ಬೆಂಗಳೂರು ಮಳೆ ಅವಾಂತರದಿಂದ ಎಚ್ಚೆತ್ತ ಸರ್ಕಾರ, ಸಿಎಂ ಕೊಟ್ಟ ಖಡಕ್ ಎಚ್ಚರಿಕೆ ಏನು?
ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆ ಸಿಲಿಕಾನ್ ಸಿಟಿ ಬೆಂಗಳೂರಿಗರ ಬದುಕು ಅಸ್ತವ್ಯಸ್ಥಗೊಂಡಿದೆ. ಒಂದು ಮಳೆಯಾದರೆ ಸಾಕು ಬೆಂಗಳೂರು ನೀರಿನಲ್ಲಿ ಮುಳುಗಿ ತೇಲುತ್ತೆ ಎಂದು ವಿಪಕ್ಷಗಳು ಕೂಡ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಂಗಳೂರು ನಗರದ ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ರಾಜಕಾಲುವೆ ಒತ್ತುವರಿಯನ್ನು ಗಮನಿಸಿದ ಸಿದ್ದರಾಮಯ್ಯ ಅವರು ಮಹತ್ವದ ಸೂಚನೆ ಕೊಟ್ಟಿದ್ದಾರೆ.
ಬೆಂಗಳೂರು ನಗರದ ಮಳೆಪೀಡಿತ ಪ್ರದೇಶಗಳ ಭೇಟಿಯ ಪ್ರಯುಕ್ತ ಇಂದು ಯಲಹಂಕದಲ್ಲಿನ ರಾಜಕಾಲುವೆ ಒತ್ತುವರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಒತ್ತುವರಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಗರದ ಮಾನ್ಯತಾ ಟೆಕ್, ಇಬ್ಸು, ಮ್ಯಾನ್ ಫೋ ಹಾಗೂ ಕಾರ್ಲೆ ಖಾಸಗಿ ಬಿಲ್ಡರ್ ಗಳು ರಾಜಕಾಲುವೆ ಒತ್ತುವರಿ ಮಾಡಿರುವ ಬಗ್ಗೆ ದೂರು ಇದೆ. ಹೀಗಾಗಿ ಯಾರೇ ಒತ್ತುವರಿ ಮಾಡಿದ್ದರೂ ಹಾಗೂ ಇದರಲ್ಲಿ ಎಷ್ಟೇ ದೊಡ್ಡ ಬಿಲ್ಡರ್‌ಗಳೇ ಆಗಿದ್ದರೂ ಮುಲಾಜು ನೋಡದೆ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎ ಡಿಕೆ ಶಿವಕುಮಾರ್ ಕೂಡ ಮಳೆಯಿಂದ ಹಾನಿ ಉಂಟಾಗಿರುವ ಮಾನ್ಯತಾ ಟೆಕ್ ಪಾರ್ಕ್‌ಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸ್ಥಳದಲ್ಲೇ ಚರ್ಚಿಸಿ, ತಕ್ಷಣ ಅನುಷ್ಠಾನಕ್ಕೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಚರಂಡಿಗಳಲ್ಲಿ ಎಲ್ಲಿಯೂ ನೀರು ನಿಲ್ಲದಂತೆ, ಸರಾಗವಾಗಿ ಮಳೆ ನೀರು ಹರಿಯುವಂತೆ ಕ್ರಮ ವಹಿಸುವಂತೆ ಡಿಕೆ ಶಿವಕುಮಾರ್ ನಿರ್ದೇಶನ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರು ನಿನ್ನೆ ರಾತ್ರಿ ಕೂಡ ಮಳೆಯಿಂದ ಹಾನಿಗೆ ಒಳಗಾಗಿದ್ದ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಮಳೆ ಬಾಧಿತ ಬಿಟಿಎಮ್ ಲೇಔಟ್‌ಗೆ ಭೇಟಿ ನೀಡಿ, ಎನ್.ಎಸ್.ಪಾಳ್ಯದಲ್ಲಿ ಪರಿಸ್ಥಿತಿ ವೀಕ್ಷಿಸಿದರು. ಅಲ್ಲಿನ ಮಧುವನ್ ಅಪಾರ್ಟ್‌ಮೆಂಟ್‌ನಲ್ಲಿ ಮಳೆಯಿಂದಾಗಿ ವಿದ್ಯುತ್ ಪ್ರವಹಿಸಿ ಮೃತಪಟ್ಟ ಮನಮೋಹನ್ ಕಾಮತ್ ಹಾಗೂ ದಿನೇಶ್ ಅವರ ಕುಟುಂಬಸ್ಥರನ್ನು ಭೇಟಿಯಾಗಿ, ಸಾಂತ್ವನ ತಿಳಿಸಿದ್ದರು. ಮಳೆಯಿಂದ ಉಂಟಾದ ಅನಾಹುತಗಳ ಅವಲೋಕನ ಹಾಗೂ ಪರಿಸ್ಥಿತಿ ನಿಯಂತ್ರಣಕ್ಕಾಗಿ ನಮ್ಮ ಅಧಿಕಾರಿಗಳ ತಂಡ ದಿನವಿಡೀ ಕಾರ್ಯನಿರ್ವಹಿಸುತ್ತಿದ್ದು, ಪರಿಹಾರ ಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ನಿರೀಕ್ಷೆಗೆ ಮೀರಿ ಮಳೆಯಾಗುತ್ತಿದ್ದು, ದಶಕಗಳಿಂದ ಬೆಂಗಳೂರಿನಲ್ಲಿನ ಮೂಲಸೌಕರ್ಯಗಳಲ್ಲಿರುವ ನ್ಯೂನ್ಯತೆಗಳನ್ನು ಸರಿಪಡಿಸಲು, ಅಭಿವೃದ್ಧಿಪಡಿಸಲು ಕಾರ್ಯೋನ್ಮುಖರಾಗಿದ್ದೇವೆ ಎಂದು ಹೇಳಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 2 ವರ್ಷಗಳಲ್ಲಿ ಬ್ಯಾಡ್ ಬೆಂಗಳೂರು ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಸಾಧನೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿಯಂತೂ ಸಂಪೂರ್ಣ ಕಡೆಗಣಿಸಿದೆ. ಇದರ ಪರಿಣಾಮವಾಗಿ ಮಳೆ ಬಂದಾಗಲೆಲ್ಲಾ ನಿತ್ಯ ನರಕದ ಪರಿಸ್ಥಿತಿ, ರಾಜಧಾನಿಯ ಗೌರವ ಕುಸಿಯುವಂತೆ ಮಾಡಿರುವುದು ದುರ್ದೈವದ ಸಂಗತಿ ಎಂದು ದೂರಿದ್ದರು.












Click it and Unblock the Notifications