Bengaluru: ಭಾರಿ ಮಳೆಗೆ ಕ್ರೋಮಾ ರೈಲ್ವೆ ಅಂಡರ್‌ಪಾಸ್ ಜಲಾವೃತ, ಸಿಲುಕಿದ್ದ ಕಾರು
ಬೆಂಗಳೂರು, ಸೆಪ್ಟಂಬರ್ 20: ಬೆಂಗಳೂರಿನಲ್ಲಿ ಕೆಲವೇ ನಿಮಿಷಗಳು ಮಳೆ ಬಂದರೂ ಸಾಕು ಎಲ್ಲೆಂದರಲ್ಲಿ ಸಂಚಾರ ತೊಂದರೆ, ಅವಘಡಗಳು ಸಂಭವಿಸಿಬಿಡುತ್ತವೆ. ಇದೀಗ ನಗರದಲ್ಲಿ ಎರಡು ದಿನದ ಹಿಂದೆ ಸುರಿದ ಮಳೆಗೆ ಕ್ರೋಮಾ ರಸ್ತೆಯ ರೈಲ್ವೆ ಕೆಳ ಸೇತುವೆಯಲ್ಲಿ ಸುಮಾರು ಏಳು ಅಡಿ ನೀರಿನಲ್ಲಿ ಸಿಲುಕಿದ ಘಟನೆ ನಡೆದಿದೆ.
ನಗರದಲ್ಲಿ ಸೋಮವಾರ ಸಂಜೆ ಸುರಿದಿದ್ದ ಭಾರೀ ಮಳೆಗೆ ಆಗ್ನೇಯ ಬೆಂಗಳೂರಿನ ಕ್ರೋಮಾ ರೈಲ್ವೆ ಅಂಡರ್‌ಪಾಸ್ ಸಂಪೂರ್ಣ ಜಲಾವೃತವಾಗಿತ್ತು. ಸುಮಾರು 6-7 ಅಡಿ ನೀರು ಅಂಡರ್ ಪಾಸ್‌ನಲ್ಲಿ ತುಂಬಿದ್ದರಿಂದ ಕಾರು ಮುಂದೆ ಚಲಿಸಲಾರದೇ ಸಿಲುಕಿಕೊಂಡಿತ್ತು. ಮಂಗಳವಾರ ಬೆಳಗ್ಗೆ ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆಯಲಾಗಿದೆ ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಳೆ ನಿಂತು 24 ಗಂಟೆಯ ಬಳಿಕ ಮಂಗಳವಾರ ಜಲಾವೃತವಾಗಿದ್ದ ಅಂಡರ್‌ಪಾಸ್‌ನಲ್ಲಿ ಮಳೆ ನೀರಿನ ಪ್ರಮಾಣ 5 ಅಡಿಗೆ ಇಳಿಕೆ ಆಯಿತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ. ಪಂಪ್‌ಸೆಟ್ ಬಳಸಿ ನೀರು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ವರದಿ ಆಗಿದೆ.
ಬೆಂಗಳೂರು ಹೊರ ವಲಯದ ಪಣತ್ತೂರು, ಬಳಗೆರೆ ಮತ್ತು ವರ್ತೂರು ಕಡೆಯಿಂದ ಆಗಮಿಸುವ ನಿವಾಸಿಗಳು ಕಾಡುಬೀಸನಹಳ್ಳಿಗೆ ಬಂದು ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸಲು ಈ ಕ್ರೋಮಾ ರಸ್ತೆಯನ್ನು (ರೈಲ್ವೆ ಅಂಡರ್‌ಪಾಸ್) ಬಳಸಿ ಓಡಾಡುತ್ತಾರೆ.

ಅಂಡರ್‌ಪಾಸ್ ನಿರ್ವಹಣೆಯಲ್ಲಿ ಬಿಬಿಎಂಪಿ ವಿಫಲ
ಸಾಮಾನ್ಯವಾಗಿ, ಆಟೋಗಳು, ಕಾರುಗಳು ಮತ್ತು ಬೈಕ್‌ಗಳ ಸಮನಾಗಿ ಚಲಿಸುವಷ್ಟು ವಿಶಾಲವಾದ ಈ ಕ್ರೋಮಾ ಅಂಡರ್‌ಪಾಸ್‌ಗೆ ಸಂಚಾರ ದಟ್ಟಣೆ ಕಡಿಮೆಗೆ ಬಳಕೆ ಆಗುತ್ತಿದೆ. ಮುಖ್ಯ ರಸ್ತೆಯ ವಾಹನ ದಟ್ಟಣೆಯನ್ನು ಇದು ಕಡಿಎ ಮಾಡಲಿದೆ. ಆದರೆ ಈ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಸರಾಗವಗಿ ಹರಿದು ಹೋಗುವಂತೆ ಮಾಡುವಲ್ಲಿ ಬಿಬಿಎಂಪಿ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿ ಭಾರಿ ಮಳೆ ಬಂದಾಗಲೆಲ್ಲ ಇಲ್ಲಿ ಪ್ರವಾಹ/ಜಲಾವೃತ ಸ್ಥಿತಿ ನಿರ್ಮಾಣವಾಗುತ್ತದೆ.
ಜಲಾವೃತ ಬಳಿಕ ಪಣತ್ತೂರು ಮತ್ತು ಕಾಡುಬೀಸನಹಳ್ಳಿ ಕಡೆಗೆ ಕ್ರೋಮಾ ರಸ್ತೆಗೆ ಪ್ರವೇಶಿಸುವ ಸ್ಥಳಗಳಲ್ಲಿ ಸಂಚಾರ ಪೊಲೀಸರು ಬ್ಯಾರಿಕೇಡ್ ಅಡ್ಡಲಾಗಿ ಹಾಕಿದ್ದರು. ಆದರೂ ಸಹಿತ ಮಂಗಳವಾರ ಕೆಲವು ಕಾರುಗಳು/ಬೈಕ್‌ಗಳು ಅಂಡರ್‌ಪಾಸ್ ಮೂಲಕವೇ ಹಾದು ಹೋಗುವ ಪ್ರಯತ್ನಿಸಿದರು. ಬಳಿಕ ಸರಾಗವಾಗಿ ಹೋಗಲಾರದೇ ಯುಟರ್ನ್ ತೆಗೆದುಕೊಂಡ ದೃಶ್ಯಗಳು ಕಂಡು ಬಂದವು.
ಪಣತ್ತೂರು ರಸ್ತೆಯಲ್ಲಿ 2ಕಿ.ಮೀ ವರೆಗೆ ವಾಹನ ದಟ್ಟಣೆ (Traffic) ಆಗಿದ್ದರಿಂದ ನಾನು ಸಹ ಇದೇ ಅಂಡರ್ ಪಾಸ್ ಮೂಲಕ ಹಾದು ಹೋಗಲು ಯತ್ನಿಸಿದೆ ಆದರೆ ಜಲಾವೃತವಾಗಿದ್ದನ್ನು ನೋಡಿ ಮುಖ್ಯ ರಸ್ತೆಗೆ ಮರಳಿದೆ. ಪ್ರತಿ ಭಾರಿ ಮಳೆ ಬಂದಾಗಲೆಲ್ಲ ಈ ರಸ್ತೆ 2-3 ದಿನಗಳ ಕಾಲ ಮುಚ್ಚಿರುತ್ತದೆ ಎಂದು ಭಾಗದಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರೊಬ್ಬರು ವಿವರಿಸಿದರು.












Click it and Unblock the Notifications