• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ ಐಪಿಎಸ್ ವರ್ಗಾವಣೆ ದಂಧೆ: ಆಡಿಯೋ ಬಿಚ್ಚಿಟ್ಟ ಕರಾಳ ಅಧ್ಯಾಯ

|

ಬೆಂಗಳೂರು, ಆಗಸ್ಟ್ 09: ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿದ್ದು, ಐಪಿಎಸ್ ಅಧಿಕಾರಿಗಳ ವರ್ಗಾವಣೆಯ ರಾಷ್ಟ್ರಮಟ್ಟದ ದಂಧೆಯ ಕರಾಳ ಅಧ್ಯಾಯದ ಮೇಲೆ ಈ ಪ್ರಕರಣ ಬೆಳಕು ಚೆಲ್ಲಿದೆ.

ಬಹಿರಂಗಗೊಂಡಿರುವ ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ಹಾಲಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಅವರದ್ದು ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಆಡಿಯೋ ಒಳಗೊಂಡಿರುವ ಸಂಭಾಷಣೆ ವರ್ಗಾವಣೆ ಎಂಬುದು ಎಷ್ಟು ದೊಡ್ಡ ಮಟ್ಟದ ದಂಧೆ. ಅದರಲ್ಲಿಯೂ ಐಪಿಎಸ್, ಐಎಎಸ್ ಅಧಿಕಾರಿಗಳು 'ಲಾಭದಾಯಕ ಹುದ್ದೆ'ಗೆ ಹೋಗಲು ಎಷ್ಟೆಲ್ಲಾ ಪ್ರಭಾವ ಬಳಸುತ್ತಾರೆ ಎಂಬುದನ್ನು ಸರಳವಾಗಿ ಜನರ ಮುಂದಿಟ್ಟಿದೆ.

ಬೆಂಗಳೂರು ಪೊಲೀಸ್ ಕಮೀಷನರ್ ಆಡಿಯೋ ವೈರಲ್: ತನಿಖೆಗೆ ಆದೇಶ

ಭಾಸ್ಕರ್ ರಾವ್ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರ ನಡುವೆ ನಡೆದಿರುವ ಸಂಭಾಷಣೆಯ ಎರಡು ಆಡಿಯೋ ತುಣುಕುಗಳು ಬಹಿರಂಗಗೊಂಡಿದ್ದು, ಆಡಿಯೋ ತುಣುಕಿನ ಒಳಗಿನ ಮಾಹಿತಿ ಗಾಬರಿ ಹುಟ್ಟಿಸುವಂತಿದೆ. ಅದರ ಜೊತೆಗೆ ದೊಡ್ಡ ಹುದ್ದೆಯ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವೈಯಕ್ತಿಕ ಲಾಭಕ್ಕೆ ಬಳಸುತ್ತಾರೆ ಎಂಬುದು ಸಹ ಈ ಪ್ರಕರಣದಿಂದ ತಿಳಿದುಬರುತ್ತಿದೆ.

ಆಡಿಯೋ ಬಹಿರಂಗಗೊಳಿಸಿರುವುದು ಸಹ ಭಾಸ್ಕರ್ ರಾವ್ ಅವರ ವಿರೋಧಿ ಪಾಳಯದ ಮತ್ತೊಬ್ಬ ಐಪಿಎಸ್ ಅಧಿಕಾರಿಯೇ ಎಂಬ ಶಂಕೆ ಇದ್ದು, ಪೊಲೀಸರಿಗೆ ಇರುವ ವಿಶೇಷ ಅಧಿಕಾರವನ್ನು, ತಂತ್ರಜ್ಞಾನವನ್ನು ಬಳಸಿಕೊಂಡು ಭಾಸ್ಕರ್ ರಾವ್ ಅವರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಅನುಮಾನ ಇದೆ. ಈ ಬಗ್ಗೆ ಈಗಾಗಲೇ ಕಮೀಷನರ್ ಭಾಸ್ಕರ್ ರಾವ್ ತನಿಖೆಗೆ ಆದೇಶ ನೀಡಿದ್ದಾರೆ.

