ಬೆಂಗಳೂರು ನಾಯಿ ಮಾಲೀಕರಿಗೆ ಶಾಕ್: ಲೈಸೆನ್ಸ್, ಮೈಕ್ರೋ ಚಿಪ್ ಕಡ್ಡಾಯ; ರೂಲ್ಸ್ ಬ್ರೇಕ್ ಮಾಡಿದ್ರೆ ಜೈಲು ಫಿಕ್ಸ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿ ಹಾಗೂ ಸಾಕು ನಾಯಿಗಳ ದಾಳಿಯ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ಹೆಜ್ಜೆ ಇಟ್ಟಿದೆ. ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಅನ್ವಯ ಪಾಲಿಕೆಯು ಸಾಕು ನಾಯಿಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು (ಬೈಲಾ) ಜಾರಿಗೆ ತಂದಿದ್ದು, ಶ್ವಾನ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ. ಇನ್ನು ಮುಂದೆ ಪಾಲಿಕೆಯ ಹೊಸ ರೂಲ್ಸ್ ಉಲ್ಲಂಘಿಸಿ ಮನಬಂದಂತೆ ನಾಯಿ ಸಾಕಿದರೆ, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಮತ್ತು ಜೈಲು ಶಿಕ್ಷೆಗೂ ಗುರಿಯಾಗಬೇಕಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತರು 5 ನಗರಪಾಲಿಕೆ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಏನೆಲ್ಲಾ ಹೊಸ ರೂಲ್ಸ್ ಜಾರಿಗೆ ಬಂದಿದೆ?
1960 ರ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಪ್ರಕಾರ ಜಿಬಿಎಯ ಪಶುಪಾಲನಾ ವಿಭಾಗ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಬೆಂಗಳೂರಿನಲ್ಲಿ ನಾಯಿ ಸಾಕುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಪ್ರಾಧಿಕಾರದಿಂದ 'ಪೆಟ್ ಲೈಸೆನ್ಸ್' (Pet License) ಪಡೆಯಲೇಬೇಕು. ವಾರ್ಷಿಕವಾಗಿ ನಿಗದಿತ ಶುಲ್ಕ ಪಾವತಿಸಿ ಈ ಲೈಸೆನ್ಸ್ ಅನ್ನು ನವೀಕರಣ ಮಾಡಿಕೊಳ್ಳುವುದು ಕಡ್ಡಾಯ.

ಪ್ರಮುಖವಾಗಿ, ಪ್ರತಿ ಸಾಕು ನಾಯಿಗೆ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲಿ 'ಮೈಕ್ರೋ ಚಿಪ್' (Microchip) ಅಳವಡಿಸಲೇಬೇಕು. ಈ ಮೈಕ್ರೋ ಚಿಪ್‌ನಲ್ಲಿ ನಾಯಿಯ ವಯಸ್ಸು, ತಳಿ ಮತ್ತು ಮಾಲೀಕರ ಸಂಪರ್ಕ ವಿವರಗಳಿರುತ್ತವೆ, ಇದರಿಂದ ನಾಯಿ ಕಳೆದುಹೋದರೆ ಅಥವಾ ರಸ್ತೆಗೆ ಬಿಟ್ಟರೆ ಸುಲಭವಾಗಿ ಪತ್ತೆಹಚ್ಚಬಹುದು. ಜೊತೆಗೆ, ಪ್ರತಿ ವರ್ಷ ನಾಯಿಗೆ ರೇಬಿಸ್ ಲಸಿಕೆ (Rabies Vaccine) ಹಾಕಿಸಿ, ನೋಂದಾಯಿತ ಪಶು ವೈದ್ಯರಿಂದ ದೃಢೀಕರಣ ಪತ್ರ ಪಡೆಯಬೇಕು. 12 ತಿಂಗಳಿಗಿಂತ ಮೇಲ್ಪಟ್ಟ ನಾಯಿಗಳಿಗೆ ಕಡ್ಡಾಯವಾಗಿ ಸಂತಾನಹರಣ ಚಿಕಿತ್ಸೆ ಮಾಡಿಸಿರಬೇಕು.
