Bengaluru Rain Live Updates: ಬೆಂಗಳೂರಲ್ಲಿ ಭಾರೀ ಮಳೆ, ಎಲ್ಲೆಡೆ ಪ್ರವಾಹ: ಕ್ಷಣ ಕ್ಷಣದ ಮಾಹಿತಿಗಾಗಿ...

ಬೆಂಗಳೂರು, ಅಕ್ಟೋಬರ್ 22: ಕರ್ನಾಟಕ ರಾಜಧಾನಿ ಬೆಂಗಳೂರು ಭಾರೀ ಮಳೆಗೆ ಅಕ್ಷರಶಃ ನಲುಗುತ್ತಿದೆ. ಕಳೆದೊಂದು ವಾರದಿಂದ ಬಿಟ್ಟು ಬಿಡದೇ ರಾಜಧಾನಿಯಲ್ಲಿ ಮಳೆ ಅಬ್ಬರಿಸುತ್ತಿದೆ. ಈ ಮಹಾಮಳೆ ಇನ್ನೂ ಒಂದು ವಾರಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪರಿಣಾಮ ನಗರ ನಿವಾಸಿಗಳು ಭಯದಲ್ಲಿಯೇ ಜೀವಿಸುತ್ತಿದ್ದಾರೆ. ವಾಹನ ಸವಾರರು ಆತಂಕದಲ್ಲಿ ಓಡಾಡುತ್ತಿದ್ದಾರೆ.

ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಎಲ್ಲ 08 ವಲಯ ವ್ಯಾಪ್ತಿಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ. ದಿನವಿಡೀ ಮಬ್ಬು ವಾತಾವರಣ ಕಂಡು ಬರುತ್ತಿದೆ. ವರ್ಷದ ಭಾರಿ ಮಳೆಗೆ ನಗರದ ಸರ್ಜಾಪುರ 1 ಹಾಗೂ ಕೆಂಗೇರಿಯಲ್ಲಿ 2 ಮಕ್ಕಳು ಸೇರಿ ಒಟ್ಟು 03 ಸಾವುಗಳಾಗಿವೆ. ಮರಗಳು ಧರೆಗುರುಳಿವೆ. ಮರದ ಕೊಂಬೆಗಳು ಮುರಿದು ಬಿದ್ದಿವೆ. ತಗ್ಗು ಪ್ರದೇಶದ ಮನೆಗಳು, ಅಪಾರ್ಟ್‌ಮೆಂಟ್‌ಗಳು ದ್ವೀಪಗಳಾಂತಾಗಿವೆ. ಬಿಬಿಎಂಪಿ, ಎನ್‌ಡಿಆರ್‌ಎಫ್ ಪರಿಹಾರ ಕ್ರಮ ಕೈಗೊಂಡಿದೆ. ಸದ್ಯ ಮಳೆ ಬಿಡುವ ಲಕ್ಷಣಗಳು ಇಲ್ಲ. ಮುಂದಿನ ಒಂದು ವಾರ ಮಳೆ ಬರಲಿದ್ದು, ಕ್ಷಣ ಕ್ಷಣದ ಲೈವ್ ಮಾಹಿತಿಗೆ 'ಒನ್‌ ಇಂಡಿಯಾ' ಕನ್ನಡ ವೆಬ್‌ಸೈಟ್‌ಗೆ ಭೇಟಿ ನೀಡಿ.

Bengaluru Rain Live Updates  Heavy Rain and Flood Situation in Silicon Valley of India

Oct 23, 2024, 10:38 pm IST

ಬೆಂಗಳೂರಲ್ಲಿ ಮುಂದುವರಿದ ಧಾರಾಕಾರ ಮಳೆ. ಯಲಚೇನಹಳ್ಳಿಯ ರಾಮಕೃಷ್ಣನಗರ ಹಾಗೂ ಫಯಾಜಾಬಾದ್‌ನಲ್ಲಿ 100ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಮಳೆ ನೀರು ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನುಗ್ಗಿದ್ದು, ಜನ ಪರದಾಡುತ್ತಿದ್ದಾರೆ.
Oct 23, 2024, 10:25 pm IST

ಬೆಂಗಳೂರಿನ ಇಂದು ಕೂಡ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿದಿದೆ. ಹಲವು ಪ್ರದೇಶಗಳು ಮಳೆಯಿಂದ ಮತ್ತೆ ಜಲಾವೃತಗೊಂಡಿವೆ. ಇಂದು ಭಾರಿ ಮಳೆಯಿಂದಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿಯ ರಸ್ತೆಗಳು ಕೂಡ ಮತ್ತೆ ಜಲಾವೃತಗೊಂಡಿವೆ.
Oct 23, 2024, 5:33 pm IST

ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ನಿರಂತರ ಮಳೆಯಿಂದಾಗಿ ನೆಲಮಂಗಲ ರಸ್ತೆಯ ಚಿಕ್ಕಿಬಿದರಕಲ್ಲು ಗ್ರಾಮದ ಬಳಿ ಸೇತುವೆ ಕುಸಿತವಾಗಿದೆ. ಗ್ರಾಮದ ರಾಮನ ದೇವಾಲಯಕ್ಕೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ನೆಲಮಂಗಲ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದ ಸೇತುವೆ ಕುಸಿಸಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.
Oct 23, 2024, 5:22 pm IST

ಬೆಂಗಳೂರಿನಲ್ಲಿ ಇಂದು ಭಾರೀ ಮಳೆ ಆರ್ಭಟ

ಬೆಂಗಳೂರಿನಲ್ಲಿ ಇಂದು ಭಾರೀ ಮಳೆ ಆರ್ಭಟ
ಬುಧವಾರ ಸಂಜೆ 4 ಗಂಟೆ ಹೊತ್ತಿಗೆ ಜಯನಗರ, ವಿಜಯನಗರ, ಡೈರಿ ವೃತ್ತ, ಹೆಬ್ಬಾಳ, ಕೋರಮಂಗಳ, ಬೆಳ್ಳಂದೂರು, ಬೇಗೂರು, ಸರ್ಜಾಪುರ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಚಾಮರಾಜಪೇಟೆ, ಲಾಲ್ ಬಾಗ್ ಮತ್ತು ಮೆಜೆಸ್ಟಿಕ್ ಸುತ್ತಮುತ್ತ, ಯಲಹಂಕ, ಯಲಹಂಕ ಚೌಡೇಶ್ವರಿ ವಾರ್ಡ್, ಎಚ್‌ಎಸ್‌ಆರ್ ಬಡಾವಣೆ, ಕೆಂಗೇರಿ, ಬಾಗಲಗುಂಟೆ, ವಿದ್ಯಾರಣ್ಯಪುರ, ಯಶವಂತಪುರ, ಬಸವನಗುಡಿ, ಗಾಂಧೀ ಬಜಾರ್, ಚಾಮರಾಜಪೇಟೆ ಸೇರಿದಂತೆ ಬಹುತೇಕ ನಗರದ ಎಲ್ಲ ಬಡಾವಣೆಗಳಲ್ಲಿ ಭರ್ಜರಿ ಮಳೆ ಆಗುತ್ತಿದೆ. ಕಳೆದ ಒಂದು ಗಂಟೆಯಿಂದಲೂ ಮಳೆ ಸುರಿಯುತ್ತಿದೆ.
Oct 23, 2024, 4:49 pm IST

ಯಲಹಂಕ ಅಪಾರ್ಟ್ಮೆಂಟ್ ಸ್ಥಳಕ್ಕೆ ಡಿಸಿಎಂ ಭೇಟಿ

ಯಲಹಂಕ ಅಪಾರ್ಟ್ಮೆಂಟ್ ಸ್ಥಳಕ್ಕೆ ಡಿಸಿಎಂ ಭೇಟಿ
ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಇಂದು ಸಂಜೆ ಯಲಹಂಕದ ಕೇಂದ್ರೀಯ ವಿಹಾರ ವಸತಿ ಸಮುಚ್ಛಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರಿಗೆ ಶಾಸಕ ಶಾಸಕರಾದ ವಿಶ್ವನಾಥ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್, ವಲಯ ಆಯುಕ್ತರಾದ ಕರೀಗೌಡ ಅವರು ಪರಿಹಾರ ಕಾರ್ಯ, ಮಳೆ ಹಾನಿಯ ವಿವರ ನೀಡಿದರು.
Oct 23, 2024, 12:59 pm IST

ಇಂದು ಬೆಳಗ್ಗೆ ಮಳೆ ಕೊಂಚ ವಿರಾಮ, ಸಂಜೆ....