ಆಡಿಯೋದಲ್ಲಿನ ಸಂಭಾಷಣೆಯನ್ನು ಯಥಾವತ್ತು ಬರಹದ ರೂಪದಲ್ಲಿ ಇಲ್ಲಿ ನೀಡಲಾಗಿದೆ.

ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಪ್ರೊಫೈಲ್

ಮೊದಲ ಆಡಿಯೋ

ಭಾಸ್ಕರ್ ರಾವ್ - ಮಾರ್ನಿಂಗ್ ಫರಾಜ್, ನಾನು ಚೇರ್ ಮೇಲೆ ಕೂತ್ಕೊಂಡೇ ಮಲಗಿಬಿಟ್ಟಿದೆ.

ಫರಾಜ್ - ಗುಡ್ ಮಾರ್ನಿಂಗ್ ಸರ್, ನೋ ಪ್ರಾಬ್ಲಂ, ನಾನು AICCಯಲ್ಲಿ ಇದ್ದೀನಿ. ತುಂಬಾ ದಿನದ ನಂತ್ರ ಮೇಡಂ ಬಂದಿದ್ರು , ನಾನು ಇಲ್ಲಿಂದ ಹೊರಡುತ್ತಿದ್ದೇನೆ. ಹತ್ತು ನಿಮಿಷದಲ್ಲಿ ಫೋನ್ ಮಾಡ್ತೀನಿ.

ಭಾಸ್ಕರ್ ರಾವ್ - ನಾನು ಡಿಜಿ ಜೊತೆ ಮೀಟಿಂಗ್‌ಗೆ ಹೋಗ್ತಾ ಇದ್ದೀನಿ, 12:30ಕ್ಕೆ ಫೋನ್ ಮಾಡ್ಲಾ?

ಫರಾಜ್ - ಯೆಸ್ ಸರ್, ನಾನು ಹತ್ತು ನಿಮಿಷದಲ್ಲಿ ಮುಗಿಸ್ತೀನಿ, ನೀವು ಕಾಲ್ ಮಾಡಿ, ಮೇಡಂ ತುಂಬಾ ದಿನದ ನಂತ್ರ AICCಗೆ ಮೀಟಿಂಗ್ ಬಂದಿದ್ರು. ಆಫೀಸ್ ಬೇರರ್ಸ್ ಮೀಟಿಂಗ್ ತಗೊಂಡಿದ್ರು.

ಭಾಸ್ಕರ್ ರಾವ್ - ಸೀನಿಯರ್ ಮೇಡಂ ಹಾ?.

ಫರಾಜ್ - ಹು, ಸೀನಿಯರ್ ಮೇಡಂ, ನಾವು ಇಲ್ಲಿ 9 ಗಂಟೆಗೆ ಬಂದ್ವಿ

ಭಾಸ್ಕರ್ ರಾವ್ - ನಿನ್ನೆ ರಾತ್ರಿ ನಿಮಗೆ ಲೇಟ್ ಆಗಿತ್ತು ಅಲ್ವಾ?

ಫರಾಜ್ - ಹೌದು ಸರ್ ಪಾಂಡಿಚೇರಿ ಸಿಎಂ ಬಂದಿದ್ರು. ಎಲ್ಲವೂ ಪಾಸಿಟಿವ್ ಆಯ್ತು. ನಾನು ಹೇಳ್ತೀನಿ.

ಭಾಸ್ಕರ್ ರಾವ್ - ಸೋ 12:30ಕ್ಕೆ ನಾನು ಫೋನ್ ಮಾಡ್ತೀನಿ. ಇದು ಪಾಸಿಟಿವ್​ ಮಾಡ್ಲೇ ಬೇಕು. ಇದನ್ನ ನಮ್ಮ ಕೈಗೆ ತಗೊಳ್ಲೇಬೇಕು. ಎಲ್ಲ ಅವರ ಕಡೆಗೆ ಹೋಗ್ತಾ ಇದೆ.

