Bengaluru Pothole Incident: ರಸ್ತೆ ಗುಂಡಿಗೆ ಮತ್ತೊಂದು ಸಾವು, ಲಾರಿ ಹರಿದು ಸ್ಥಳದಲ್ಲೇ ಪ್ರಾಣಬಿಟ್ಟ ಯುವತಿ
ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಮೃತ್ಯುಕೂಪಗಳಂತೆ ಬಾಯ್ತೆರೆದುಕೊಂಡಿರುವ ರಸ್ತೆ ಗುಂಡಿಗಳಿಂದ ಹಲವರು ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ನಗರದ ಆವಲಹಳ್ಳಿ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಬ್ಬರು ರಸ್ತೆಗುಂಡಿಗೆ ಬ*ಲಿಯಾಗಿದ್ದಾರೆ. ಹೌದು ಬೆಂಗಳೂರಿನ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ಮತ್ತೊಂದು ಘಟನೆ ನಡೆದಿದ್ದು, ಯುವತಿಯೊಬ್ಬರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದಿದ್ದಾರೆ. ಈ ವೇಳೆ ಯುವತಿಯ ತಲೆ ಮೇಲೆ ಲಾರಿ ಹರಿದು ಭೀಕರವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ಯುವತಿಯನ್ನು 26 ವರ್ಷದ ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಯುವತಿ ತನ್ನ ಸಹೋದರ ಜೊತೆ ಬೈಕ್‍ನಲ್ಲಿ ಎಪಿಎಂಸಿ ಹುಸ್ಕೂರು ರಸ್ತೆಯಿಂದ ಮಾದಾವರಕ್ಕೆ ತೆರಳುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಹೋಗಿದ್ದ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡಿದ್ದರು. ಆಗ ಯುವತಿ ನೆಲಕ್ಕೆ ಬಿದ್ದು, ಲಾರಿಯ ಚಕ್ರಕ್ಕೆ ಸಿಲುಕಿದ್ದರು. ಇದರಿಂದ ಅವರ ತಲೆಗೆ ತೀವ್ರವಾಗಿ ಪೆಟ್ಟಾಗಿ ಸ್ಥಳದಲ್ಲೇ ಅವರು ಪ್ರಾಣಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ದುರ್ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಿಯಾಂಕಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಈ ರಸ್ತೆಗುಂಡಿಗಳನ್ನು ಮುಚ್ಚಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂದು ಬೆಳಿಗ್ಗೆ 10.55 ರ ಸುಮಾರಿಗೆ ಆಕೆಯ ಸಹೋದರ ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಆಕೆಯನ್ನು ಡ್ರಾಪ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದಾಸನಪುರದ ಎಪಿಎಂಸಿ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದ ಟ್ರಕ್‌ಗೆ ಬೈಕ್ ತಗುಲಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಆಗ ಪ್ರಿಯಾಂಕಾ ಮೇಲೆ ಟ್ರಕ್‌ನ ಚಕ್ರ ಹರಿದು ಸ್ಥಳದಲ್ಲೇ ಸಾವನ್ನಪ್ಪಿದರೆ, ಸಹೋದರ ಗಂಭೀರವಾಗಿ ಗಾಯಗೊಂಡರು. ಪ್ರಿಯಾಂಕ ದಾಸನಪುರದ ಆಲೂರು ಕ್ರಿಕೆಟ್ ಕ್ರೀಡಾಂಗಣದ ಬಳಿಯ ಹುಸ್ಕೂರು ಮುಖ್ಯರಸ್ತೆಯಲ್ಲಿರುವ ಆಲೂರು ಬಿಡಿಎ ಹಂತ 2ರ ನಿವಾಸಿ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಇನ್ನೆಷ್ಟು ಅಮಾಯಕರು ಬಲಿಯಾಗಬೇಕು?
ಈ ಘಟನೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಮೃತ್ಯುಕೂಪಗಳಾಗಿರುವ ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮತ್ತೊಂದು ಜೀವ ಬಲಿಯಾಗಿದೆ. ರಸ್ತೆಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಲಾರಿ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಇಂದು ಬೆಳಿಗ್ಗೆ ಮಾದನಾಯಕನಹಳ್ಳಿ ಹುಸ್ಕೂರು ಎಪಿಎಂಸಿ ಬಳಿ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ, ಬೇವಾವಾಬ್ದಾರಿತನ, ಅಸಾಮರ್ಥ್ಯಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು ಸ್ವಾಮಿ? ಸಿಟಿ ರೌಂಡ್ಸ್ ಹೆಸರಿನಲ್ಲಿ ಟಿ-ಶರ್ಟು, ಕೂಲಿಂಗ್ ಗ್ಲಾಸು ಹಾಕಿಕೊಂಡು ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಳಲ್ಲಿ ಪೋಟೋ ಶೂಟ್, ರೀಲ್ಸ್ ಮಾಡಿಬಿಟ್ಟರೆ ಬೆಂಗಳೂರಿನ ರಸ್ತೆಗುಂಡಿ ಸಮಸ್ಯೆ ಸರಿಹೋಗುತ್ತಾ ಡಿ.ಕೆ.ಶಿವಕುಮಾರ್ ಅವರೇ? ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಬೆಂಗಳೂರನ್ನು ಹಾಳು ಮಾಡಿಬಿಟ್ಟರಲ್ಲ ಸ್ವಾಮಿ. ನಾಚಿಕೆಯಾಗಬೇಕು ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಹಿಡಿಶಾಪ ಹಾಕಿದ್ದಾರೆ.












Click it and Unblock the Notifications