ಇಂದು ಬೆಳಗ್ಗೆ ಮಳೆ ಕೊಂಚ ವಿರಾಮ, ಸಂಜೆ....
ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದವರೆಗೆ ಕೊಂಚ ವಿರಾಮ ನೀಡಿರುವ ಮಳೆರಾಯ ಸಂಜೆ ಅಬ್ಬರಿಸುವ ಮುನ್ಸೂಚನೆ ಕೊಟ್ಟಿದ್ದಾನೆ. ಕಚೇರಿಗೆ ಬಂದ ಕೆಲಸಗಾರರು ಸಂಜೆ ಬೇಗ ಮನೆಗೆ ತೆರಳಲು ಯೋಜಿಸಿದ್ದಾರೆ. ಮತ್ತೊಂದೆಡೆ ಬಿಬಿಎಂಪಿಯು ಸೋಮವಾರ, ಮಂಗಳವಾರ ಸುರಿದ ಮಳೆಯಿಂದಾಗಿ ಉಂಟಾದ ಪ್ರವಾಹ ಸ್ಥಳಗಳಲ್ಲಿ ಪರಿಹಾರ ಕಾರ್ಯ ಮುಂದುವರಿಸಿದೆ.
Oct 23, 2024, 9:24 am IST

ಬೆಂಗಳೂರಿನ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದಿದ್ದು, ರಕ್ಷಣಾ ಕಾರ್ಯ ಇನ್ನೂ ನಡೆಯುತ್ತಿದೆ. 5 ಶವಗಳನ್ನು ಹೊರತೆಗೆಯಲಾಗಿದೆ. ಕಾರ್ಯಾಚರಣೆ ಮುಂದುವರೆದಿದ್ದು, ಅವಶೇಷಗಳಡಿ ಸಿಲುಕಿರುವವರಿಗೆ ಹುಡುಕಾಟ ಮುಂದುವರೆದಿದೆ. 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಲಾಗುತ್ತಿತ್ತು. ಅದು ಮಂಗಳವಾರ ಸಂಜೆ ಕುಸಿದು ಬಿದ್ದಿದ್ದು, 21ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.
Oct 23, 2024, 8:35 am IST

ಮಂಚನಬೆಲೆ ಡ್ಯಾಂನಿಂದ ನೀರು ಹೊರಕ್ಕೆ

ಬೆಂಗಳೂರು, ಮಾಗಡಿ, ನೆಲಮಂಗಲ ಭಾಗದಲ್ಲಿ ಅತ್ಯಧಿಕ ಮಳೆ ಆದ ಹಿನ್ನೆಲೆಯಲ್ಲಿ ಆರ್ಕಾವತಿ ನದಿ ಒಳಹರಿವು ಏರಿಕೆ ಆಗಿದೆ. ಈ ಸಂಬಂಧ ಅಡ್ಡಲಾಗಿ ಕಟ್ಟಲಾಗಿರುವ ಮಾಗಡಿ ತಾಲೂಕು ವ್ಯಾಪ್ತಿಯಲ್ಲಿನ ಮಂಚನಬೆಲೆ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಉತ್ತಮ ಮಳೆ ಆಗಿದ್ದರಿಂದ ಜಲಾಶಯಗಳು ಭರ್ತಿ ಆಗಿವೆ. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Oct 23, 2024, 8:32 am IST

ಅಕ್ಟೋಬರ್ 15 ರಿಂದ 22, 2024ರ ತನಕ ಬೆಂಗಳೂರು ನಗರ ಜಿಲ್ಲೆಯಲ್ಲಿ ಸುರಿದ ಒಟ್ಟಾರೆ ಮಳೆ 241 ಮಿ. ಮೀ.. ವಾಡಿಕೆಯಂತೆ ಈ ಅವಧಿಯಲ್ಲಿ 118 ಮಿ. ಮೀ. ಮಳೆಯಾಗಬೇಕಿತ್ತು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ. ಬೆಂಗಳೂರು ನಗರದಲ್ಲಿ ಬುಧವಾರವೂ ಮಳೆಯಾಗುವ ಮುನ್ಸೂಚನೆ ಇದ್ದು, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಐಟಿ, ಬಿಟಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಬೇಕು ಎಂದು ಸಲಹೆಯನ್ನು ಕೊಡಲಾಗಿದೆ.
Oct 23, 2024, 8:25 am IST

ಬೆಂಗಳೂರು ಹವಾಮಾನ ವರದಿ

ಬೆಂಗಳೂರು ಹವಾಮಾನ ವರದಿ
ಬೆಂಗಳೂರಿನಲ್ಲಿ ನೆನ್ನೆ ಮಂಗಳವಾರ ಹಂಪಿನಗರದಲ್ಲಿ ಹೆಚ್ಚು ಮಳೆ ಅಂದರೆ, 63.50 ಮಿಲಿ ಮೀಟರ್ ಮಳೆ ಆಗಿದೆ. ಉಳಿದಂತೆ ಮಾರುತಿ ಮಂದಿರ, ಕೆಂಗೇರಿ ಇನ್ನಿತರ ಬಡಾವಣೆಗಳು ಸಹ ಹೆಚ್ಚು ಮಳೆ ಸ್ವೀಕರಿಸಿವೆ. ಮುಂದಿನ ಮೂರು ದಿನಗಳ ಕಾಲ ನಗರದಲ್ಲಿ ಈ ಭಾರಿ ಮಳೆ ಆಗಲಿದೆ ಎಂದು KSNDMC ಮುನ್ಸೂಚನೆ ನೀಡಿದೆ.
Oct 23, 2024, 8:06 am IST

ಪ್ರತಿ ವರ್ಷ ಪ್ರವಾಹ ಎದುರಿಸಬೇಕಾ?