ಫರಾಜ್ - ಒನ್ ಸೆಕೆಂಡ್ ಸಾರ್, ನಾನು ಮೊದಲು ಒಳಗಡೆ ಹೋದೆ. ಗುಜರಾತ್ ಸ್ಪೋಕ್ ಪರ್ಸನ್ ಕೂತಿದ್ರು. ನಾನು ವಿವರವಾಗಿ ಹೇಳಿದೆ. ಎರಡನೇ ಬಾರಿ ಮತ್ತೆ ವಿವರವಾಗಿ ಹೇಳಿದೆ. ಡಾ. ವೇಣುಗೋಪಾಲ್ ನಿಮ್ಮನ್ನ ಬೆಂಗಳೂರು ಸೌತ್ ಅಭ್ಯರ್ಥಿಯಾಗಿ ತೀರ್ಮಾನ ಮಾಡಿದ್ರು. ಅಂಡ್ ನೀವು ಮೂಲತಃ ಒಬ್ಬ ಕಾಂಗ್ರೆಸ್ ಮ್ಯಾನ್​. ನೀವು ರಿಸೈನ್ ಮಾಡಿ ಪಾರ್ಟಿಗೆ ಸೇರ್ತಿದ್ದೀರಾ ಅಂತ ಹೇಳಿದೆ. ನಾನೇ ಅಡ್ವೈಸ್ ಮಾಡಿದೆ. ಇದು ಸರಿಯಾದ ಟೈಂ ಅಲ್ಲ ಒಂದು ವರ್ಷ ಹೋಗಲಿ ಅಂದೆ. ಅವರು ಥಮ್ಸ್‌ಅಪ್(OK) ತೋರಿಸಿ ಹೇಳಿದ್ರು. ಬೇಡ ನಾನು ಇವರನ್ನೇ ಬೆಂಗಳೂರು ಕಮೀಷನರ್ ಮಾಡ್ತೀನಿ ಅಂದ್ರು.

ಭಾಸ್ಕರ್ ರಾವ್ - ಓ ಗ್ರೇಟ್ ಗ್ರೇಟ್

ಫರಾಜ್ - ಪಾಂಡಿಚೇರಿ ಸಿಎಂ ನಾರಾಯಣಸ್ವಾಮಿ ಕಾಯ್ತಾ ಇದ್ರು., ನಾನು ಹೊರಟೆ. ಇಷ್ಟು ಮಾತಾಗಿದ್ದು.

ಭಾಸ್ಕರ್ ರಾವ್ - ಇನ್ನೇನಾದ್ರು ಹೇಳಿದ್ರಾ?

ಫರಾಜ್ - ಅಹ್ಮದ್ ಪಟೇಲ್ ಇಷ್ಟು ಹೇಳೋದೆ ಒಂದು ದೊಡ್ಡ ವಿಷ್ಯ.

ಭಾಸ್ಕರ್ ರಾವ್ - ದಟ್ ಈಸ್ ಗ್ರೇಟ್ (THAT IS GREAT)

ಫರಾಜ್ - ಇವತ್ತು ಮತ್ತೆ ಹೋಗ್ತೀನಿ. ಇವತ್ತು ಸಂಪೂರ್ಣ ವಿವರವಾಗಿ ಮಾತಾಡ್ತೀನಿ. ಅವರು ಥಮ್ಸ್‌ ಅಪ್(OK) ತೋರಿಸಿದ್ದು ನಿಮ್ಮನ್ನ ನಾಲ್ಕು ತಿಂಗಳ ನಂತ್ರ 100% ಕಮೀಷನರ್ ಮಾಡ್ತೀನಿ ಅಂತಾನೋ ಅಥವಾ ಸಿಎಂಗೆ ಹೇಳ್ತೀನಿ ನಿಮ್ಮನ್ನೇ ಬೆಂಗಳೂರು ಕಮೀಷನರ್ ಮಾಡೋಕೆ ಅಂತಾನೋ.