ಮಾರಕ ತಳಿಗಳಿಗೆ ನಿಷೇಧ; 3 ನಾಯಿಗಳಿಗಷ್ಟೇ ಅವಕಾಶ
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕಚ್ಚುವ ಮತ್ತು ಕ್ರೂರ ಸ್ವಭಾವದ ಕೆಲವು ವಿದೇಶಿ ತಳಿಯ ನಾಯಿಗಳ ಸಾಕಾಣಿಕೆಯನ್ನು ನಗರದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೆಯೇ, ಒಂದು ಮನೆಯಲ್ಲಿ ಗರಿಷ್ಠ ಮೂರು ನಾಯಿಗಳನ್ನು ಮಾತ್ರ ಸಾಕಲು ಅವಕಾಶ ನೀಡಲಾಗಿದೆ.
ನೆರೆಹೊರೆಯವರಿಗೆ ತೊಂದರೆ ಆಗದಂತೆ ನಾಯಿ ಸಾಕಬೇಕು. ಒಂದು ವೇಳೆ ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಿದರೆ, ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದು ಪ್ರಾಣಿ ದಯಾ ಕೇಂದ್ರಗಳಿಗೆ ರವಾನಿಸಲಿದ್ದಾರೆ. ಇದಲ್ಲದೆ, ನಾಯಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ವಾಕಿಂಗ್‌ಗೆ ಕರೆದೊಯ್ಯುವಾಗ ಕಡ್ಡಾಯವಾಗಿ ಕುತ್ತಿಗೆಗೆ ಹಗ್ಗ (Leash) ಮತ್ತು ಮಾಸ್ಕ್ ಹಾಕಿರಬೇಕು. ವಾಕಿಂಗ್ ವೇಳೆಯಲ್ಲಿ ರಸ್ತೆಯಲ್ಲಿ ನಾಯಿ ಗಲೀಜು ಮಾಡಿದರೆ, ಅದನ್ನು ಮಾಲೀಕರೇ ಸ್ವಚ್ಛಗೊಳಿಸಬೇಕು.
ಜಿಬಿಎ ವಿರುದ್ಧ ಶ್ವಾನ ಪ್ರಿಯರ ಆಕ್ರೋಶ
ಜಿಬಿಎಯ ಈ ದಿಢೀರ್ ಆದೇಶಕ್ಕೆ ಬೆಂಗಳೂರಿನಾದ್ಯಂತ ಶ್ವಾನ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾವು ಮನೆಯಲ್ಲಿ ನಾಯಿಗಳನ್ನು ಪ್ರಾಣಿಗಳಂತೆ ನೋಡುವುದಿಲ್ಲ, ಬದಲಾಗಿ ನಮ್ಮದೇ ಮಕ್ಕಳಂತೆ ಪೋಷಣೆ ಮಾಡುತ್ತೇವೆ. ಪ್ರಾಣಿ ದಯೆ ಹೊಂದಿರುವ ಹಲವರ ಮನೆಗಳಲ್ಲಿ 7-8 ಬೀದಿ ನಾಯಿಗಳಿಗೆ ಆಶ್ರಯ ನೀಡಲಾಗಿದೆ. ಕೇವಲ 3 ನಾಯಿಗಳನ್ನು ಮಾತ್ರ ಸಾಕಬೇಕು ಎನ್ನುವ ನಿಯಮ ಅವೈಜ್ಞಾನಿಕ ಮತ್ತು ಅಮಾನವೀಯ. ಈ ಕೂಡಲೇ ಜಿಬಿಎ ತನ್ನ ಆದೇಶವನ್ನು ಹಿಂಪಡೆಯಬೇಕು. ಇಲ್ಲವಾದರೆ ಪಾಲಿಕೆ ಆಯುಕ್ತರ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುತ್ತೇವೆ" ಎಂದು ಎಚ್ಚರಿಸಿದ್ದಾರೆ.












Click it and Unblock the Notifications