ಪ್ರತಿ ವರ್ಷ ಪ್ರವಾಹ ಎದುರಿಸಬೇಕಾ?
ಬೆಂಗಳೂರಿನಲ್ಲಿ ಮಳೆ ಶುರುವಾಗಿದೆ. ಪ್ರವಾಹ ಪರಿಕಾರ ಕಾರ್ಯಕ್ರಮ ನಾನು ಗೌರವಿಸುತ್ತೇನೆ. ಬೆಂಗಳೂರಿನ ಯೋಜನೆಗಳನ್ನು ನಾನು ಒಪ್ಪುತ್ತೇನೆ. ಆದರೆ ಪ್ರವಾಹದ ಸ್ಥಳಗಳ ನಿವಾಸಿಗಳು ಕೇವಲ ಎರಡು ಆಯ್ಕೆ ಹೊಂದಿದ್ದಾರೆ ಒಂದು ಅವರು ಪ್ರತಿ ವರ್ಷ ಪ್ರವಾಹ, ಮಳೆ ತೊಂದರೆ ಎದುರಿಸಬೇಕು. ಇಲ್ಲವೇ ಆ ಸ್ಥಳ/ಬೆಂಗಳೂರು ತೊರೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ.
Oct 23, 2024, 7:28 am IST

ಮಳೆ ಸಂಬಂಧಿಸಿದ ದೂರುಗಳು ಇದ್ದಲ್ಲಿ 1533 ಕರೆ ಮಾಡಿ

ಮಳೆ ಸಂಬಂಧಿಸಿದ ದೂರುಗಳು ಇದ್ದಲ್ಲಿ 1533 ಕರೆ ಮಾಡಿ
ಬೆಂಗಳೂರು ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ದಾಖಲೆಯ ಮಳೆಯಿಂದ ಕೆಲವು ವಲಯ ಪ್ರದೇಶಗಳು ಜಲಾವೃತಗೊಂಡಿದ್ದು, ಮರದ ರೆಂಬೆ/ಕೊಂಬೆಗಳು ಬಿದ್ದಿದ್ದು, ಪಾಲಿಕೆಯ ಎಲ್ಲಾ ವಲಯದ ನಿಯಂತ್ರಣ ಕೊಠಡಿಯ ತಂಡ ಹಾಗೂ ಬಿಬಿಎಂಪಿ ವಿಪತ್ತು ನಿರ್ವಹಣೆಯ ತಂಡವು ಹಗಲಿರುಳು‌ ಕೆಲಸ ಮಾಡುತ್ತಿದ್ದು, ಪಂಪ್ ಮುಖಾಂತರ ನೀರನ್ನು ತೆರವುಗೊಳಿಸಲಾಗುತ್ತಿದೆ. ಧರೆಗುರುಳಿರುವ ಮರ/ರೆಂಬೆ/ಕೊಂಬೆಗಳ ತೆರವು ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಮಳೆ ಸಂಬಂಧಿಸಿದ ದೂರುಗಳು ಇದ್ದಲ್ಲಿ 1533 ಕರೆ ಮಾಡಿ ದೂರು ದಾಖಲಿಸಬಹುದು ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
Oct 23, 2024, 7:14 am IST

ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ 245 ಎಂಎಂ ಮಳೆ

ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ 245 ಎಂಎಂ ಮಳೆ
ಬೆಂಗಳೂರಿನಲ್ಲಿ ಅಕ್ಟೋಬರ್ ತಿಂಗಳಲ್ಲಿ 245 ಎಂಎಂ ಮಳೆಯಾಗಿದ್ದು, ಇದು ಅತಿ ಹೆಚ್ಚು ಮಳೆಯಾಗಿರುವ ಪೈಕಿ ನಾಲ್ಕನೇ ಮಳೆಯಾಗಿದೆ. ನಗರದಲ್ಲಿ ಪ್ರಸ್ತುತ ಹವಾಮಾನ ಬದಲಾವಣೆಯಿಂದಾಗಿ ಮೂರು-ನಾಲ್ಕು ದಿನಗಳಿಂದ ಹಲವಾರು ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದೆ. ಪ್ರವಾಹ ಪೀಡಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಲು ಪಾಲಿಕೆ, ಎನ್.ಡಿ.ಆ‌ರ್.ಎಫ್‌. ಎಸ್.ಡಿ.ಆರ್.ಎಫ್, ಅಗ್ನಿ ಶಾಮಕ ದಳದ ತಂಡಗಳು 24/7 ಕಾರ್ಯನಿರ್ವಹಿಸುತ್ತಿವೆ.
Oct 23, 2024, 7:12 am IST