ಭಾಸ್ಕರ್ ರಾವ್ - ನೋ...ನೋ ನೋ... 4 ತಿಂಗಳು ಟೈಮ್ ತಗೋಬೇಡ. 4ತಿಂಗಳು ಆದ ಮೇಲೆ ಯಾರನ್ನು ಒಂದು ವರ್ಷದ ತನಕ ತೆಗೆಯೋಕೆ ಆಗಲ್ಲ. ದಟ್ ಫೆಲೋ ಕೋರ್ಟ್‌ಗೆ ಹೋಗ್ತಾನೆ. ಗೌರ್ನಮೆಂಟ್ ಆಫ್ ಇಂಡಿಯಾ ರೆಗ್ಯುಲೇಷನ್ ಹೇಳುತ್ತೆ ಎಕ್ಸಿಕ್ಯೂಟಿವ್​ ಪೋಸ್ಟಿಂಗ್‌ಆದ ನಂತರ ಮುಂದೆ ಒಂದು ವರ್ಷ ಯಾರನ್ನು ತೆಗೆಯೋಕೆ ಆಗಲ್ಲ. ಸೋ ಆ ಆರ್ಗ್ಯೂಮೆಂಟ್ ತಗೋಳ್ಬೇಡ. ಫಸ್ಟ್ ಆಫ್ ಆಲ್ ಹಿ ಈಸ್ ಎ ವೆರಿ ವೆರಿ ಜೂನಿಯರ್ ಫೆಲೋ, ನಾಲ್ಕು ವರ್ಷ ಜ್ಯೂನಿಯರ್.

ಜ್ಯೂನಿಯರ್​ ಕೆಡಾರ್ ಇಶ್ಯೂ ಆಗುತ್ತೆ. ತುಂಬಾ ಅಸಮಾಧಾನ ಆಗುತ್ತೆ ಅಂಡ್ ಸರ್ಕಾರಕ್ಕೆ ಮುಖಭಂಗ ಆಗುತ್ತೆ. ಇವನಿಗೆ ರೆಪ್ಯುಟೇಷನ್ ಇಲ್ಲ. ಇವನ ವಿರುದ್ಧ ಇದೇ ಸಿಎಂ (ಹೆಚ್ ಡಿ ಕುಮಾರಸ್ವಾಮಿ) ಲಾಟರಿ ದುಡ್ಡು ತಿಂದಿದ್ದಾನೆ ಅಂತ ಆರೋಪ ಮಾಡಿದ್ರು. ಸಿಬಿಐ ವಿಚಾರಣೆ ನಡಿತಾಯಿದೆ. ಇದು ಮೈತ್ರಿ ಸರ್ಕಾರಕ್ಕೆ ಮುಜುಗರ ಆಗುತ್ತೆ.

ಫರಾಜ್ - ಸಿಬಿಐ ವಿಚಾರಣೆ ಇನ್ನು ಇದೆಯಾ?

ಭಾಸ್ಕರ್ ರಾವ್ - ಹಾ.. ಸಿಬಿಐ ಕೇಸ್ ಕ್ಲೋಸ್ ಮಾಡಿಲ್ಲ, ಅವರು ಅಲೋಕ್ ಕುಮಾರ್ ಅಂತ ಹೇಳಿದ್ರೆ ಹೇಳು ಸಿಬಿಐ ವಿಚಾರಣೆ ಇದೆ ಅಂತ. ಆಮೇಲೆ ಎಲ್ಲಾ ಪೋಸ್ಟಿಂಗ್ ಅವರದ್ದೇ (ಜೆಡಿಎಸ್‌ನವರದ್ದು). ಕಾಂಗ್ರೆಸ್‌ನಿಂದ ಒಬ್ಬ ವ್ಯಕ್ತಿನ ತೋರಿಸು. ನಿಮ್ಮ ಪಾರ್ಟಿಯಿಂದ ಒಂದು ವ್ಯಕ್ತಿ ಯಾರು ಅಂತ ತೋರಿಸು. ನಿಮ್ಮ ಪಾರ್ಟಿ ಮೆಜಾರಿಟಿಯಲ್ಲಿ ಇದೆ BOSS.

ಫರಾಜ್ - ಎಲ್ಲಾ ಪೋಸ್ಟಿಂಗ್‌ಗಳಲ್ಲೂ HD.ರೇವಣ್ಣ ಹಸ್ತಕ್ಷೇಪ ಮಾಡ್ತಿದ್ದಾರೆ.

