಕದ ವ್ಯಾಪಾರಕ್ಕೆ ಹೊಡೆತ ಬಿದ್ದಿದ್ದು, ಜಿಟಿ ಜಿಟಿ ಮಳೆಗೆ ಗ್ರಾಹಕರು ಇಲ್ಲದೇ ಅಂಗಡಿ ಮುಂಗಟ್ಟುಗಳು ಬಣಗುಡಿದವು. ರಜಾದಿನವಾದ್ದರಿಂದ ಇಂದು ಮೋಜು ಮಸ್ತಿಗೆ ಪ್ಲಾನ್ ಮಾಡಿಕೊಂಡಿದ್ದವರಿಗೆ ಮಳೆ ನಿರಾಸಿ ತಂದೊಡ್ಡಿತು.
ಜುಲೈ 06 ರವರೆಗೆ ಮಳೆಯ ದರ್ಶನ
ಮುಂದಿನ ಒಂದು ವಾರ ಬೆಂಗಳೂರಿನಲ್ಲಿ ಜೋರು ಮಳೆ ಸುರಿಯುವ ಸಾಧ್ಯತೆ ಇದೆ. ಜುಲೈ 06 ರವರೆಗೆ ನಗರದಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಕೆಲವೆಡೆ ಧಾರಾಕಾರವಾಗಿ ಮಳೆ ಅಬ್ಬರಿಸಲಿದ್ದು, ಮೋಡ ಕವಿದ ವಾತಾವರಣ ಕಂಡು ಬರಲಿದೆ.
ರಾಜ್ಯದ ಈ ಜಿಲ್ಲೆಗಳಿಗೂ ಭಾರೀ ಮಳೆ
ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಅತ್ಯಧಿಕ ಮಳೆ ಬರಲಿದೆ. ಈ ಪೈಕಿ ಮುಂದಿನ 48 ಗಂಟೆ ಕರಾವಳಿಯ ಮೂರು ಜಿಲ್ಲೆ ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಿಗೆ ಭಾರೀ ಮಳೆ ಬರುವ ಹಿನ್ನೆಲೆಯಲ್ಲಿ ಒಟ್ಟು ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಈ ಆರು ಜಿಲ್ಲೆಗಳು ಬಿಟ್ಟು ಉಳಿದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣೆ, ಕೆಲವೊಮ್ಮೆ ಧಾರಾಕಾರ ಮಳೆ ಬರುವ ನಿರೀಕ್ಷೆ ಇದೆ. ರಾಜ್ಯಾದ್ಯಂತ ಮುಂಗಾರು ಚುರುಕಿದ್ದು, ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ. ಉತ್ತರ ಕರ್ನಾಟಕದಲ್ಲಿ ಒಂದೆರಡು ಕಡೆ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.












Click it and Unblock the Notifications