ನಗರದ ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯದಲ್ಲಿ ಕಳೆದ 72 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಕೆರೆಗಳೆಲ್ಲಾ ತುಂಬಿ ಕೋಡಿಯಲ್ಲಿ ಹೆಚ್ಚು ನೀರು ಹರಿದು ರಾಜಕಾಲುವೆಗಳಿಗೆ ಬರುತ್ತಿರುವ ಕಾರಣ ವಿವಿಧ ಪ್ರದೇಶಗಳು ಜಲಾವೃತವಾಗಿರುತ್ತದೆ. ಚೌಡೇಶ್ವರಿ ನಗರದಲ್ಲಿ 160 ಎಂ.ಎಂ ಮಳೆಯಾಗಿದ್ದು, ಇದು ಇತಿಹಾಸದಲ್ಲಿಯೇ ಅತಿ ಹೆಚ್ಚು ಮಳೆಯಾಗಿರುತ್ತದೆ.
Oct 22, 2024, 11:03 pm IST

ಪ್ರಚಾರಕ್ಕಾಗಿ ನಾನು ಭೇಟಿ ನೀಡ್ತಿಲ್ಲ: ಡಿಸಿಎಂ

ಪ್ರಚಾರಕ್ಕಾಗಿ ನಾನು ಭೇಟಿ ನೀಡ್ತಿಲ್ಲ: ಡಿಸಿಎಂ
ಬೆಂಗಳೂರಲ್ಲಿ ಮಳೆ ಆಗುತ್ತಿರುವ ಸಂದರ್ಭದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪ್ರಚಾರ ತೆಗೆದುಕೊಳ್ಳಬೇಕಾದ ಅವಶ್ಯಕತೆ ನನಗೆ ಇಲ್ಲ ಎಂದು ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಹೇಳಿದ್ದಾರೆ. ನಮ್ಮ ಅಧಿಕಾರಿಗಳು 48 ಗಂಟೆ ನಿರಂತರವಾಗಿ ಕೆಲಸ ಮಾಡಿದ್ದಾರೆ. ತಡರಾತ್ರಿಯೂ ಕೆಲವು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
Oct 22, 2024, 10:08 pm IST

ಬೆಂಗಳೂರಿನ ಜಿಕೆವಿಕೆಯಲ್ಲಿ ದಾಖಲೆಯ ಮಳೆ. ಇಲ್ಲಿ 186.2 ಮಿ.ಮೀಟರ್‌ ಮಳೆಯಾಗಿರುವುದು ವರದಿಯಾಗಿದೆ. 24 ಗಂಟೆಯಲ್ಲಿ ದಾಖಲಾದ ಅತ್ಯಂತ ಹೆಚ್ಚು ಮಳೆಯ ಪ್ರಮಾಣ ಇದಾಗಿದೆ. 1997ರಲ್ಲಿ 178.9 ಮಿ.ಮೀ ಮಳೆಯಾಗಿದ್ದೇ ದಾಖಲೆಯ ಮಳೆಯಾಗಿತ್ತು ಎನ್ನಲಾಗಿದೆ.
Oct 22, 2024, 8:57 pm IST

ಈ ದಿನ ಮಳೆಯ ಕಾರಣದಿಂದ ಹೊರಮಾವು ಅಂಡರ್ ಪಾಸ್‌ನಲ್ಲಿ ನಿಂತಿದ್ದ ನೀರನ್ನು ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯೇ ತೆರವು ಮಾಡುವ ಮೂಲಕ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟಿದ್ದಾರೆ.
Oct 22, 2024, 8:31 pm IST

ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಕ್ಟೋಬರ್ 23 ರಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ/ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಉಳಿದಂತೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಐಟಿಐ ಗಳಿಗೆ ರಜೆ ಇರುವುದಿಲ್ಲ.
Oct 22, 2024, 8:14 pm IST

ಬೆಂಗಳೂರಲ್ಲಿ ಮಳೆ ಮುಂದುವರಿದಿದ್ದು, ಮಂಗಳವಾರ ಸಂಜೆ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ. ಬೆಂಗಳೂರಿನ ಪೂರ್ವ ಭಾಗದಲ್ಲಿ ವಾಹನ ಸವಾರರು ತಾಸುಗಟ್ಟಲೆ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
Oct 22, 2024, 7:40 pm IST