ಭಾಸ್ಕರ್ ರಾವ್ - ಅದೃಷ್ಟವಶಾತ್ ಈ ವಿಷ್ಯದಲ್ಲಿ ರೇವಣ್ಣ ಹಾಗೂ ದೊಡ್ಡವರ (ದೇವೇಗೌಡ?) ಸಪೋರ್ಟ್ ನನಗಿದೆ. ಇವರು (ಸಿಎಂ) ಮಾತ್ರ ಅವನ (ಅಲೋಕ್ ಕುಮಾರ್) ಹಿಂದಿದ್ದಾರೆ. ಎಪಿ (ಅಹ್ಮದ್ ಪಟೇಲ್ ) ಸಾಬ್ ಹೇಳಿದ್ರೆ 100% ಇದು ಆಗುತ್ತೆ. ಈ ಸಲ ಇದು ಬೇಕೇ ಬೇಕು. ಎಪಿ ಸಾಬ್ ಪ್ರೆಷರ್ ಹಾಕಿದ್ರೆ ಪಕ್ಕಾ ಅವರು ಮಾಡ್ತಾರೆ. ಹೆದರಿಕೊಂಡಾದ್ರೂ ಮಾಡ್ತಾರೆ.

ಫರಾಜ್ - ಇಲ್ಲ ಸಾರ್ ನಿನ್ನೆ ಕುಮಾರಸ್ವಾಮಿ ಹೇಳಿದ್ರು, ನೀವು ಒತ್ತಾಯ ಮಾಡಿದ್ರೆ ನಾನು ಹಾಕ್ತೀನಿ ಅಂತ.

ಎರಡನೇ ಆಡಿಯೋ:

ಫರಾಜ್ - ಸರ್, ಗುಡ್ ಈವ್ನಿಂಗ್

ಭಾಸ್ಕರ್ ರಾವ್ - ವೆರಿ ಗುಡ್ ಈವ್ನಿಂಗ್

ಫರಾಜ್ - ಹಲೋ

ಭಾಸ್ಕರ್ ರಾವ್ - ಯಾ ಪ್ಲೀಸ್ ಪ್ಲೀಸ್...

ಫರಾಜ್ - ನಾನು ದೆಹಲಿ ತಲುಪಿದ್ದೇನೆ

ಭಾಸ್ಕರ್ ರಾವ್ - ಹಾ..ಹಾ..ಹಾ...

ಫರಾಜ್ - ವೇಣುಗೋಪಾಲ್ ಸಾರ್ ಬೆಂಗಳೂರಿನಲ್ಲಿಯೇ ಇದ್ದಾರೆ. ನಾನು ಅಹ್ಮದ್ ಸಾಬ್ (ಅಹಮದ್ ಪಟೇಲ್) ಅವರನ್ನು ಭೇಟಿ ಮಾಡ್ತೀನಿ, ಆ ಮೇಲೆ ಹರಿಯಾಣ ಸಿಎಂ ಭೂಪೇಂದ್ರ ಕೂಡ ಬರ್ತಾರೆ. ಕೆಲಸ ಆದ್ಮೇಲೆ ಸಂಜೆ 4 ಗಂಟೆಗೆ ಮೀಟ್ ಮಾಡ್ತೀನಿ, ಮಾತನಾಡುತ್ತೇನೆ.

ಭಾಸ್ಕರ್ ರಾವ್ - ಎಕ್ಸಲೆಂಟ್ ಎಕ್ಸಲೆಂಟ್.

ಫರಾಜ್ - ಆಜಾದ್ ಸಾಬ್ (ಗುಲಾಂನಬಿ ಆಜಾದ್) ಒಂದೆರಡು ದಿನಗಳಲ್ಲಿ ಬೆಂಗಳೂರಲ್ಲಿ ಇರ್ತಾರೆ. ಆರೋಗ್ಯ ಹದಗೆಟ್ಟಿದೆ ಅಂತ ಹೇಳ್ತಿದ್ರು.

ಭಾಸ್ಕರ್ ರಾವ್ - ಸಿಎಂ ನಾಳೆ ದೆಹಲಿಗೆ ಹೋಗ್ತಿದ್ದಾರೆ.

ಫರಾಜ್ - ನಾಳೆ ರಾಹುಲ್ ಅವರನ್ನ ಸಿಎಂ ಭೇಟಿ ಆಗ್ತಾರೆ ಸರ್. ಅವಕಾಶ ಇದೆ, ದುಡ್ಡು ಕೊಟ್ಟು ಬರ್ತಾರೆ, ಯಾವುದು ಬೆಸ್ಟ್ ಅಂತ ನೋಡಿ ಮಾಡ್ತಾರೆ.

