ಬೆಂಗಳೂರು ಉತ್ತರ ಪಾಲಿಕೆಯ 7 ವಿಭಾಗಗಳಲ್ಲಿ ಕಸ ನಿರ್ವಹಣೆಗೆ 'ಬ್ಲಾಕ್‌ವಾರು ಮೈಕ್ರೋ ಪ್ಲಾನಿಂಗ್', ಏನಿದು?
ಬೆಂಗಳೂರು: ಜಿಬಿಎ ವ್ಯಾಪ್ತಿಯ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಏಳು ವಿಭಾಗಗಳಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸಲು 'ಬ್ಲಾಕ್‌ವಾರು ಮೈಕ್ರೋ ಪ್ಲಾನಿಂಗ್' ಅನುಷ್ಠಾನಗೊಳಿಸಲಾಗುತ್ತಿದೆ. ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ಆಟೋ ಟಿಪ್ಪರ್‌ಗಳ ಮಾರ್ಗ ನಿಗದಿ, ಪೌರಕಾರ್ಮಿಕರ ಬೀದಿ ಮ್ಯಾಪಿಂಗ್ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ (BWG) ನಿರ್ವಹಣೆಗೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಸೋಮವಾರ ಪೊಮ್ಮಲ ಸುನೀಲ್ ಕುಮಾರ್ ಅವರ ನಿರ್ದೇಶನ ಮೇರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಎರಡನೇ ವಿಶೇಷ ಫೋನ್-ಇನ್ ಕಾರ್ಯಕ್ರಮ ನಡೆಯಿತು. ಈ ವೇಳೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ನಾಗರಿಕರ ಸಮಸ್ಯೆಗಳ ಅಹವಾಲುಗಳು ಸಲ್ಲಿಕೆಯಾಗಿವೆ. ಅವುಗಳ ಪರಿಹಾರ ಕುರಿತು ಮಾತನಾಡುವ ವೇಳೆ 'ಬ್ಲಾಕ್‌ವಾರು ಮೈಕ್ರೋ ಪ್ಲಾನಿಂಗ್' ಬಗ್ಗೆ ಪ್ರಸ್ತಾಪಿಸಲಾಯಿತು.

ಇನ್ನೂ ಕಸ ಸಂಗ್ರಹಣೆ ವಾಹನಗಳು ಆಗಮಿಸದಿರುವುದು, ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು ಹಾಗೂ ರಸ್ತೆ ಸ್ವಚ್ಛತೆ ಕೈಗೊಳ್ಳದಿರುವುದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಿದ್ದಾರೆ. ಅವುಗಳ ವಿವರ ಇಲ್ಲಿದೆ.
ಸ್ವೀಕೃತವಾದ ಅಹವಾಲುಗಳು
ನೇರ್ ಫೋನ್ ಇನ್ ಕಾರ್ಯಕ್ರಮದಲ್ಲಿ ಕಸ ಸಂಗ್ರಹಣೆ ವಾಹನ ಆಗಮಿಸದಿರುವ ಬಗ್ಗೆ ಹೆಚ್ಚಿನ ದೂರುಗಳು ಕೇಳಿ ಬಂದಿವೆ. ಅದೇ ರೀತಿ ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು, ರಸ್ತೆ ಗುಡಿಸುವ ಕಾರ್ಯ ಕೈಗೊಳ್ಳದಿರುವ ಕುರಿತು ಒಂದಷ್ಟು ಅಹವಾಲುಗಳನ್ನು ಪಾಲಿಕೆ ಆಯುಕ್ತರು ಸ್ವೀಕರಿಸಿದ್ದಾರೆ. ಕಸ ಸಂಗ್ರಹಣೆ ವಾಹನಗಳ ಸೇವೆಗೆ ಸಂಬಂಧಿಸಿದ ದೂರುಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ.
ಅಹವಾಲುಗಳ ವಿಲೇವಾರಿಗೆ ಕ್ರಮ
ಸ್ವೀಕೃತ ಅಹವಾಲುಗಳನ್ನು 'ಸಹಾಯ 2.0' ವ್ಯವಸ್ಥೆಯಲ್ಲಿ ದಾಖಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗುತ್ತಿದೆ. ಅಹವಾಲುಗಳ ವಿಲೇವಾರಿ ಪ್ರಗತಿಯನ್ನು ಪರಿಶೀಲಿಸಿ, ಅವುಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.
ಪ್ರತಿ ಮಂಗಳವಾರ ಘನತ್ಯಾಜ್ಯ ನಿರ್ವಹಣೆಗೆ ವಿಶೇಷ ಫೋನ್-ಇನ್
ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ವಿಶೇಷ ಫೋನ್-ಇನ್ ಕಾರ್ಯಕ್ರಮ ನಡೆಸಲಾಗುತ್ತದೆ. ಕಸ ಸಂಗ್ರಹಣೆ ವಾಹನಗಳ ಸಮಯ, ವಾಹನಗಳು ಆಗಮಿಸದಿರುವುದು, ಪೌರಕಾರ್ಮಿಕರ ಸೇವೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಾರ್ವಜನಿಕರು ಈ ಕಾರ್ಯಕ್ರಮದ ಮೂಲಕ ಪಾಲಿಕೆಯ ಗಮನಕ್ಕೆ ತರಬಹುದು.
ಇತರೆ ನಾಗರಿಕ ಸಮಸ್ಯೆಗಳಿಗೆ ಪ್ರತಿ ಶುಕ್ರವಾರ ಆಯುಕ್ತರ ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಂಡು, ನಗರವನ್ನು ಸ್ವಚ್ಛವಾಗಿಡುವ ಕಾರ್ಯದಲ್ಲಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಮನವಿ ಮಾಡಿದೆ.
ಈ ಕಾರ್ಯಕ್ರಮದಲ್ಲಿ ಅಪರ ಆಯುಕ್ತರು (ಕಂದಾಯ - ಪ್ರಭಾರ) ಹಾಗೂ ಜಂಟಿ ಆಯುಕ್ತರಾದ ಪಲ್ಲವಿ, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಸೋಮಶೇಖರ, DGM ರಶ್ಮಿ, AGM ಗಳು ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.


Click it and Unblock the Notifications