ಸರಣಿ ಟ್ವೀಟ್‌ಗಳ ಮೂಲಕ ತರಾಟೆ

ಸರಣಿ ಟ್ವೀಟ್‌ಗಳ ಮೂಲಕ ತರಾಟೆ
ಬೆಂಗಳೂರಲ್ಲಿ ಮಳೆಯಿಂದ ಸೃಷ್ಟಿಯಾಗಿರುವ ಅವಾಂತರದ ಬಗ್ಗೆ ವಿರೋಧ ಪಕ್ಷಗಳು ಸರಣಿ ಟ್ವೀಟ್‌ಗಳ ಮೂಲಕ ಸರ್ಕಾರ ಹಾಗೂ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿವೆ. ಬೆಂಗಳೂರಿನ ರಸ್ತೆಗಳನ್ನು ಸಾವಿನ ಬಲೆಯಾಗಿ ಬದಲಾಯಿಸುತ್ತಿರುವ ಬಿಬಿಎಂಪಿಯ ಕಾರ್ಯವೈಖರಿಗೆ (ಪಾಂಡಿತ್ಯಕ್ಕೆ) ಸಾಟಿಯೇ ಇಲ್ಲ ಎಂದು ಜೆಡಿಎಸ್‌ ವ್ಯಂಗ್ಯವಾಡಿದೆ.
Oct 22, 2024, 7:36 pm IST

ಬೆಂಗಳೂರು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿರುವ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್‌. ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಲಿರುವ ಡಿಸಿಎಂ. ಇನ್ನು ಕೆಲವೇ ನಿಮಿಷದಲ್ಲಿ ಸಿಟಿ ರೌಂಡ್ಸ್‌ ಪ್ರಾರಂಭವಾಗುವ ಸಾಧ್ಯತೆ ಇದೆ.
Oct 22, 2024, 6:40 pm IST

ಭಾರಿ ಮಳೆ: ಪೊಲೀಸರಿಂದ ಕೃತಜ್ಞತೆಯಿಲ್ಲದ ಕೆಲಸ

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಪೊಲೀಸರು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ನಿರ್ವಹಣೆ ಜೊತೆಗೆ ವಾಟರ್ ಲಾಗಿಂಗ್ ಸಮಸ್ಯೆಯನ್ನು ನಿವಾರಿಸುವ ಥ್ಯಾಂಕ್‌ಲೆಸ್ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಸಂಸ್ಥೆ ಬಿಬಿಎಂಪಿಯು ನಿರ್ಲಕ್ಷ್ಯ ವಹಿಸಿದ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ ಎಂದು ಸಿಟಿಜನ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು ಎಕ್ಸ್‌ ಹ್ಯಾಂಡಲ್ ವಿಡಿಯೋ ಹಂಚಿಕೊಂಡಿದೆ.
Oct 22, 2024, 6:23 pm IST

ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನರಿಗೆ ಸಮಸ್ಯೆ ಎದುರಾದರೆ ಬಿಬಿಎಂಪಿಯ ಉಚಿತ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದಾಗಿದೆ. ಬೆಂಗಳೂರಿನ ಎಂಟು ವಲಯಗಳ ಸಹಾಯವಾಣಿ ಸಂಖ್ಯೆ ಇಲ್ಲಿದೆ
Oct 22, 2024, 5:54 pm IST

ಕೂಗಿಲು ಜಂಕ್ಷನ್ ಬಳಿಕ ರಸ್ತೆ ಜಲಾವೃತ

ಬೆಂಗಳೂರಿನ ಯಲಹಂಕ ವಲಯದ ಕೂಗಿಲು ಕ್ರಾಸ್-ಸರ್ವಿಸ್ ರಸ್ತೆಯಿಂದ ಐಎಎಫ್ ಕಡೆಗಿನ ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಈ ಭಾಗದ ರಸ್ತೆಯನ್ನು ಮುಚ್ಚಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸ್ಥಳದಲ್ಲಿ ಇಂದು ಮಂಗಳವಾರ ಬೆಳಗ್ಗೆಯಿಂದಲೇ ಜನರ ರಕ್ಷಣಾ ಕಾರ್ಯ ನಡೆದಿದೆ. ಇಲ್ಲಿನ ಕೆರೆ ಕೋಡಿ ಹರಿದ ಪರಿಣಾಮ, ಈ ದುಸ್ಥಿತಿ ಎದುರಾಗಿದೆ ಎಂದು ತಿಳಿದು ಬಂದಿದೆ.
Oct 22, 2024, 5:52 pm IST