ಭಾಸ್ಕರ್ ರಾವ್ - ಅವರು ಎಪಿ (ಅಹಮದ್ ಪಟೇಲ್)ಸಾಹೇಬ್ರನ್ನ ಭೇಟಿ ಆಗ್ತಾರಾ?

ಫರಾಜ್ - ಗೊತ್ತಿಲ್ಲ ಸರ್. ಯಡಿಯೂರಪ್ಪ ಸಿಗ್ತಾರಾ ಇಲ್ವಾ ಗೊತ್ತಿಲ್ಲ. ಆಜಾದ್ ಸಾಬ್ (ಗುಲಾಂನಬಿ ಆಜಾದ್) ಸರ್ ಇನ್ನೆರಡು ದಿನಗಳಲ್ಲಿ ಬೆಂಗಳೂರಲ್ಲಿ ಇರ್ತಾರೆ. ಸಂಪುಟ ವಿಸ್ತರಣೆ ಆಗ್ತಿದೆ, ಅವರ ಆರೋಗ್ಯವೂ ಹದಗೆಟ್ಟಿದೆ. ಅಷ್ಟರೊಳಗೆ ನಾನು ಆಜಾದ್ ಸಾಬ್ (ಗುಲಾಂನಬಿ ಆಜಾದ್) ಕರೆಸುತ್ತೇನೆ. ನಂತರ ನಾನು ನೇರವಾಗಿ ಕರೆದುಕೊಂಡು ಬರುತ್ತೇನೆ.

ಭಾಸ್ಕರ್ ರಾವ್ - ಬ್ರಿಲಿಯಂಟ್ ಬ್ರಿಲಿಯಂಟ್ ಬ್ರಿಲಿಯಂಟ್. ಥ್ಯಾಂಕ್ ಯು.

ಮೂರನೇ ಆಡಿಯೋ:

ಫರಾಜ್ - Sir Good Evening

ಭಾಸ್ಕರ್ ರಾವ್ - ನಾನು ನಿಮ್ಮ ಕಾಲ್ ಮಿಸ್ ಮಾಡ್ಕೊಂಡೆ

ಫರಾಜ್ - ನೋ ಪ್ರಾಬ್ಲಂ, ನೋ ಪ್ರಾಬ್ಲಂ ಸರ್

ಫರಾಜ್ - ಎಲ್ಲ ಚೆನ್ನಾಗಿ ನಡೀತಿದೆ. ನಿಮ್ಮ ದಿನ ಹೇಗಿತ್ತು ಸಾರ್

ಭಾಸ್ಕರ್ ರಾವ್ - ಓಕೆ ಓಕೆ

ಫರಾಜ್ - ನಾನು ಸರ್ ಜೊತೆ ಮಾತನಾಡಿದೆ, ಎಲ್ಲಾ ಸಂಪೂರ್ಣವಾಗಿ ವಿವರಿಸಿದ್ದೇನೆ. ವೇಣು ಗೋಪಾಲ್ ನಿಮ್ಮನ್ನ ಕಂಟೆಸ್ಟ್ ಮಾಡೋಕೆ ಹೇಳಿರೋದು. ನೀವು ಸೇವಾದಳ್ ಸೇರೋ ಪ್ಲ್ಯಾನ್, ಕೆಲಸಕ್ಕೆ ರಾಜೀನಾಮೆ ನೀಡಿ ಪಾರ್ಟಿ ಒಳಗೆ ಬರೋ ಚಿಂತನೆ ಬಗ್ಗೆ ಹೇಳಿದೆ. ನಾನು ಅಡ್ವೈಸ್ ಮಾಡಿದೆ ನಿಮಗೆ ಇನ್ನು ತುಂಬಾ ಸರ್ವೀಸ್ ಇದೆ ಅಂತ. ಎಲ್ಲವನ್ನೂ ಅವರಿಗೆ ಹೇಳಿದ್ದೇನೆ. ಮುಂದಿನ ವಾರಕ್ಕೆ ಪ್ರಿಯಾಂಕ ಜೀ (ಪ್ರಿಯಾಂಕಾ ಗಾಂಧಿ) ಭೇಟಿಗೂ ಟೈಂ ತೆಗೆದುಕೊಂಡಿದ್ದೀನಿ..