ಚಿತ್ರದುರ್ಗದಲ್ಲಿ ಮಳೆ ಅರ್ಭಟ

ಚಿತ್ರದುರ್ಗದಲ್ಲಿ ತಡರಾತ್ರಿ ಮಳೆರಾಯ ಅಬ್ಬರಿಸಿ ಬೊಬ್ಬಿರಿತಿದ್ದಾನೆ. ಮಳೆರಾಯನ ಆರ್ಭಟಕ್ಕೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆರೆ ಕಟ್ಟೆಗಳು, ಚೆಕ್ ಡ್ಯಾಂಗಳು ಭರ್ತಿಯಾಗಿ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಅಂದಹಾಗೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ತಳುಕು ಸಮೀಪದ ಗಜ್ಜುಗಾನಹಳ್ಳಿ ಹಳ್ಳ ಮೈದುಂಬಿ ಹರಿಯುತ್ತಿದೆ. ಸರ್ವಕಾಲಿಕ ದಾಖಲೆ ಮೀರಿ ತುಂಬಿ ಹರಿಯುತ್ತಿರು ಹಳ್ಳ ಎಂದು ಹೇಳಲಾಗುತ್ತಿದೆ.ಈ ಹಳ್ಳದ ರಭಸಕ್ಕೆ ಸೈಜುಕಲ್ಲು ತುಂಬಿದ ಟ್ರ್ಯಾಕ್ಟರ್ ಕೊಚ್ಚಿ ಹೋಗಿದೆ.
Oct 22, 2024, 5:35 pm IST

ಯಲಹಂಕದಲ್ಲಿ ಮಳೆ ಅನಾಹುತ; ಬಿಬಿಎಂಪಿ ಸಿದ್ಧತೆ

ಬದ್ರಪ್ಪ ಲೇಔಟ್/ಟಾಟಾ ನಗರ್: 03 ಅಗ್ನಿ ಶಾಮಕ ವಾಹನ, 1 ಜನರೇಟರ್ ಪಂಪ್, 6 ಫ್ಲೋಟಿಂಗ್ ಪಂಪ್ ವ್ಯವಸ್ಥೆ. ಬಸವ ಸಮಿತಿ(ತಿಂಡ್ಲು ರಸ್ತೆ): ಹಾಗೂ ಕೇಂದ್ರಿಯಾ ವಿಹಾರ್ ಅಪಾರ್ಟ್ಮೆಂಟ್ ನಲ್ಲಿ ಒಂದು ಅಗ್ನಿ ಶಾಮಕ ವಾಹನ ನಿಲ್ಲಿಸಲಾಗಿದೆ. ಮಳೆ ನೀರು ತೆಗೆಯಲು. ಕೇಂದ್ರೀಯ ವಿಹಾರ್: 15 ಬೋಟ್, ಟಾಟಾ ನಗರದಲ್ಲಿ ಒಂದು ಬೋಟ್ ವ್ಯವಸ್ಥೆ ಮಾಡಲಾಗಿದೆ. ನೀರಿನ ಬಾಟಲ್‌ಗಳ ವಿತರಣೆ: ಕುಡಿಯುವ ನೀರು ಹಾಗೂ ಆಹಾರ ಪೊಟ್ಟಣಗಳನ್ನು ಹಂಚಲಾಗುತ್ತಿದೆ. ಯಲಹಂಕದಲ್ಲಿ 5 ಲೀಟರ್‌ನ 1500 ನೀರಿನ ಬಾಟಲ್‌ ಹಾಗೂ ಬ್ಯಾಟರಾಯನಪುರದಲ್ಲಿ 2000 ನೀರಿನ ಬಾಟಲ್‌ ವಿತರಿಸಲಾಗಿದೆ. ಈ ಪ್ರದೇಶಗಳಲ್ಲಿ ಊಟ ಹಾಗೂ ಟಿಫನ್‌ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Oct 22, 2024, 5:23 pm IST

ಭಾರೀ ಮಳೆಗೆ ಕಾಣದ ರಸ್ತೆ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾರುಗಳ ನಡುವೆ ಅಪಘಾತ

ಕಾಫಿನಾಡು ಚಿಕ್ಕಮಗಳೂರು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದು ಹಲವು ದಿನಗಳೇ ಕಳೆದಿವೆ. ಇನ್ನೂ ಇಂದು ಸುರಿಯುತ್ತಿರುವ ಮಳೆಗೆ ರಸ್ತೆ ಕಾಣದೆ ಅಪಘಾತವೊಂದು ಸಂಭವಿಸಿದೆ. ಭಾರೀ ಮಳೆಗೆ ರಸ್ತೆ ಕಾಣದೆ ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಎನ್.ಆರ್.ಪುರ ತಾಲೂಕಿನ ದೇವದಾನ ಎಸ್ಟೇಟ್ ಬಳಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ 2 ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆಯಿಂದ ಮಾಗುಂಡಿ, ಬಾಳೆಹೊನ್ನೂರು ಸುತ್ತಮುತ್ತಾ ಧಾರಾಕಾರ ಮಳೆಯಾಗುತ್ತಿದೆ. ಮಾಗುಂಡಿ ಸಮೀಪ ಮಳೆ ನೀರು ಮನೆಗಳಿಗೆ ನುಗ್ಗುವ ಆತಂಕ ಎದುರಾಗಿದೆ
Oct 22, 2024, 4:45 pm IST

ವಿದ್ಯಾರಣ್ಯಪುರದಲ್ಲಿ ಗುಡುಗು ಸಹಿತ ಭಾರೀ ಮಳೆ

ವಿದ್ಯಾರಣ್ಯಪುರದಲ್ಲಿ ಗುಡುಗು ಸಹಿತ ಭಾರೀ ಮಳೆ
ನಿನ್ನೆ ಸಂಜೆ ವೇಳೆಗೆ ಅಬ್ಬರಿಸಿದ್ದ ವರುಣ ಇಂದು ಮಧ್ಯಾಹ್ನವೇ ಬೆಂಗಳೂರಿನ ಹಲವೆಡೆ ತನ್ನ ಆರ್ಭಟ ಶುರು ಮಾಡಿದ್ದಾನೆ. ನಗರದ ವಿದ್ಯಾರಣ್ಯಪುರದಲ್ಲಿ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿದ್ದು, ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಹಲೆವಡೆ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.
Oct 22, 2024, 4:40 pm IST

1030 ಮನೆಗಳಿಗೆ ನೀರು, ಪ್ರವಾಹ ಸ್ಥಿತಿ

1030 ಮನೆಗಳಿಗೆ ನೀರು, ಪ್ರವಾಹ ಸ್ಥಿತಿ
ನಗರದ ವಿದ್ಯಾರಣ್ಯಪುರ, ಕೊಡುಗೇಹಳ್ಳಿ, ಯಲಹಂಕ ಉಪವಿಭಾಗ, ಯಲಹಂಕ ಉಪನಗರ ಉಪವಿಭಾಗ ಸೇರಿದಂತೆ ಒಟ್ಟು ಈವರೆಗೆ 1030 ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇಲ್ಲೆಲ್ಲ ಬಿಬಿಎಂಪಿ ಅಧಿಕಾರಿಗಳು ತಪಾಸಣೆ ಮಾಡಿ, ಪರಿಹಾರ ಕಾರ್ಯ, ನೀರು ಹೊರ ಹಾಕುವ ಕಾರ್ಯ ಕೈಗೊಂಡಿದ್ದಾರೆ ಎಂದು ಪಾಲಿಕೆ ಮಾಹಿತಿ ನೀಡಿದೆ.
Oct 22, 2024, 4:35 pm IST

ನಗರದ ಹಲವೆಡೆ ವಿದ್ಯುತ್ ವ್ಯತ್ಯಯ, ಇಂಟರ್‌ನೆಟ್ ಸ್ಲೋ

ನಗರದ ಹಲವೆಡೆ ವಿದ್ಯುತ್ ವ್ಯತ್ಯಯ, ಇಂಟರ್‌ನೆಟ್ ಸ್ಲೋ
ಬೆಂಗಳೂರಿನಲ್ಲಿ ಜೋರು ಮಳೆ ಬೀಳುತ್ತಿದ್ದು ವಿಜಯನಗರ, ರಾಜಾಜಿನಗರ ಹಾಗೂ ರಾಜರಾಜೇಶ್ವರಿ ನಗರ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯಗೊಂಡಿದೆ. ಜೊತೆಗೆ ಇಂಟರ್‌ನೆಟ್ ಕೂಡ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿದೆ. ಭಾರೀ ಮಳೆಗೆ ರಸ್ತೆಗಳೆಲ್ಲವೂ ಜಲಾವೃತವಾದ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ತಮ್ಮ ಉದ್ಯೋಗಿಗಳಿಗೆ ಸೂಚನೆ ನೀಡಿವೆ. ಆದರೆ ಜೋರು ಮಳೆಯಿಂದಾಗಿ ಸರಿಯಾದ ವಿದ್ಯುತ್ ಹಾಗೂ ಇಂಟರ್‌ನೆಟ್‌ ಇಲ್ಲದೆ ಜನ ಅತಂತ್ರರಾಗಿದ್ದಾರೆ.
READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+