ಭಾಸ್ಕರ್ ರಾವ್ - ಓ ಎಕ್ಸಲೆಂಟ್, ಎಕ್ಸಲೆಂಟ್.

ಫರಾಜ್ - ಅವರ ಮೂಡ್ ಚೆನ್ನಾಗಿತ್ತು. ಕುಮಾರಸ್ವಾಮಿ ಬರ್ತಿದ್ದಾರೆ, ನಾಳೆ ರಾಹುಲ್ ಗಾಂಧಿ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಬಹುದು.. ಗೊತ್ತಿಲ್ಲ. ನಾನು ಅವರಿಗೆ ಹೇಳಿದೆ ಸರ್ಕಾರ ಬಿದ್ರೂನೂ ಕಮೀಷನರ್ ಒಂದು ವರ್ಷ ನಮ್ಮವರೇ ಇರ್ತಾರೆ ಅಂತ ಹೇಳಿದ್ದೇನೆ. ಅವರಿಗೆ ವಿಷಯ ಏನು ಅಂತ ಗೊತ್ತು. ಅಲ್ಲಿ ವೇಣುಗೋಪಾಲ್ ಇದ್ದಾರೆ ನೀನು ಯಾಕೆ ಬೆಂಗಳೂರಿಂದ ವಾಪಸ್ ಬಂದೆ ಅಂತ ಅವರು ನನ್ನನ್ನ ಕೇಳಿದ್ರು.. ನಾನು ಸುಳ್ಳು ಹೇಳಬೇಕಾಯ್ತು ನನಗೆ ಸ್ವಲ್ಪ ಕೆಲಸ ಇತ್ತು. ನಾಳೆ ವಾಪಸ್ ಹೋಗ್ತೀನಿ ಅಂತ. ನಾನು ಹೇಳಿದೆ ನೀವು ಒಂದು ಸಲ ಕುಮಾರಸ್ವಾಮಿಯವರಿಗೆ ಹೇಳಿ, ನಿಮ್ಮ ತಂದೆಯವರ ಜೊತೆ ಭಾಸ್ಕರ್ ರಾವ್‌ಗೆ ಒಳ್ಳೆ ಬಾಂಧವ್ಯ ಇದೆ. ತಂದೆಯವರು ಸುಮಾರು ಸಲ ಹೇಳಿದ್ದಾರೆ ಆಯ್ತು ಮಾಡಿಬಿಡೋಣ ಅಂತ. ಸಾರ್ ನೀವು ಹೇಳಿದ್ರೆ ಅವರು ಒಪ್ಪಿಕೊಳ್ತಾರೆ, ಇಲ್ಲ ಅಂತ ಹೇಳಲ್ಲ. ಸರಿ ನಾನು ಹೇಳ್ತೀನಿ ಇದು ಒಳ್ಳೆಯ ಸಮಯ ಅಲ್ಲ. ಮೂರು ನಾಲ್ಕು ದಿನ ಆಗ್ಲಿ, ಮೂರು ನಾಲ್ಕು ದಿನ ಅಂದ್ರೆ ಎಂಟು ದಿನ ಆಗೋಗುತ್ತೆ. ಅಷ್ಟರಲ್ಲಿ ಕುಮಾರಸ್ವಾಮಿ ಯಾರಿಗಾದ್ರೂ ಕಮಿಟ್ ಆದ್ರೆ ಪ್ರಾಬ್ಲಂ ಆಗೋಗುತ್ತೆ. ಸೋ ನಾನು ಹೇಳ್ದೆ ಇವಾಗ ಕಮಿಷನರ್ ಚೇಂಜ್ ಮಾಡ್ತಾ ಇದ್ದಾರೆ ಅಂತ.

ಭಾಸ್ಕರ್ ರಾವ್ - ಓಹೋ ಅಚ್ಚ ಅಚ್ಚ ಹಾ....

ಫರಾಜ್ - ಅವಾಗ ಅವರು ಹೇಳಿದ್ರು. ಒಂದು ಕೆಲಸ ಮಾಡಿ ನನ್ನ ಹೆಸರು ಹೇಳಿ (ಅಹಮದ್ ಪಟೇಲ್) ವೇಣು ಗೋಪಾಲ್‌ಗೆ ಹೇಳ್ಬಿಡಿ ಕುಮಾರಸ್ವಾಮಿಗೆ ಈಗ್ಲೆ ಕಮಿಷನರ್ ಚೇಂಜ್ ಮಾಡಬೇಡಿ ಅಂತ.. ಅವರು ಹೇಳಿದ ಮೇಲೆ ವೇಣುಗೋಪಾಲ್ ಸಾಬ್‌ಗೆ ನಾನು ಸುಳ್ಳಂತೂ ಹೇಳೋಕೆ ಆಗಲ್ಲ. ಹಾಗಾಗಿ ನಾನು ವೇಣುಗೋಪಾಲ್ ಅವರಿಗೆ ಅಹಮದ್ ಪಟೇಲ್ ಅವರು ಹೇಳಿದ್ದಾರೆ ಸದ್ಯಕ್ಕೆ ಕಮಿಷನರ್ ಚೇಂಜ್ ಮಾಡೋದು ಬೇಡ ಅಂತ ಕುಮಾರಸ್ವಾಮಿಗೆ ಹೇಳಬೇಕಂತೆ ಅಂತ ನಾನು ತುಂಬಾ ನಂಬಿಕೆ ಹಾಗೂ ಪ್ರಾಮಾಣಿಕತೆಯಿಂದ ಹೇಳಿದ್ದೇನೆ.

ಭಾಸ್ಕರ್ ರಾವ್ - ಹೋ ಹಾಗಾದ್ರೆ ಬಹಳ ಜಾಸ್ತೀನೆ ಮಾತನಾಡಿದ್ದೀರಾ..

ಫರಾಜ್ - ಹೌದು,,ಹೌದು ತುಂಬಾ ಮಾತನಾಡಿದ್ವಿ. ಒಟ್ಟಿಗೆ ನಾವು ರೋಜಾ ಬ್ರೇಕ್ ಮಾಡ್ತಾ ಇದ್ವಿ (ಮುಸ್ಲಿಂ ರಜಾನ್ ಉಪವಾಸ) ಆಗ ನಾನು ಇದನ್ನ ಹೇಳಿದೆ. ಇದು ಬಹಳ ದೊಡ್ಡ ವಿಷಯ. ಅವರು ಹೇಳಿದ್ರು ನಾಲ್ಕೈದು ದಿನ ಮಾತನಾಡೋದು ಸರಿ ಇರಲ್ಲ. ಬೇರೆ ವಿಷಯಗಳ ಬಗ್ಗೆ ಚರ್ಚೆಯಾಗ್ತಿರೋವಾಗ (ಸಂಪುಟ ವಿಸ್ತರಣೆ) ನಾಲ್ಕೈದು ದಿನ ಬಿಟ್ಟುಕೊಂಡು ಮಾತನಾಡ್ತೀನಿ. ಅವಾಗ ನಾನು ಹೇಳ್ಬಿಟ್ಟೆ ನಾಲ್ಕೈದು ದಿನದಲ್ಲಿ ಯಾರನಾದ್ರೂ ಸೆಲೆಕ್ಟ್ ಮಾಡಿಬಿಡ್ತಾರೆ. ಕಮಿಟ್ ಆಗ್ಬಿಡ್ತಾರೆ. ಭಾಸ್ಕರ್ ರಾವ್ - ನಾಲ್ಕೈದು ದಿನ ಅಂದ್ರೆ ಎಂಟು ದಿನ.

ಫರಾಜ್ - ವೇಣುಗೋಪಾಲ್‌ಗೆ ಹೇಳಿಬಿಡಿ (ಕಮಿಷನರ್ ಚೇಂಜ್ ಬೇಡಾಂತ) ಆಗ ಅವರು ಕುಮಾರಸ್ವಾಮಿಗೆ ಹೇಳ್ತಾರೆ ಅಂತ ಹೇಳಿದ್ರು.

ಭಾಸ್ಕರ್ ರಾವ್ - ಅಚ್ಚ ಅಚ್ಚ, ವೆರಿ ಗುಡ್, ದಟ್ಸ್‌ ವೆರಿಗುಡ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru police commissioner's phone tap disclosed dirty face of IPS officers transfer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more